ಭುವನೇಶ್ವರ: ಒಡಿಸ್ಸಾದ ಐತಿಹಾಸಿಕ ಪುರಿ ಜಗನ್ನಾಥ ರಥಯಾತ್ರೆ ರವಿವಾರ ಆರಂಭಗೊಂಡಿದೆ. ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ರಥಗಳಿಗೆ ಪೂಜೆ ಸಲ್ಲಿಸಿದ ನಂತರ ಸಂಜೆ 5.30 ಕ್ಕೆ ರಥಗಳ ಮೆರವಣಿಗೆ ಆರಂಭವಾಯಿತು.

ಪ್ರತಿ ವರ್ಷ ಒಂದು ದಿನ ಮಾತ್ರ ರಥಯಾತ್ರೆ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಲೆಕ್ಕಾಚಾರದ ಅನ್ವಯ ಎರಡು ದಿನ ಯಾತ್ರೆ ನಡೆಯುತ್ತಿದೆ. ಇದಕ್ಕೂ ಮೊದಲು 53 ವರ್ಷಗಳ ಹಿಂದೆ ಅಂದರೆ 1971ರಲ್ಲಿ ಇದೇ ರೀತಿ ಎರಡು ದಿನಗಳ ಕಾಲ ರಥಯಾತ್ರೆ ನಡೆದಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ರಘುಬರ್ ದಾಸ್, ಒಡಿಸ್ಸಾ ಮುಖ್ಯಮಂತ್ರಿ ಮೋಹನ್ ಮಾಝೀ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಅವರು ರಥವನ್ನು ಎಳೆದು ಯಾತ್ರೋತ್ಸವಕ್ಕೆ ಚಾಲನೆ ನೀಡಿದರು. ರಾಷ್ಟ್ರಪತಿಗಳು ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದರು. ಜಗನ್ನಾಥ ದೇಗುಲದಿಂದ ಮೂರು ಕಿಲೋಮೀಟರ್ ದೂರದ ಗುಂಡಿಚಾ ದೇಗುಲದ ಮಾರ್ಗವಾಗಿ ಯಾತ್ರೆ ಸಾಗಿದೆ. ಜೈ ಜಗನ್ನಾಥ ಘೋಷಣೆ ಅನುರಣಿಸಿದೆ. ಸುಮಾರು 10 ಲಕ್ಷಕ್ಕೂ ಅಧಿಕ ಭಕ್ತರು ರಥೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು.