ಜಮ್ಮು: ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ‘ವಿದೇಶಿ ಶಕ್ತಿಗಳ’ ಕೈವಾಡವಿದೆ ಎಂದು ಆರ್‌ಎಸ್‌ಎಸ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ್ ಕುಮಾರ್ ಶುಕ್ರವಾರ ಆರೋಪಿಸಿದ್ದಾರೆ.
ಸೋನಮ್ ವಾಂಗ್ಚೂಕ್ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಬೆನ್ನಲ್ಲೇ ಈ ಹೇಳಿಕೆ ನೀಡಿರುವ ಅವರು ಯುವ ಜನರು ತಮ್ಮ ಚಳವಳಿಗಳ ಮೂಲಕ ದೇಶವಿರೋಧಿ ಶಕ್ತಿಗಳ ಏಜೆಂಟರಾಗಬಾರದು ಎಂದು ಸಲಹೆ ನೀಡಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಮ್ ವಾಂಗ್ಚೂಕ್ ಮತ್ತು ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ವಿಭಿನ್ನ ಸಂಸ್ಥೆಗಳಾಗಿದ್ದು, ಸಿಜೆಪಿ ವಿದೇಶಿ ಶಕ್ತಿಗಳ ಏಜೆನ್ಸಿಯಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ತಮ್ಮ ಹೋರಾಟವನ್ನು ವಿದೇಶಿಗರು ಕಬಳಿಸಿದ್ದಾರೆ ಎಂಬುದನ್ನು ವಾಂಗ್ಚೂಕ್ ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಅವರು ತಮ್ಮ ಚಳವಳಿಯನ್ನು ಭಾರತೀಯ ನೆಲೆಯಲ್ಲಿ ಇರಿಸಿಕೊಳ್ಳಬೇಕು, ವಿದೇಶಿಯರ ಕೈಗೊಂಬೆಯಾಗಬಾರದು.
ಪ್ರತಿಭಟನೆಯಲ್ಲಿ ಭಾಗವಹಿಸುವ ಯುವಕರು ಜಾಗರೂಕರಾಗಿರಬೇಕು. ದೇಶಕ್ಕೆ ದ್ರೋಹ ಬಗೆಯುವವರ ಕೈಗೊಂಬೆಯಾಗಬಾರದು ಎಂದು ಅವರು ಕಿವಿಮಾತು ಹೇಳಿದರು.
ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ದೇಶ ವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಬಾರದು. ಆರಂಭದಲ್ಲಿ ವಿರೋಧ ಪಕ್ಷಗಳು ‘ನೀಟ್’ ಪರೀಕ್ಷೆಯ ವಿಷಯವನ್ನು ಎತ್ತಿದವಾದರೂ, ನಂತರ ರಾಜಕೀಯ ಲಾಭಕ್ಕಾಗಿ ಹೋರಾಟದ ದಾರಿಯನ್ನೇ ಬದಲಿಸಿದವು ಎಂದು ದೂರಿದರು.
ಇತ್ತೀಚಿನ ವರ್ಷಗಳಲ್ಲಿ ಭಾರತ ಅಪಾರ ಜಾಗತಿಕ ಮನ್ನಣೆ ಗಳಿಸಿದೆ ಎಂದ ಇಂದ್ರೇಶ್ ಕುಮಾರ್, ನಾವೀನ್ಯತೆ ಮತ್ತು ಸಾವಿರಾರು ಸ್ಟಾರ್ಟ್ ಅಪ್‌ಗಳ ಮೂಲಕ ಭಾರತ ವಿಶ್ವಕ್ಕೇ ಮಾದರಿಯಾಗುತ್ತಿದ್ದು, ಪ್ರತಿಯೊಬ್ಬರೂ ಸರ್ಕಾರದೊಂದಿಗೆ ಸಹಕರಿಸಬೇಕು ಎಂದರು.
ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪಾಕಿಸ್ತಾನವು ಭಾರತದಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವುದನ್ನು ಮುಂದುವರಿಸಿದೆ. ಅದು ಕೂಡ ಶಾಂತಿಯಿಂದ ಇರುವುದಿಲ್ಲ, ಇತರರನ್ನೂ ಶಾಂತಿಯಿಂದ ಇರಲು ಬಿಡುವುದಿಲ್ಲ. ಭಾರತವನ್ನು ಅಸ್ಥಿರಗೊಳಿಸುವ ನೀತಿಯನ್ನು ಬಿಟ್ಟು ಪಾಕಿಸ್ತಾನ ಶಾಂತಿ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಹೇಳಿದರು.


,
,

















