ಬೆಳಗಾವಿ : ಲೋಂಡಾ ಬಳಿ ರೈಲ್ವೆ ಸಿಬ್ಬಂದಿಯನ್ನು ಕೊಲೆ ಮಾಡಿ ಪರಾರಿಯಾದವನ ರೇಖಾಚಿತ್ರವನ್ನು ಇದೀಗ ಬೆಳಗಾವಿ ರೈಲ್ವೆ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಗುರುವಾರ ಸಂಜೆ 4:00 ರ ಸುಮಾರಿಗೆ ಖಾನಾಪುರ ತಾಲೂಕಿನ ಲೋಂಡಾ ಬಳಿ ಸಂಚರಿಸುತ್ತಿದ್ದ ಪುದುಚೇರಿ-ದಾದರ್ ಎಕ್ಸ್ ಪ್ರೆಸ್ ರೈಲಿನಲ್ಲಿ ರೈಲ್ವೆ ಸಿಬ್ಬಂದಿಯನ್ನು ಇರಿದು ಕೊಲೆಗೈಯ್ದು ನಾಲ್ವರ ಮೇಲೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಇದುವರೆಗೆ ಪತ್ತೆಯಾಗಿಲ್ಲ. ಆದರೆ, ಆತ ಪರಾರಿಯಾದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹಲ್ಲೆಗೊಳಗಾದ ಸಿಬ್ಬಂದಿ ಆರೋಪಿಯನ್ನು ಗುರುತಿಸಿದ್ದು ಅವನ ಮುಖದ ರೇಖಾಚಿತ್ರ ಸಿದ್ಧಪಡಿಸಲಾಗಿದೆ.

ಆರೋಪಿ ಮಾಹಿತಿ ನೀಡಲು ಕೋರಿದ ರೈಲ್ವೆ ಪೊಲೀಸರು :
ಆರೋಪಿ 5 ಅಡಿ 3 ಇಂಚು ಎತ್ತರವಿದ್ದಾನೆ. 40ರಿಂದ 42 ವರ್ಷ ಇರಬಹುದು. ಕಪ್ಪು-ಬಿಳಿ ಮಿಶ್ರಿತ ತಲೆಗೂದಲು, ಸಾಧಾರಣ ಮೈಕಟ್ಟು, ಕಪ್ಪು ಬಣ್ಣ ಹೊಂದಿದ್ದಾನೆ. ಇವನ ಸುಳಿವು ಸಿಕ್ಕಲ್ಲಿ ಬೆಳಗಾವಿ ರೈಲ್ವೆ ಪೊಲೀಸ್‌ ಠಾಣೆ ಸಂಖ್ಯೆ 0831 2405273, 9480802127, 948080468 ನೀಡುವಂತೆ ಕೋರಲಾಗಿದೆ.

ಘಟನೆ :
ರೈಲ್ವೆ ಟಿಕೆಟ್ ಪರಿವೀಕ್ಷಕ ಅಶ್ರಫ್ ಕಿತ್ತೂರು ಟಿಕೆಟ್ ತಪಾಸಣೆ ಮಾಡುತ್ತಿದ್ದಾಗ ಮುಸುಕುಧಾರಿ ಪ್ರಯಾಣಿಕ ಚಾಕುವಿನಿಂದ ಅವರ ಮೇಲೆ ಹಲ್ಲೆಗೈದಿದ್ದ. ಅವರ ನೆರವಿಗೆ ಬಂದಿದ್ದ ಸಿಬ್ಬಂದಿ ದೇವರುಷಿ ವರ್ಮ (23) ಅವರ ಮೇಲೆ ಚಾಕುವಿನಿಂದ ಇರಿದಿದ್ದರಿಂದ ವರ್ಮಾ ಮೃತಪಟ್ಟಿದ್ದರು. ಟಿಟಿಇ ಸೇರಿ ನಾಲ್ವರು ಗಾಯಾಳುಗಳು ಚಿಕಿತ್ಸೆ ಪಡೆದು ಇದೀಗ ಗುಣಮುಖರಾಗಿದ್ದಾರೆ.