| Latest Version 9.0.7 |

State News

ನವರಾತ್ರಿ ಮಹೋತ್ಸವ

ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಶರತ್ಕಾಲದ ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿಯವರೆಗೆ ಆಚರಿಸಲ್ಪಡುವ ‘ನವರಾತ್ರಿ’ ಅಥವಾ ‘ಶರನ್ನವರಾತ್ರಿ’ಯು ಅತ್ಯಂತ ವಿಶಿಷ್ಟವಾದ ಜನೋತ್ಸವವಾಗಿದೆ. ದುಷ್ಟ ಶಕ್ತಿಗಳ ದಮನ, ಸಜ್ಜನರ ರಕ್ಷಣೆ ಹಾಗೂ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸಂಕೇತವಾಗಿರುವ ಈ ಉತ್ಸವವು, ಕೇವಲ ಧಾರ್ಮಿಕ ಆಚರಣೆಯಾಗಿ ಉಳಿಯದೆ ಪ್ರಾಚೀನ ಪುರಾಣ ಕಾಲದಿಂದ ಮೊದಲ್ಗೊಂಡು ಸಮಕಾಲೀನ ಇತಿಹಾಸದವರೆಗೂ ತನ್ನದೇ ಆದ ಬಹುಮುಖಿ ಆಯಾಮಗಳಲ್ಲಿ ವಿಕಾಸಗೊಂಡಿದೆ.

*ಆಚರಣೆಯ ಪೌರಾಣಿಕ ಹಿನ್ನೆಲೆ ಹಾಗೂ ಮೂಲ ಆಕರಗಳು*
ನವರಾತ್ರಿ ಉತ್ಸವದ ತಾತ್ವಿಕ ಬುನಾದಿಯು ಪ್ರಮುಖವಾಗಿ ಪ್ರಾಚೀನ ಪುರಾಣ ಹಾಗೂ ಉದ್ಗ್ರಂಥಗಳನ್ನು ಆಧರಿಸಿದೆ. ಶಕ್ತಿ ದೇವತೆಯ ಆರಾಧನೆ ಮತ್ತು ಮಹಿಷಾಸುರ ವಧೆಯ ಕುರಿತಾದ ಅಧಿಕೃತ ವಿವರಣೆಯು ಸಾಮಾನ್ಯ ಶಕ ನಾಲ್ಕರಿಂದ ಆರನೇ ಶತಮಾನದ ಆಸುಪಾಸಿನಲ್ಲಿ ರಚನೆಯಾದ ‘ಮಾರ್ಕಂಡೇಯ ಪುರಾಣ’ದ ದೇವಿ ಮಹಾತ್ಮೆ (ದುರ್ಗಾ ಸಪ್ತಶತಿ) ವಿಭಾಗದಲ್ಲಿ ವಿಸ್ತೃತವಾಗಿ ಕಂಡುಬರುತ್ತದೆ. ಈ ಕೃತಿಯ ಉಲ್ಲೇಖದಂತೆ, ಮಹಿಷಾಸುರನೆಂಬ ಕ್ರೂರ ರಾಕ್ಷಸನನ್ನು ಸಂಹರಿಸಲು ತ್ರಿಮೂರ್ತಿಗಳ ಸಮ್ಮಿಶ್ರ ಶಕ್ತಿಯಿಂದ ಜನಿಸಿದ ದುರ್ಗಾ ದೇವಿಯು, ಸತತ ಒಂಬತ್ತು ಹಗಲು-ರಾತ್ರಿಗಳ ಕಾಲ ಘೋರ ಯುದ್ಧ ಮಾಡಿ, ಹತ್ತನೇ ದಿನವಾದ ವಿಜಯದಶಮಿಯಂದು ಆತನನ್ನು ವಧಿಸುತ್ತಾಳೆ. ಶಕ್ತಿ ಆರಾಧನೆಯ ಮೂಲ ಬೇರು ಇರುವುದು ಇದೇ ಕಥೆಯಲ್ಲಿ.

ನವರಾತ್ರಿಯ ಆಚರಣೆಗೆ ಪೂರಕವಾಗಿ ಹದಿನೈದನೇ ಶತಮಾನದ ಬಂಗಾಳಿ ಭಾಷೆಯ ‘ಕೃತ್ತಿವಾಸ ರಾಮಾಯಣ’ದಲ್ಲಿಯೂ ಮಹತ್ವದ ಪ್ರಸ್ತಾಪವಿದೆ. ರಾವಣನ ವಿರುದ್ಧ ಯುದ್ಧಕ್ಕೆ ತೆರಳುವ ಮುನ್ನ, ಶ್ರೀರಾಮಚಂದ್ರನು ಶರತ್ಕಾಲದಲ್ಲಿ ಚಂಡಿಕಾ ದೇವಿಯನ್ನು ಒಲಿಸಿಕೊಳ್ಳಲು ಒಂಬತ್ತು ದಿನಗಳ ಕಾಲ ಆಕೆಯನ್ನು ಭಕ್ತಿಯಿಂದ ಪೂಜಿಸುತ್ತಾನೆ. ಅಕಾಲದಲ್ಲಿ ದೇವಿಯನ್ನು ಎಚ್ಚರಿಸುವ ಈ ಪ್ರಕ್ರಿಯೆಗೆ ಕೃತಿಯಲ್ಲಿ ‘ಅಕಾಲ ಬೋಧನೆ’ ಎಂದು ಕರೆಯಲಾಗಿದೆ. ದೇವಿಯ ಆಶೀರ್ವಾದ ಪಡೆದೇ ಹತ್ತನೇ ದಿನ ರಾಮನು ರಾವಣನನ್ನು ಸಂಹರಿಸುತ್ತಾನೆಂಬುದು ಇದರಲ್ಲಿರುವ ಉಲ್ಲೇಖ.

