ಮಂಗಳೂರು :ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ದಕ್ಷಿಣ ಕನ್ನಡ ಈಗ ಬಿಜೆಪಿಯ ಭದ್ರವಾದ ನೆಲೆ. ಹಿಂದಿನ ಗತ ವೈಭವವನ್ನು ಮರು ಸ್ಥಾಪಿಸಬೇಕು ಎಂದು ಕಾಂಗ್ರೆಸ್ ಸತತವಾಗಿ ಪ್ರಯತ್ನ ನಡೆಸುತ್ತಲೇ ಬಂದಿದೆ. ಆದರೆ ಕಮಲ ಭದ್ರವಾಗಿ ಬೇರೂರಿರುವುದರಿಂದ ಅದು ಸಾಧ್ಯವಾಗುತ್ತಿಲ್ಲ. ಆದರೆ ಈ ವರ್ಷ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಹೊಸ ಮುಖಕ್ಕೆ ಟಿಕೆಟ್ ನೀಡಲು ಮುಂದಾಗಿದೆ. ಈ ಮೂಲಕ ಕಾಂಗ್ರೆಸ್ ಅರಳಿಸಲು ಶತಪ್ರಯತ್ನ ನಡೆದಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಈ ಬಾರಿ ಬಿಜೆಪಿಯಂತೆ ಹೊಸ ಮುಖವನ್ನು ಕಣಕ್ಕೆ ಇಳಿಸಲು ತೀರ್ಮಾನಿಸಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ಆರ್. ಅವರ ಹೆಸರು ಅಂತಿಮಗೊಳಿಸಿರುವ ಬಗ್ಗೆ ಪಕ್ಷದ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಒಂದೆರಡು ದಿನಗಳಲ್ಲಿ ಪ್ರಕಟವಾಗುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಪದ್ಮರಾಜ್ ಘೋಷಣೆಯಾಗುವ ಸಾಧ್ಯತೆ ಹೇಳಲಾಗಿದೆ.

ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಪರಮಾಪ್ತರಾಗಿರುವ ಪದ್ಮರಾಜ್ ಅವರು ವೃತ್ತಿಯಲ್ಲಿ ವಕೀಲರು. ಬಿಲ್ಲವ ಸಮಾಜದ ಪ್ರಭಾವಿ ಮುಖಂಡರಾದ ಪದ್ಮರಾಜ್, ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯಲ್ಲಿ ಕೋಶಾಧಿಕಾರಿಯಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಸೇರಿದ್ದ ಪದ್ಮರಾಜ್ ಈಗ ಎಐಸಿಸಿ ಕಾರ್ಯದರ್ಶಿಯಾಗಿದ್ದಾರೆ. ಆಗ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್‌ಗೆ ಭಾರಿ ಪ್ರಯತ್ನ ನಡೆಸಿದ್ದರು. ಈ ಬಾರಿ ಲೋಕಸಭಾ ಚುನಾವಣೆಗೆ ಮಾಜಿ ಸಚಿವ
ವಿನಯ ಕುಮಾರ್‌ಸೊರಕೆ ಟಿಕೆಟ್‌ಗೆ ಯತ್ನಿಸಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಪದ್ಮರಾಜ್ ರತ್ತ ಹೈಕಮಾಂಡ್ ಒಲವು ವ್ಯಕ್ತಪಡಿಸಿದೆ ಎಂದು ಹೇಳಲಾಗಿದೆ.

ಬಿಜೆಪಿಯಿಂದ ನಿವೃತ್ತ ಯೋಧ, ಕ್ಯಾಪ್ಟನ್ ಬ್ರಿಜೇಶ್ ಚೌಟ ಕಣಕ್ಕೆ ಇಳಿದಿದ್ದು, ಹೀಗಾಗಿ ವೃತ್ತಿಯಲ್ಲಿ ವಕೀಲರಾಗಿರುವ ಪದ್ದರಾಜ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಯೋಜನೆ ರೂಪಿಸಿದೆ ಎನ್ನಲಾಗಿದೆ. ಬಿಜೆಪಿಯ ಬಂಟ ಅಭ್ಯರ್ಥಿಗೆ ಪ್ರಭಾವಿ ಬಿಲ್ಲವ ಮುಖಂಡನ ಮೂಲಕ ಠಕ್ಕರ್ ನೀಡಲು ಕಾಂಗ್ರೆಸ್ ತಂತ್ರ ರೂಪಿಸಿದೆ.

