| Latest Version 9.0.7 |

National News

ತಿರುಮಲ: ಮೇ ತಿಂಗಳಲ್ಲಿ 12 ಲಕ್ಷ ಭಕ್ತರಿಂದ ಮುಡಿ ಸಮರ್ಪಣೆ

 

 

ತಿರುಪತಿ (ಆಂಧ್ರಪ್ರದೇಶ): ಇಲ್ಲಿನ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ ಮೇ ತಿಂಗಳಲ್ಲಿ 12 ಲಕ್ಷಕ್ಕೂ ಅಧಿಕ ಭಕ್ತರು ಮುಡಿ ಅರ್ಪಿಸಿದ್ದಾರೆ. ಕೂದಲು ಮಾರಾಟದ ಮೂಲಕ ಟಿಟಿಡಿ ವರ್ಷಕ್ಕೆ ₹150 ಕೋಟಿ ಗಳಿಸುತ್ತಿದೆ.

 

‘ಕಪ್ಪು ಬಂಗಾರ(ಕೂದಲು) ಸಂಗ್ರಹದಲ್ಲಿ ಭಾರಿ ಏರಿಕೆಯಾಗಿದೆ. ಮೇ 27ರವರೆಗೆ 12.4 ಲಕ್ಷ ಜನ ಮುಡಿ ಅರ್ಪಿಸಿದ್ದಾರೆ. 2024ರ ಮೇ ತಿಂಗಳಲ್ಲಿ 10.6 ಲಕ್ಷ ಮತ್ತು 2025ರ ಮೇ ತಿಂಗಳಿನಲ್ಲಿ 10.1 ಲಕ್ಷ ಜನ ಮುಡಿ ನೀಡಿದ್ದರು’ ಎಂದು ಟಿಟಿಡಿ ಗುರುವಾರ ಪ್ರಕಟಣೆ ನೀಡಿದೆ.

 

ಬೇಸಿಗೆ ರಜೆ ಮತ್ತು ವಾರಂತ್ಯದ ಕಾರಣಕ್ಕೆ ತಿರುಮಲಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಮೇ 18ರಿಂದ ಮೇ 23ರವರೆಗೆ ಪ್ರತಿದಿನ 50 ಸಾವಿರಕ್ಕೂ ಅಧಿಕ ಭಕ್ತರು ತಮ್ಮ ಕೂದಲನ್ನು ಹರಕೆಯ ರೂಪದಲ್ಲಿ ನೀಡಿದ್ದಾರೆ. ಮೇ 23ರಂದು 57,580 ಮಂದಿ ಮುಡಿ ಅರ್ಪಿಸಿದ್ದಾರೆ’ ಎಂದು ಟಿಟಿಡಿ ತಿಳಿಸಿದೆ.

 

269 ಮಹಿಳೆಯರು ಸೇರಿದಂತೆ 1152 ಕ್ಷೌರಿಕರು ತಿರುಮಲದಲ್ಲಿ ಭಕ್ತರ ಕ್ಷೌರ ಮಾಡುತ್ತಾರೆ.

Team Udayaprabha
";