| Latest Version 9.0.7 |

State News

ಮಂದಿರ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ವೇಗ: ಗ್ರಾಮಸ್ಥರೊಂದಿಗೆ ಚರ್ಚಿಸಿದ ಚನ್ನರಾಜ ಹಟ್ಟಿಹೊಳಿ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಸ್ತವಾಡ ಗ್ರಾಮದಲ್ಲಿ ಸುಮಾರು 1.05 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಕಲ್ಮೇಶ್ವರ ಮಂದಿರದ ಕಟ್ಟಡ ಕಾಮಗಾರಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಗುರುವಾರ ಗ್ರಾಮದ ಪಂಚ ಕಮಿಟಿಯ ಹಿರಿಯರು ಹಾಗೂ ಸದಸ್ಯರೊಂದಿಗೆ ಪೂರ್ವಭಾವಿ ಸಭೆ ನಡೆಸಿ ಕಾಮಗಾರಿಯ ರೂಪುರೇಷೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿಕಟಪೂರ್ವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಕಾಳಜಿಯಿಂದ ಈ ಮಹತ್ವಾಕಾಂಕ್ಷಿ ಯೋಜನೆಗೆ ಸರ್ಕಾರದಿಂದ ಈಗಾಗಲೇ 40 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಲಾಯಿತು.
ಅಲ್ಲದೆ, ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ಶುಭಾರಂಭದ ಸಂಕೇತವಾಗಿ ಲಕ್ಷ್ಮೀತಾಯಿ ಫೌಂಡೇಶನ್ ವತಿಯಿಂದ ಪೂಜಾ ಸಂಪ್ರದಾಯದಂತೆ 51 ಸಾವಿರ ರೂ.ಗಳ ಮುಂಗಡ ಮೊತ್ತವನ್ನು ದೇವಸ್ಥಾನ ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಸಮಸ್ತ ದಿಗಂಬರ ಜೈನ ಸಮಾಜ ವಿಶ್ವಸ್ಥ ಮಂಡಳಿಯ ಸಮುದಾಯ ಭವನಕ್ಕೆ ಸುಮಾರು 40 ಲಕ್ಷ ರೂ. ಹಾಗೂ ಶ್ರೀ ನವಗ್ರಹ ಜಿನ ಮಂದಿರ ಯುವಕ ಮಂಡಳದ ಸಮುದಾಯ ಭವನಕ್ಕೆ ಸುಮಾರು 50 ಲಕ್ಷ ರೂ. ಅನುದಾನ ಮಂಜೂರಾಗಿರುವ ಹಿನ್ನೆಲೆಯಲ್ಲಿ, ಈ ಎರಡೂ ಕಟ್ಟಡಗಳ ನಿರ್ಮಾಣ ಕಾಮಗಾರಿಗಳ ಕುರಿತೂ ಗ್ರಾಮಸ್ಥರೊಂದಿಗೆ ಚನ್ನರಾಜ ಹಟ್ಟಿಹೊಳಿ ಅವರು ಸುದೀರ್ಘವಾಗಿ ಚರ್ಚಿಸಿದರು.
ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಮಂದಿರ ಹಾಗೂ ಎರಡೂ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗಳಿಗೆ ಅಧಿಕೃತ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಗ್ರಾಮದ ಪಂಚ ಕಮಿಟಿಯ ಸದಸ್ಯರು, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Team Udayaprabha
";