| Latest Version 9.0.7 |

State News

ಕರಾವಳಿ ಸೇರಿ ರಾಜ್ಯದ ವಿವಿಧೆಡೆ ಭಾರಿ ಮಳೆ ಸಾಧ್ಯತೆ

 

 

ಬೆಂಗಳೂರು: ಕರಾವಳಿ ಸೇರಿ ರಾಜ್ಯದ ವಿವಿಧೆಡೆ ಗುರುವಾರದಿಂದ ಮೂರು ದಿನ ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿಯೊಂದಿಗೆ ಎರಡು ದಿನ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

 

ಆ. 8 ರವರೆಗೆ ಕರಾವಳಿಯಲ್ಲಿ ಗಂಟೆಗೆ 45 ರಿಂದ 65 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ. ಈ ಅವಧಿಯಲ್ಲಿ ಮೀನುಗಾರರು ಎಚ್ಚರವಹಿಸಬೇಕು ಎಂದು ಸೂಚಿಸಲಾಗಿದೆ.

 

ಕರಾವಳಿಯ ಮೂರೂ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಿಗೆ ಗುರುವಾರ ಮತ್ತು ಶುಕ್ರವಾರ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಯ ಒಂದೆರಡು ಕಡೆ ಇದೇ 8ರವರೆಗೆ ನಿರಂತರ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಂಭವವಿದೆ.

 

ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿಯೊಂದಿಗೆ ಇದೇ 11ರವರೆಗೆ ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ, ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿಯೊಂದಿಗೆ ಸಾಧಾರಣ ಮಳೆ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.

Team Udayaprabha
";