ಉಡುಪಿಯಲ್ಲಿ ಬಂಟ ಜಯಪ್ರಕಾಶ್ ಹೆಗ್ಡೆ ಅವರನ್ನು ಕಣಕ್ಕಿಳಿಸಿ, ದ.ಕ. ಜಿಲ್ಲೆಯಲ್ಲಿ ಬಿಲ್ಲವ ಸಮುದಾಯದ ಪದ್ಮರಾಜ್‌ಗೆ ಟಿಕೆಟ್ ನೀಡುವ ಲೆಕ್ಕಾಚಾರವನ್ನು ಹೈಕಮಾಂಡ್ ಹೊಂದಿರುವ ಬಗ್ಗೆ ಮೂಲಗಳು ಹೇಳುತ್ತಿವೆ. ದ.ಕ.ಜಿಲ್ಲೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅಲ್ಲದೆ, ರಮಾನಾಥ ರೈ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು.

ರಾಜ್ಯ ಬಿಜೆಪಿ ಹೊಸ ಮುಖವಾಗಿ ಬ್ರಿಜೇಶ ಚೌಟ ಅವರನ್ನು ಆಯ್ಕೆ ಮಾಡಿದೆ. ಬಿಜೆಪಿ ಎರಡನೇ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 15 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸುವ ಸಾಧ್ಯತೆಯಿದೆ.

ಇತ್ತ ಕಾಂಗ್ರೆಸಿನಲ್ಲಿ ಮಾಜಿ ಸಂಸದ ವಿನಯ ಕುಮಾರ್ ಸೊರಕೆ ಮತ್ತು ಪದ್ಮರಾಜ್ ಹೆಸರು ಮುಂಚೂಣಿಯಲ್ಲಿತ್ತು. ಉಡುಪಿಯಲ್ಲೇ ಸಕ್ರಿಯ ರಾಜಕೀಯದಲ್ಲಿದ್ದ ವಿನಯ ಕುಮಾರ್ ಸೊರಕೆ ಅವರಿಗೆ ಟಿಕೆಟ್ ನೀಡುವುದಕ್ಕೆ ಮಂಗಳೂರಿನ ಕಾಂಗ್ರೆಸಿಗರಿಂದಲೇ ವಿರೋಧ ಇದೆ. ಸೊರಕೆ ಸ್ಪರ್ಧಿಸಿದರೆ, ಸೋಲಿನ ಅಂತರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಅದರಿಂದ ರಾಜ್ಯ ಸರಕಾರಕ್ಕೆ ಹಿನ್ನಡೆಯಾಗಲಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಹೀಗಾಗಿ ಬಿಲ್ಲವ ಮುಂದಾಳು, ಬೆಳದಿಂಗಳು ಟ್ರಸ್ಟ್ ಮೂಲಕ ಸಾಮಾಜಿಕ ಕಾರ್ಯ ನಡೆಸುತ್ತಿರುವ ಪದ್ಮರಾಜ್ ರಾಮಯ್ಯ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ಪದ್ಮರಾಜ್ ಅವರನ್ನು ಕಣಕ್ಕಿಳಿಸುವುದಕ್ಕೆ ರಾಜ್ಯ ಮತ್ತು ಕೇಂದ್ರ ನಾಯಕರು ಒಪ್ಪಿಗೆ ನೀಡಿದ್ದು ಮೂರನೇ ಪಟ್ಟಿಯಲ್ಲಿ ಹೆಸರು ಪ್ರಕಟವಾಗಲಿದೆ ಎನ್ನುವ ಮಾಹಿತಿ ಲಭ್ಯ ಇದೆ.