| Latest Version 9.0.7 |

State News

ರಾಜಕೀಯ ಪ್ರಚೋದನೆಗೆ ವಿದ್ಯಾರ್ಥಿಗಳು ಬಲಿಯಾಗಬೇಡಿ: ಬಿಜೆಪಿ ಮುಖಂಡ ಕಿರಣ ಜಾಧವ್

ಬೆಳಗಾವಿ : ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸುವ ನೆಪದಲ್ಲಿ ಕೆಲವರು ದೇಶದ ಪ್ರಧಾನಮಂತ್ರಿಯವರ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿರುವುದು ಖಂಡನೀಯ ಎಂದು ಬಿಜೆಪಿ ಮುಖಂಡ ಕಿರಣ ಜಾಧವ್ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕು ಇದೆ. ಆದರೆ, ವೈಯಕ್ತಿಕ ನಿಂದನೆ, ಅವಹೇಳನಕಾರಿ ಹೇಳಿಕೆಗಳು ಹಾಗೂ ದೇಶದ ಉನ್ನತ ಸಾಂವಿಧಾನಿಕ ಹುದ್ದೆಗಳ ಬಗ್ಗೆ ಅಗೌರವ ತೋರುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ತಿಳಿಸಿದ್ದಾರೆ.

ನೀಟ್ ಪರೀಕ್ಷೆಯ ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ಶೀಘ್ರದಲ್ಲೇ ಕೌನ್ಸಿಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯ, ಉನ್ನತ ಶಿಕ್ಷಣ ಹಾಗೂ ವೃತ್ತಿಜೀವನದತ್ತ ಹೆಚ್ಚಿನ ಗಮನಹರಿಸಬೇಕು. ಪಾಲಕರು ಕೂಡ ಮಕ್ಕಳನ್ನು ರಾಜಕೀಯ ಪ್ರಚೋದನೆಗಳಿಂದ ದೂರವಿರಿಸಿ, ಅವರ ಶಿಕ್ಷಣ ಮತ್ತು ಭವಿಷ್ಯಕ್ಕೆ ಆದ್ಯತೆ ನೀಡುವಂತೆ ಮಾರ್ಗದರ್ಶನ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಪ್ರಯತ್ನಗಳು ಆತಂಕಕಾರಿ ಬೆಳವಣಿಗೆಯಾಗಿವೆ. ಯಾವುದೇ ನ್ಯಾಯಯುತ ಬೇಡಿಕೆಗಳಿದ್ದರೂ ಅವುಗಳನ್ನು ಕಾನೂನುಬದ್ಧ ಹಾಗೂ ಶಾಂತಿಯುತ ರೀತಿಯಲ್ಲಿ ಮಂಡಿಸಬೇಕು. ದೇಶವಿರೋಧಿ ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗಬಾರದು ಎಂದು ಅವರು ಕರೆ ನೀಡಿದ್ದಾರೆ.

ಉತ್ತಮ ಶಿಕ್ಷಣ ಪಡೆದು ಜವಾಬ್ದಾರಿಯುತ ನಾಗರಿಕರಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವುದು ಯುವಜನರ ಪ್ರಮುಖ ಕರ್ತವ್ಯವಾಗಿದೆ. ವಿದ್ಯಾರ್ಥಿಗಳನ್ನು ತಪ್ಪು ದಾರಿಗೆಳೆಯುವ ಹಾಗೂ ರಾಜಕೀಯ ಉದ್ದೇಶಕ್ಕಾಗಿ ಅವರ ಭವಿಷ್ಯದೊಂದಿಗೆ ಚೆಲ್ಲಾಟವಾಡುವ ಯಾವುದೇ ಪ್ರಯತ್ನ ಖಂಡನೀಯ ಎಂದು ಕಿರಣ ಜಾಧವ್ ತಿಳಿಸಿದ್ದಾರೆ.

Team Udayaprabha
";