ಬೆಂಗಳೂರು : ದೇಶದ ಎರಡನೇ ಅತಿದೊಡ್ಡ ಐಟಿ ಸೇವಾ ಸಂಸ್ಥೆಯಾದ ಇನ್ಫೋಸಿಸ್ ತನ್ನ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)ಯಾಗಿ ಆಶಿಶ್ ಕುಮಾರ ದಾಸ್ ಅವರನ್ನು ನೇಮಕ ಮಾಡಿರುವುದಾಗಿ ಗುರುವಾರ ಪ್ರಕಟಿಸಿದೆ.
ಅವರು 2027ರ ಏಪ್ರಿಲ್ 1ರಿಂದ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಬಳಿಕ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಪ್ರಸ್ತುತ ಸಿಇಒ ಮತ್ತು ಎಂಡಿಯಾಗಿರುವ ಸಲೀಲ್ ಪಾರೇಖ್ ಅವರ ಎರಡನೇ ಅವಧಿ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ, ಅವರು ಸುಮಾರು ಒಂಬತ್ತು ವರ್ಷಗಳ ಸೇವೆಯ ನಂತರ 2027ರ ಏಪ್ರಿಲ್ 1ರಂದು ಅಧಿಕಾರ ಹಸ್ತಾಂತರಿಸಲಿದ್ದಾರೆ. ಇನ್ಫೋಸಿಸ್ ನಿರ್ದೇಶಕರ ಮಂಡಳಿಯ ನಾಮನಿರ್ದೇಶನ ಮತ್ತು ಸಂಭಾವನಾ ಸಮಿತಿಯ ಶಿಫಾರಸಿನ ಮೇರೆಗೆ ಆಶಿಶ್ ಕುಮಾರ ದಾಸ್ ಅವರನ್ನು ಐದು ವರ್ಷಗಳ ಅವಧಿಗೆ ನೇಮಕ ಮಾಡಲು ತೀರ್ಮಾನಿಸಲಾಗಿದೆ. ಈ ನೇಮಕಾತಿಗೆ ಕಂಪನಿಯ ಷೇರುದಾರರ ಅನುಮೋದನೆ ಅಗತ್ಯವಿದೆ ಎಂದು ಸಂಸ್ಥೆ ತಿಳಿಸಿದೆ.
ಪ್ರಸ್ತುತ ಆಶಿಶ್ ಕುಮಾರ ದಾಸ್ ಅವರು ಕಂಪನಿಯ ವಿವಿಧ ಉದ್ಯಮ ಕ್ಷೇತ್ರಗಳನ್ನು ಒಳಗೊಂಡ ಜಾಗತಿಕ ವ್ಯವಹಾರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಮೂರು ದಶಕಗಳಿಗೂ ಅಧಿಕ ಅವಧಿಯಿಂದ ಇನ್ಫೋಸಿಸ್‌ನಲ್ಲಿ ಸೇವೆ ಸಲ್ಲಿಸಿರುವ ಅವರು, ಗ್ರಾಹಕ ಸೇವೆ, ತಂತ್ರಜ್ಞಾನ ವಿತರಣಾ ವ್ಯವಸ್ಥೆ ಹಾಗೂ ಜಾಗತಿಕ ಕಾರ್ಯಾಚರಣೆ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಇದರ ಜೊತೆಗೆ, ಕಂಪನಿಯ ಸಸ್ಟೇನಬಿಲಿಟಿ (ಸುಸ್ಥಿರ) ವ್ಯವಹಾರದ ನೇತೃತ್ವವನ್ನೂ ಅವರು ವಹಿಸಿಕೊಂಡಿದ್ದಾರೆ. ಸಂಕೀರ್ಣ ತಂತ್ರಜ್ಞಾನ ಹಾಗೂ ವ್ಯವಹಾರ ಪರಿವರ್ತನೆಗಳಲ್ಲಿ ಗ್ರಾಹಕರಿಗೆ ಯಶಸ್ವಿಯಾಗಿ ಮಾರ್ಗದರ್ಶನ ನೀಡಿರುವ ಅವರು, ವಿಶ್ವದ ವಿವಿಧ ಭಾಗಗಳಲ್ಲಿ ಉನ್ನತ ಕಾರ್ಯಕ್ಷಮತೆಯ ತಂಡಗಳನ್ನು ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಕಂಪನಿ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಇನ್ಫೋಸಿಸ್ ಅಧ್ಯಕ್ಷ ನಂದನ್ ನಿಲೇಕಣಿ, “ಐಟಿ ಉದ್ಯಮವು ಮಹತ್ವದ ಬದಲಾವಣೆಯ ಹಂತವನ್ನು ಪ್ರವೇಶಿಸುತ್ತಿದೆ. ಮುಂದಿನ ಸಿಇಒ ಇನ್ಫೋಸಿಸ್‌ನ ಮೌಲ್ಯಗಳು ಹಾಗೂ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು ಎಂಬುದು ನಿರ್ದೇಶಕರ ಮಂಡಳಿಯ ಅಭಿಪ್ರಾಯವಾಗಿತ್ತು. ನಮ್ಮ ಸಂಸ್ಥೆಯ ಒಳಗಿನವರೇ ಮುಂದಿನ ಸಿಇಒ ಆಯ್ಕೆಯಾಗಿರುವುದು ಸಂತಸದ ಸಂಗತಿ,” ಎಂದು ಹೇಳಿದ್ದಾರೆ.
ನಿರ್ದೇಶಕರ ಮಂಡಳಿಯ ಅಭಿಪ್ರಾಯದಂತೆ, ಆಶಿಶ್ ಕುಮಾರ ದಾಸ್ ಅವರ ತಂತ್ರಜ್ಞಾನ, ವ್ಯವಹಾರ ನಿರ್ವಹಣೆ ಹಾಗೂ ನಾಯಕತ್ವದ ಅನುಭವವು, ಕೃತಕ ಬುದ್ಧಿಮತ್ತೆ (AI) ಆಧಾರಿತ ಪರಿವರ್ತನೆಯ ಮುಂದಿನ ಹಂತದಲ್ಲಿ ಇನ್ಫೋಸಿಸ್ ಅನ್ನು ಇನ್ನಷ್ಟು ಬಲಿಷ್ಠವಾಗಿ ಮುನ್ನಡೆಸಲು ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.


,
,
















