ಲಕ್ನೋ : ಉತ್ತರ ಪ್ರದೇಶದ ಪೊಲೀಸರು ಅಪ್ಪಟ ಭಕ್ತರ ವೇಷದಲ್ಲಿ ಜನರನ್ನು ನಿಯಂತ್ರಿಸುತ್ತಿದ್ದಾರೆ.
ವಾರಣಾಸಿಯ ಕಾಶಿ ವಿಶ್ವನಾಥ ದೇವಾಸ್ಥಾನದ ಒಳಗೆ ಜನಸಂದಣಿಯನ್ನು ನಿಯಂತ್ರಿಸಲು ಉತ್ತರ ಪ್ರದೇಶದ 6 ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು. ಇವರಲ್ಲಿ ಇಬ್ಬರು ಮಹಿಳೆಯರು ಮತ್ತು ನಾಲ್ಕು ಮಂದಿ ಪುರುಷರಿದ್ದಾರೆ. ಆದರೆ ಈ ಸಿಬ್ಬಂದಿಗಳು ಸಮವಸ್ತ್ರದ ಬದಲು ಹಣೆಯ ಮೇಲೆ ವಿಭೂತಿ, ಕುತ್ತಿಗೆಗೆ ರುದ್ರಾಕ್ಷಿಮಾಲಾ, ಕಿತ್ತಳೆ ಬಣ್ಣದ ಕುರ್ತಾ ಧೋತಿ ಧರಿಸಿದ್ದಾರೆ. ಪೊಲೀಸರ ಈ ಉಪಕ್ರಮ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರಿಂದ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ.
ದೇವಾಲಯದಲ್ಲಿ ಕರ್ತವ್ಯ ನಿರ್ವಹಿಸುವುದು ಬೇರೆ ಕಡೆಗಿಂತ ವಿಭಿನ್ನವಾಗಿರುತ್ತದೆ. ಪೊಲೀಸರು ಅಲ್ಲಿ ಜನಸಂದಣಿಯನ್ನು ನಿಯಂತ್ರಿಸಬೇಕು. ಹಾಗೆಯೇ ಗುಂಪನ್ನು ನಿಯಂತ್ರಿಸಲು ಆಗಾಗ ಜನರ ಮೇಲೆ ಬಲಪ್ರಯೋಗ ಮಾಡಬೇಕಾಗುತ್ತದೆ. ಆಗ ಜನರು ಪೊಲೀಸರನ್ನು ದೂರುತ್ತಾರೆ. ಭಕ್ತರಿಂದ ಈ ಬಗ್ಗೆ ದೂರುಗಳು ಹೆಚ್ಚಿದ ಬಳಿಕ ಈ ಉಪಕ್ರಮವನ್ನು ಪ್ರಾರಂಭಿಸಲಾಗಿದೆ. ಪೊಲೀಸರು ಅರ್ಚಕರಂತೆ ಕಂಡರೆ ಜನರು ಸೂಚನೆಗಳನ್ನು ಪಾಲಿಸುತ್ತಾರೆ. ಹಾಗಾಗಿ ಜನಸಂದಣೆಯನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಾರಣಾಸಿಯ ಪೊಲೀಸ್ ಕಮಿಷನರ್ ಮೋಹಿತ್ ಅಗರ್ವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಪೊಲೀಸ್ ಸಿಬ್ಬಂದಿಗಳಿಗೆ ಮೂರು ದಿನಗಳ ತರಬೇತಿಯನ್ನು ನೀಡಿರುವುದಾಗಿ ತಿಳಿಸಿದ್ದಾರೆ. ಪ್ರಾಯೋಗಿಕವಾಗಿ ಇದನ್ನು 15 ದಿನಗಳ ಕಾಲ ನಡೆಸಲಾಗುವುದು. ಇದರ ಸಾಧಕ ಬಾಧಕ ಪರಿಶೀಲಿಸಿ ಮುಂದುವರಿಸಲಾಗುವುದು ಎಂಬುದಾಗಿ ಅವರು ತಿಳಿಸಿದ್ದಾರೆ.