| Latest Version 9.0.7 |

Politics News

“ನನ್ನನ್ನು ಕೊಲ್ಲಬಹುದು….ಜೈಲಿಗೆ ಹಾಕಬಹುದು…ಆದ್ರೂ ಬಾಂಗ್ಲಾದೇಶಕ್ಕೆ ಹೋಗ್ತೇನೆ ” : ಶೇಖ್ ಹಸೀನಾ ಘೋಷಣೆ  

 

 

ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ತಾಯ್ನಾಡಿಗೆ ಮರಳುವುದಾಗಿ ಘೋಷಿಸಿದ್ದು, ಮರಳಿದ ಬಳಿಕ ಎದುರಾಗಬಹುದಾದ ಯಾವುದೇ ಪರಿಣಾಮಗಳನ್ನು ಎದುರಿಸಲು ಸಿದ್ಧವಿರುವುದಾಗಿ ಹೇಳಿದ್ದಾರೆ. ಬಂಧನ, ಜೈಲು ಶಿಕ್ಷೆ ಅಥವಾ ಜೀವಕ್ಕೆ ಅಪಾಯ ಎದುರಾದರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಾಂಗ್ಲಾದೇಶ ತೊರೆದು ದೆಹಲಿಯಲ್ಲಿ ನೆಲೆಸಿರುವ ಬಳಿಕ ಬುಧವಾರ ಮೊದಲ ಬಾರಿಗೆ ನಡೆಸಿದ ವರ್ಚುವಲ್ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಹಸೀನಾ, ತಮ್ಮ ಬೆಂಬಲಿಗರು ಮತ್ತು ಬಾಂಗ್ಲಾದೇಶದ ಜನರು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ತಾವು ದೇಶದಿಂದ ದೂರ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

“ನನ್ನ ಪಾಲಿಗೆ ಯಾವ ವಿಧಿ ಕಾದಿದ್ದರೂ ನಾನು ನನ್ನ ಜನರ ಬಳಿಗೆ ಮರಳುತ್ತೇನೆ. ನನ್ನ ಪ್ರೀತಿಯ ದೇಶವಾಸಿಗಳು ಸಂಕಷ್ಟದಲ್ಲಿರುವಾಗ ನಾನು ದೂರ ಉಳಿಯಲು ಸಾಧ್ಯವಿಲ್ಲ. ಡಿಸೆಂಬರ್ ತಿಂಗಳಲ್ಲಿ ನಾನು ಮರಳಲು ಬಯಸಿದ್ದೇನೆ” ಎಂದು ಹಸೀನಾ ಹೇಳಿದರು.

 

ತಮ್ಮ ವಾಪಸ್ಸಿನ ನಿರ್ಧಾರದಲ್ಲಿ ಅಪಾಯಗಳಿರುವುದನ್ನು ತಾವು ಅರಿತಿರುವುದಾಗಿ ಅವರು ತಿಳಿಸಿದರು. “ಅವರು ನನ್ನನ್ನು ಕೊಲ್ಲಬಹುದು, ನನ್ನನ್ನು ಬಂಧಿಸಬಹುದು, ಜೈಲು ಶಿಕ್ಷೆಗೆ ಒಳಪಡಿಸಬಹುದು. ರಾಜಕೀಯ ಪ್ರೇರಿತ ಸುಳ್ಳು ಪ್ರಕರಣಗಳನ್ನು ದಾಖಲಿಸಿ ನನಗೆ ಕಿರುಕುಳ ನೀಡಲು ಪ್ರಯತ್ನಿಸಬಹುದು. ಆದರೆ ಭಯವು ನನ್ನ ಜನರ ಮೇಲಿನ ಕರ್ತವ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ಬಹಳ ಹಿಂದೆಯೇ ನನ್ನ ಜೀವನವು ವೈಯಕ್ತಿಕ ಸುರಕ್ಷತೆಯ ಲೆಕ್ಕಾಚಾರಗಳನ್ನು ಮೀರಿ ಹೋಗಿದೆ” ಎಂದು ಹಸೀನಾ ಮಾರ್ಮಿಕವಾಗಿ ಹೇಳಿದರು.

 

ರಾಜಕೀಯ ಹೋರಾಟ ಮತ್ತು ವೈಯಕ್ತಿಕ ಹಾನಿಯ ಸ್ಮರಣೆ

ತಮ್ಮ ರಾಜಕೀಯ ಜೀವನದ ಹಾದಿಯಲ್ಲಿ ಎದುರಿಸಿದ ಸಂಕಷ್ಟಗಳನ್ನು ಹಸೀನಾ ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಜೈಲು ಜೀವನ, ಗಡಿಪಾರು ಮತ್ತು ಕುಟುಂಬದ ನಷ್ಟದಂತಹ ಕಠಿಣ ಅನುಭವಗಳನ್ನು ಅವರು ಉಲ್ಲೇಖಿಸಿದರು.

