ಬೆಂಗಳೂರು :
ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್ ಎಚ್ ಸಿ) ಪೋರ್ಟಲ್ ನೀಡಿರುವ ವರದಿ ಪ್ರಕಾರ 2023 ಜನವರಿಯಿಂದ ನವೆಂಬರ್ ವರೆಗೆ 11 ತಿಂಗಳಲ್ಲಿ ಬೆಳಗಾವಿಯಲ್ಲಿ ಸುಮಾರು 2254 ಬಾಲಕಿಯರು ಗರ್ಭಿಣಿಯರಾಗಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 28,657 ಬಾಲಕಿಯರು ಗರ್ಭಿಣಿಯರಾಗಿದ್ದಾರೆ. ರಾಜ್ಯದಲ್ಲಿ ಬೆಂಗಳೂರಿನಲ್ಲಿ 2815 ಬಾಲ ಗರ್ಭಿಣಿಯರು ಇದ್ದಾರೆ. ವಿಜಯಪುರದಲ್ಲಿ 2004 ಬಾಲಕಿಯರು ಗರ್ಭಿಣಿಯರಾಗಿದ್ದರೆ ಉಡುಪಿಯಲ್ಲಿ ಕೇವಲ 56 ಬಾಲ ಗರ್ಭಿಣಿಯರ ಪ್ರಕರಣ ಬೆಳಕಿಗೆ ಬಂದಿವೆ.

ರಾಜ್ಯದಲ್ಲಿ ಗ್ರಾಮೀಣ ಮಟ್ಟದಿಂದ ರಾಜ್ಯಮಟ್ಟದ ವರೆಗೆ 59 ಸಾವಿರ ಬಾಲ ವಿವಾಹ ನಿಷೇಧಾಧಿಕಾರಿಗಳು ಇದ್ದಾರೆ. ಬಾಲ್ಯ ವಿವಾಹ ತಡೆಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಶಾರೀರಿಕ ಮತ್ತು ಬೌದ್ಧಿಕವಾಗಿ ಬೆಳವಣಿಗೆ ಆಗದೆ ವಿವಾಹ ಆಗುವ ಬಾಲಕಿಯರಿಗೆ ಹಲವು ಸ್ವರೂಪದ ಅನಾರೋಗ್ಯ ಕಾಡುತ್ತದೆ. ಗರ್ಭಿಣಿಯರಾದರೆ ರಕ್ತ ಹೀನತೆ ಹಾಗೂ ಪೌಷ್ಟಿಕಾಂಶ ಕೊರತೆ ಎದುರಾಗುತ್ತದೆ. ಅಪೌಷ್ಟಿಕತೆಯಿಂದ ಕೂಡಿದ ಮಕ್ಕಳು ಜನಿಸುವ ಸಾಧ್ಯತೆ ಇರುತ್ತದೆ. ಬಾಲಕಿಯರು ಗರ್ಭಿಣಿ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪೋಕ್ಸೋ ಕಾಯ್ದೆ ಅಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಬೇಕಿತ್ತು. ಆದರೆ ಆ ಕೆಲಸ ನಡೆದಿಲ್ಲ ಎಂದು ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ತಿಳಿಸಿದ್ದಾರೆ.