ಬೆಳಗಾವಿ: ಬೈಕ್ ಸಮೇತ 100 ಅಡಿ ಪ್ರಪಾತಕ್ಕೆ ಬಿದ್ದಿದ್ದ ವ್ಯಕ್ತಿಯ ರಕ್ಷಣೆ ಮಾಡಲಾಗಿದೆ. ಖಾನಾಪುರ ತಾಲೂಕಿನ ಚಿಕಲೆ ಫಾಲ್ಸ್ ಬಳಿ ಘಟನೆ ನಡೆದಿದ್ದು, ಬೆಳಗಾವಿ ಕ್ಯಾಂಪ್‌ ಪ್ರದೇಶದ ವಿನಾಯಕ ಬುತ್ತುಲ್ಕರ್ ಎಂಬಾತ ಪ್ರಪಾತಕ್ಕೆ ಬಿದ್ದವ.

ವಿನಾಯಕ ತನ್ನ ಸ್ನೇಹಿತರ ಜತೆಗೆ ಚಿಕಲೆ ಫಾಲ್ಸ್ ನೋಡಲು ಹೋದಾಗ ಈ ಘಟನೆ ಸಂಭವಿಸಿದೆ. ಬೈಕ್‌ನಲ್ಲಿ ಹೋಗುವಾಗ ಆಯತಪ್ಪಿ 100 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದ. ಈ ಬಗ್ಗೆ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಖಾನಾಪುರ ಸಿಪಿಐ ರಾಮಚಂದ್ರ ನಾಯಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಪ್ರಪಾತಕ್ಕೆ ಬಿದ್ದು ನರಳಾಡುತ್ತಿದ್ದ ವಿನಾಯಕನನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ವಿನಾಯಕನ ಮುಖ ಹಾಗೂ ಕಾಲಿಗೆ ಸಣ್ಣಪುಟ್ಟ ಗಾಯವಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರು ತಮ್ಮ ಪ್ರಾಣವನ್ನು ಪಟ್ಟಕ್ಕಿಟ್ಟು ಗೆಳೆಯನನ್ನು ಕಾಪಾಡಿದ್ದಕ್ಕೆ ಯುವಕರು ಧನ್ಯವಾದ ಸಲ್ಲಿಸಿದ್ದಾರೆ. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.