ಕಲಬುರಗಿ: ಇಲ್ಲಿನ ವಿಮಾನ ನಿಲ್ದಾಣದ ಸಮೀಪ ಪೈಲಟ್ ತರಬೇತಿ ನೀಡುವ ತರಬೇತಿ ಲಘು ವಿಮಾನವೊಂದು ತಾಂತ್ರಿಕ ದೋಷದಿಂದ ಮಂಗಳವಾರ ಸಂಜೆ 5.45ರ ಹೊತ್ತಿಗೆ ತೊಗರಿ ಹೊಲದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ರೆಡ್‌ಬರ್ಡ್ ವಿಮಾನ ತರಬೇತಿ ಸಂಸ್ಥೆಗೆ ಸೇರಿದ ಈ ಲಘು ವಿಮಾನದಲ್ಲಿ ಒಬ್ಬ ಪೈಲಟ್ ಹಾಗೂ ಇನ್ನೊಬ್ಬ ತರಬೇತಿ ಪಡೆಯುತ್ತಿದ್ದ ಕೋ ಪೈಲಟ್ ಇದ್ದರು. ತರಬೇತಿಯ ಭಾಗವಾಗಿ ಎಂದಿನಂತೆ ಹಾರಾಟ ನಡೆಸುತ್ತಿದ್ದ ವೇಳೆ ವಿಮಾನದಲ್ಲಿ ದಿಢೀರ್ ತಾಂತ್ರಿಕ ದೋಷ ಕಾಣಿಸಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ವಿಮಾನದ ಸಿಬ್ಬಂದಿ, ಸಮಯಪ್ರಜ್ಞೆ ಮೆರೆದು ವಿಶಾಲವಾದ ತೊಗರಿ ಹೊಲದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಕಲಬುರಗಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಗುಲಬರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಪಾಳಾ ಗ್ರಾಮದ ಸರಹದ್ದಿನಲ್ಲಿ ಈ ಘಟನೆ ವರದಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು, ಪೊಲೀಸರು ಹಾಗೂ ಕಲಬುರಗಿ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
‘ತಾಂತ್ರಿಕ ದೋಷಕ್ಕೆ ನಿಖರ ಕಾರಣ ತನಿಖೆಯ ಬಳಿಕವೇ ಪತ್ತೆಯಾಗಲಿದೆ’ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.


,


















