ಉಡುಪಿ : ನಗರದ ಶಾರದಾ ಕಲ್ಯಾಣ ಮಂಟಪ ರಸ್ತೆಯಲ್ಲಿ ನಿರ್ಮಿಸಲಾದ ಯಕ್ಷಗಾನ ಕಲಾರಂಗದ ನೂತನ ಕಟ್ಟಡ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‌ಮೆಂಟ್, ಟೆನಿಂಗ್ ಮತ್ತು ರಿಸರ್ಚ್ ಸೆಂಟರ್ (ಐವೈಸಿ) ಏ.21ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ತಿಳಿಸಿದರು.

ಏ.21ರಂದು ಬೆಳಗ್ಗೆ 9 ಗಂಟೆಗೆ ಕೃಷ್ಣ ಮಠದಿಂದ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರು ಮತ್ತು ಶ್ರೀ ಸುಂದ್ರತೀರ್ಥರು ಅನುಗ್ರಹಮಂತ್ರಾಕ್ಷತೆ ಹಾಗೂ ಕೃಷ್ಣ ಪ್ರತಿಮೆ ಪಡೆದು ಯಕ್ಷಗಾನ ಪರಿಕರಗಳೊಂದಿಗೆ ನೂತನ ಕಟ್ಟಡಕ್ಕೆ ಸದಸ್ಯರು ಆಗಮಿಸಲಿದ್ದಾರೆ. 10 ಗಂಟೆಗೆ ನೂತನ ಕಟ್ಟಡದ ದ್ವಾರಪೂಜೆ ನಡೆಯಲಿದ್ದು, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥರು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು, ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ಅನುಗ್ರಹ ಸಂದೇಶ ನೀಡಲಿದ್ದಾರೆ.

ಪ್ರದರ್ಶನ ಸೇವೆ: ಮಧ್ಯಾಹ್ನ 3.30ಕ್ಕೆ ಹೊಸ
ಸಭಾಂಗಣದಲ್ಲಿ ಯಕ್ಷಗಾನ ಪ್ರದರ್ಶನ ಸೇವೆ ನಡೆಯಲಿದ್ದು, ನಂತರ ಕಟ್ಟಡದ ಹಿಂಭಾಗ ನಿರ್ಮಿಸಿದ ಶ್ರೀ ವಿಶ್ವೇಶತೀರ್ಥ ವೇದಿಕೆಯಲ್ಲಿ ಸಭಾ ಕಾರ್ಯಕ್ರಮವನ್ನು ಇನ್ಫೋಸಿಸ್ ಫೌಂಡೇಶನ್ ವಿಶ್ವಸ್ಥ ಸುನಿಲ್ ಕುರ್ಮಾ ಧಾರೇಶ್ವರ ಉದ್ಘಾಟಿಸಲಿದ್ದಾರೆ. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು, ಸೋದೆ ಶ್ರೀ ವಿಶ್ವವಲ್ಲಭ ತೀರ್ಥರು, ಅದಮಾರು ಶ್ರೀ ಈಶಪ್ರಿಯ ತೀರ್ಥರು ಅನುಗ್ರಹ ಸಂದೇಶ ನೀಡಲಿದ್ದಾರೆ. ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಂಬಲಪಾಡಿ ದೇವಸ್ಥಾನ ಧರ್ಮದರ್ಶಿ ಡಾ.ನಿ.ಬಿ. ವಿಜಯ ಶುಭಾಸಂಶನೆಗೈಯಲಿದ್ದಾರೆ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ. ಜಿ. ಶಂಕರ್ , ಉದ್ಯಮಿ ರಮೇಶ್ಚಂದ್ರ ಹೆಗ್ಡೆ ಮುಖ್ಯ ಅತಿಥಿಯಾಗಿರುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಕಲಾರಂಗ ಅಧ್ಯಕ್ಷ ಎಂ. ಗಂಗಾಧರ ರಾವ್, ಉಪಾಧ್ಯಕ್ಷ ಕಿಶನ್ ಹೆಗ್ಡೆ ಪಳ್ಳಿ, ಎಸ್.ವಿ.ಭಟ್, ವಿ.ಜಿ. ಶೆಟ್ಟಿ, ಪದಾಧಿಕಾರಿಗಳಾದ ನಾರಾಯಣ ಹೆಗಡೆ, ಸದಾಶಿವ ರಾವ್, ಭುವನಪ್ರಸಾದ್ ಹೆಗ್ಡೆ, ಅನಂತರಾಜ್ ಉಪಾಧ್ಯ, ಅಶೋಕ್ ಎಂ., ಮೊದಲಾದವರು ಹಾಜರಿದ್ದರು.