ಕಾರವಾರ: ಯಲ್ಲಾಪುರ ತಾಲ್ಲೂಕಿನ ಆರತಿಬೈಲ್ ಘಟ್ಟ ಪ್ರದೇಶದಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದಾರೆ.
ಯಲ್ಲಾಪುರದಿಂದ ಅಂಕೋಲಾ ಕಡೆಗೆ ಸಂಚರಿಸುತ್ತಿದ್ದ ಕ್ರೂಸರ್ ಜೀಪ್‌ಗೆ ಎದುರಿನಿಂದ ಬಂದ ಲಾರಿ ಡಿಕ್ಕಿಯಾಗಿದ್ದರಿಂದ ಜೀಪ್‌ನಲ್ಲಿದ್ದ 6 ಮಂದಿ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರೆಲ್ಲರೂ ಧಾರವಾಡ ನಗರದವರಾಗಿದ್ದಾರೆ.
ಜೀಪ್ ಚಾಲಕ ಸಂಜಯ ಅಂಗಡಿ (48), ಬಸವರಾಜ ಕನಕಮ್ಮನವರ (48), ಅಭಿಷೇಕ ಈಶ್ವರ್ (28), ಅಕ್ಷಯ್ (26), ಅಭಿಷೇಕ್ (26), ಮಂಜುನಾಥ ಚುಳಕಿ (33) ಮೃತರು. ಜೀಪ್‌ನಲ್ಲಿದ್ದ ಶಿವರಾಜ ಮಡಿವಾಳರ (22), ನವೀನ್ (24), ಚನ್ನಪ್ಪ ಕಲಘಟಗಿ (28) ಅವರಿಗೆ ಗಂಭೀರ ಗಾಯಗಳಾಗಿದ್ದು, ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಯಲ್ಲಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
‘ಅಪಘಾತಕ್ಕೆ ಒಳಗಾಗಿರುವ ಎಲ್ಲ 9 ಮಂದಿ ಧಾರವಾಡ ನಗರದಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದರು. ಹಣ ಕೂಡಿಸಿಕೊಂಡು ಕೊಲ್ಲೂರು, ಗೋಕರ್ಣ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸಕ್ಕೆ ಹೊರಟಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.


,
,

















