ಬೆಂಗಳೂರು: ತೂಗಿ ಅಳೆದು ಹಲವು ಲೆಕ್ಕಾಚಾರ ನಡೆಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆಗೆ ಮುಂದಾಗಿದ್ದಾರೆ.

ಪಕ್ಷದ ಉಳಿವಿವಾಗಿ ತಲೆ ಕೊಡುತ್ತಿದ್ದೇನೆ. ರಾಮನಗರ, ಚನ್ನಪಟ್ಟಣ ಜನತೆ ಅನ್ಯತಾ ಭಾವಿಸಬೇಡಿ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳುವ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ.

ಜೆಡಿಎಸ್‌ ಕೋರ್‌ ಕಮಿಟಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ನಾನು ಮಂಡ್ಯದಿಂದ ಅನಿವಾರ್ಯವಾಗಿ ಕಣಕ್ಕಿಳಿಯುವ ಬಗ್ಗೆ ಚನ್ನಪಟ್ಟಣ ಜನತೆಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಇದಕ್ಕೆ ಚನ್ನಪಟ್ಟಣ ಮುಖಂಡರು ಸಹಮತವನ್ನು ವ್ಯಕ್ತಪಡಿಸಿದ್ದಾರೆ. ನಾವು ಇವತ್ತು ನೆಲ‌ಕಚ್ಚಿದ್ದೇವೆ, ಮತ್ತೆ ಪುಟಿದೇಳಬೇಕು. ನಮ್ಮಲ್ಲಿ ಲೋಪದೋಷಗಳಿದ್ದು, ಅದನ್ನು ಸರಿಪಡಿಸಿಕೊಳ್ಳುತ್ತೇವೆ. ನನ್ನ ಪಕ್ಷದ ಭವಿಷ್ಯ, ಪಕ್ಷದ ಹೃದಯ ಭಾಗ ಮಂಡ್ಯದ ಜನರ ಅಪೇಕ್ಷೆಯಂತೆ ಪಕ್ಷವನ್ನು ಗಟ್ಟಿಗೊಳಿಸಲು ಈ ತೀರ್ಮಾನ ಮಾಡಿದ್ದೇನೆ. ಮಂಡ್ಯ ಲೋಕಸಭಾ ಕ್ಷೇತ್ರದ ಮುಖಂಡರ ಸಭೆ ಬಳಿಕ ತಮ್ಮ ಸ್ಪರ್ಧೆಯ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದೇನೆ ಎಂದು ಹೇಳಿದರು.

ಪಕ್ಷದ ಉಳಿವಿಗಾಗಿ ನನ್ನ ತೀರ್ಮಾನ
ಕರ್ನಾಟಕ ಲೋಕಸಭಾ ಕ್ಷೇತ್ರಗಳಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರಬೇಕು ಎಂಬ ಗುರಿಯನ್ನು ಹಾಕಿಕೊಂಡಿದ್ದೇವೆ. ಮಂಡ್ಯ ಜಿಲ್ಲೆಯ ಕಾರ್ಯಕರ್ತರ ತೀರ್ಮಾನಕ್ಕೆ ಗೌರವ ಕೊಡುವುದು ನಮ್ಮ ಕರ್ತವ್ಯವಾಗಿದೆ. ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಾಯ ಮಾಡಲಾಗಿತ್ತು. ಆದರೆ, ಅವರು ಸ್ಪರ್ಧೆಗೆ ನಿರಾಕರಿಸಿದ್ದಾರೆ. ನಾನು ಈಗಾಗಲೇ ನೋವು ತಿಂದಿದ್ದೇನೆ. ಹೀಗಾಗಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ನನಗೆ ಸಿ.ಎಸ್. ಪುಟ್ಟರಾಜು ಅಥವಾ ನಿಖಿಲ್‌ರನ್ನು ಕಣಕ್ಕಿಳಿಸಬೇಕು ಎಂಬ ಆಸೆ ಇತ್ತು. ಆದರೆ, ಅವರು ಅವರು ಸ್ಪರ್ಧೆ ಸಾಧ್ಯವಿಲ್ಲ ಎಂದು ಕಠಿಣ ನಿರ್ಣಯ ಮಾಡಿಕೊಂಡಿದ್ದಾರೆ. ಆ ಜಿಲ್ಲೆಯ ಜನರ ಋಣವನ್ನು ತೀರಿಸಬೇಕು. ಇಡಿ ನಾಡೇ ನನ್ನ ಕರ್ಮ ಭೂಮಿಯಾಗಿದೆ. ಹಾಗಂತ ರಾಮನಗರ ಬಿಟ್ಟು ನಾನು ಹೋಗುವುದಿಲ್ಲ. ಈ ಪಕ್ಷದ ಉಳಿವಿಗಾಗಿ ಒಂದು ತೀರ್ಮಾನವನ್ನು ಕೈಗೊಳ್ಳಬೇಕಾಗಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಕೋಲಾರ ಅಭ್ಯರ್ಥಿಗಳ ಶಾರ್ಟ್‌ ಲಿಸ್ಟ್‌ ಆಗಿದೆ
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮೂವರು ಅಭ್ಯರ್ಥಿಗಳ ಜನರ ಶಾರ್ಟ್ ಲಿಸ್ಟ್ ಮಾಡಿದ್ದೇವೆ. ಸಮೃದ್ಧಿ ಮಂಜುನಾಥ್, ನಿಸರ್ಗ ನಾರಾಯಣಸ್ವಾಮಿ, ರಮೇಶ್ ಬಾಬು ಅವರ ಹೆಸರು ಪಟ್ಟಿಯಲ್ಲಿದೆ. ಈಗಾಗಲೇ ಹಾಲಿ ಸಂಸದರಾದ ಮುನಿಸ್ವಾಮಿ ಅವರು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಕೋಲಾರವನ್ನು ಗೆಲ್ಲಿಸಿಕೊಂಡು ಬರಬೇಕಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಮಂಡ್ಯ, ರಾಮನಗರ ನನ್ನ ಹೃದಯದಲ್ಲಿದೆ
ರಾಮನಗರ, ಮಂಡ್ಯ ಜಿಲ್ಲೆಗಳು ಜೆಡಿಎಸ್‌ನ ಹೃದಯ ಭಾಗ ಆಗಿದೆ. ನಾನು ಭೂಮಿಗೆ ಹೋಗುವವರೆಗೂ ನನ್ನ ಹೃದಯಲ್ಲಿರುತ್ತದೆ. ಮಂಡ್ಯಕ್ಕೆ ಬರಬೇಕು ಅಂತ ಜನರು ಒತ್ತಾಯ ಮಾಡುತ್ತಿದ್ದಾರೆ. ಕಳೆದ ಭಾರಿ ಮಂಡ್ಯ ಸೋಲು ನನ್ನ ಪ್ರಕಾರ ಸೋಲು ಅಲ್ಲ. ಅಂಕಿ- ಅಂಶಗಳಲ್ಲಿ ಸೋಲು ಆಗಿರಬಹುದು. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಅನ್ನು ಮುಗಿಸಿದ್ದೇವೆ ಎಂದು ಕೆಲವರು ಹೇಳುತ್ತಾ ಇದ್ದಾರೆ. ಜೆಡಿಎಸ್‌ ಪುಟಿದೇಳುತ್ತದೆ ಎಂಬುದನ್ನು ನನ್ನ‌ ಹಳೇ ಸ್ನೇಹಿತರಿಗೆ ಹೇಳಲು ಬಯಸುತ್ತೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.