“1971ರಲ್ಲಿ ನಾನು ನನ್ನ ತಾಯಿಯೊಂದಿಗೆ ಜೈಲಿನಲ್ಲಿದ್ದೆ. ನನ್ನ ಮಗ ಜಾಯ್ ಬಂಧನದಲ್ಲಿದ್ದಾಗಲೇ ಜನಿಸಿದ. 1975ರಲ್ಲಿ ನಾನು ನನ್ನ ಕುಟುಂಬವನ್ನು ಕಳೆದುಕೊಂಡೆ. ಆರು ವರ್ಷಗಳ ಕಾಲ ಗಡಿಪಾರಿನಲ್ಲಿ ಬದುಕಿದೆ” ಎಂದು ಅವರು ಹೇಳಿದರು.

ಬಾಂಗ್ಲಾದೇಶಕ್ಕೆ ಮರಳುವ ತಮ್ಮ ನಿರ್ಧಾರವು ಜನರೊಂದಿಗೆ ನಿಲ್ಲಬೇಕು ಎಂಬ ಉದ್ದೇಶದಿಂದ ತೆಗೆದುಕೊಂಡದ್ದು ಎಂದು ಅವರು ಹೇಳಿದರು.

“ನಾನು ಬಾಂಗ್ಲಾದೇಶಕ್ಕೆ ಮರಳಲು ಬಯಸುವುದಕ್ಕೆ ಒಂದೇ ಒಂದು ಉದ್ದೇಶವಿದೆ. ಅದು ಜನರ ಪಕ್ಕದಲ್ಲಿ ನಿಂತು ಅವರ ಜೀವನವನ್ನು ಸುಧಾರಿಸಲು ಸಹಾಯ ಮಾಡುವುದು” ಎಂದು ಹಸೀನಾ ಹೇಳಿದರು.

 

ಅವಾಮಿ ಲೀಗ್ ಮೇಲಿನ ನಿಷೇಧ ತೆರವಿಗೆ ಆಗ್ರಹ

ಇದೇ ವೇಳೆ ತಮ್ಮ ಪಕ್ಷವಾದ ಅವಾಮಿ ಲೀಗ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಶೇಖ್ ಹಸೀನಾ ಆಗ್ರಹಿಸಿದರು. ಅವಾಮಿ ಲೀಗ್ ಮೇಲಿನ ನಿಷೇಧವನ್ನು ಹಿಂಪಡೆಯಬೇಕು, ಪಕ್ಷದ ನಾಯಕರನ್ನು ಬಿಡುಗಡೆ ಮಾಡಬೇಕು ಮತ್ತು ಪಕ್ಷದ ಸದಸ್ಯರ ವಿರುದ್ಧ ದಾಖಲಿಸಲಾಗಿರುವ ಕಾನೂನು ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ಬಾಂಗ್ಲಾದೇಶದಿಂದ ಹಸೀನಾ ನಿರ್ಗಮಿಸಿದ ಬಳಿಕ ಮತ್ತು ಅಲ್ಲಿನ ರಾಜಕೀಯ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಿದ ಹಿನ್ನೆಲೆಯಲ್ಲಿ ದೇಶದಲ್ಲಿ ಮುಂದುವರಿದಿರುವ ರಾಜಕೀಯ ಅನಿಶ್ಚಿತತೆಯ ನಡುವೆ ಅವರ ಈ ಹೇಳಿಕೆಗಳು ಹೊರಬಿದ್ದಿವೆ.

ಬಹುಕಾಲ ಬಾಂಗ್ಲಾದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಶೇಖ್ ಹಸೀನಾ ಅವರು, 2024ರಲ್ಲಿ ವ್ಯಾಪಕ ಪ್ರತಿಭಟನೆಗಳು ಮತ್ತು ಅಶಾಂತಿಯ ಪರಿಣಾಮ ತಮ್ಮ ಸರ್ಕಾರ ಪತನಗೊಂಡ ಬಳಿಕ ಢಾಕಾವನ್ನು ತೊರೆದು ಭಾರತಕ್ಕೆ ಬಂದಿದ್ದರು. ಆ ಬಳಿಕ ಅವರು ಭಾರತದಲ್ಲೇ ವಾಸಿಸುತ್ತಿದ್ದಾರೆ.

Team Udayaprabha
";