ಇನ್ನು, ನವರಾತ್ರಿಯ ಅವಿಭಾಜ್ಯ ಅಂಗವಾದ ಆಯುಧ ಪೂಜೆ ಮತ್ತು ಶಮೀ ವೃಕ್ಷದ (ಬನ್ನಿ ಮರ) ಮಹತ್ವವು ವೇದವ್ಯಾಸರ ‘ಮಹಾಭಾರತ’ದ ವಿರಾಟ ಪರ್ವದಿಂದ ಆಯ್ದುಕೊಳ್ಳಲಾಗಿದೆ. ಅಜ್ಞಾತವಾಸದಲ್ಲಿದ್ದ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನು ಶಮೀ ವೃಕ್ಷದ ಮೇಲೆ ಬಚ್ಚಿಟ್ಟಿರುತ್ತಾರೆ. ಅಜ್ಞಾತವಾಸ ಮುಗಿದ ಬಳಿಕ, ನವರಾತ್ರಿಯ ನವಮಿಯ ದಿನ ಆ ಆಯುಧಗಳನ್ನು ಕೆಳಗಿಳಿಸಿ ಪೂಜಿಸಿ, ವಿಜಯದಶಮಿಯಂದು ಕೌರವರ ವಿರುದ್ಧ ಯುದ್ಧಕ್ಕೆ ಅಣಿಯಾಗುತ್ತಾರೆ. ಈ ಐತಿಹ್ಯದ ಆಧಾರದ ಮೇಲೆಯೇ ಆಯುಧ ಪೂಜೆಯ ಸಂಪ್ರದಾಯ ರೂಪುಗೊಂಡಿದೆ.

*ನವದುರ್ಗಾ ಆರಾಧನೆ: ದಿನವಾರು ತಾತ್ವಿಕತೆ ಮತ್ತು ಪೂಜಾ ವಿಧಾನ*
ನವರಾತ್ರಿಯ ಒಂಬತ್ತು ದಿನಗಳಲ್ಲಿ ದೇವಿಯನ್ನು ಒಂಬತ್ತು ವಿಭಿನ್ನ ಸ್ವರೂಪಗಳಲ್ಲಿ (ನವದುರ್ಗಾ) ಆರಾಧಿಸಲಾಗುತ್ತದೆ. ಈ ಆರಾಧನಾ ಕ್ರಮದ ಅಧಿಕೃತ ಉಲ್ಲೇಖವು ಮಾರ್ಕಂಡೇಯ ಪುರಾಣದ ‘ದೇವಿ ಕವಚ’ದಲ್ಲಿ ಲಭ್ಯವಿದ್ದು, ಸಾಧಕನ ಆಧ್ಯಾತ್ಮಿಕ ಪ್ರಯಾಣವನ್ನು ಇದು ಸಾಂಕೇತಿಸುತ್ತದೆ.

*೧. ಪ್ರಥಮ ದಿನ – ಶೈಲಪುತ್ರಿ:*
ಶಿವಪುರಾಣ, ದೇವಿ ಭಾಗವತ ಹಾಗೂ ಕಾಳಿಕಾ ಪುರಾಣಗಳಲ್ಲಿ ಉಲ್ಲೇಖಿಸಿರುವಂತೆ, ದಕ್ಷನ ಯಜ್ಞಕುಂಡದಲ್ಲಿ ಪ್ರಾಣತ್ಯಾಗ ಮಾಡಿದ ದಾಕ್ಷಾಯಣಿಯು (ಸತಿ), ಮರುಜನ್ಮದಲ್ಲಿ ಹಿಮವಂತನ ಮಗಳಾಗಿ ‘ಪಾರ್ವತಿ’ (ಶೈಲಪುತ್ರಿ) ಎಂಬ ಹೆಸರಿನಿಂದ ಜನಿಸುತ್ತಾಳೆ. ತ್ರಿಶೂಲ ಮತ್ತು ಕಮಲವನ್ನು ಹಿಡಿದು ವೃಷಭ ವಾಹನೆಯಾಗಿರುವ ಈ ದೇವಿಗೆ, ನವರಾತ್ರಿಯ ಮೊದಲ ದಿನ ಕುಂಭ ಸ್ಥಾಪನೆ ಮಾಡಿ, ಹಸುವಿನ ತುಪ್ಪವನ್ನು ನೈವೇದ್ಯವಾಗಿ ಅರ್ಪಿಸಿ ಪೂಜಿಸಲಾಗುತ್ತದೆ.

*೨. ದ್ವಿತೀಯ ದಿನ – ಬ್ರಹ್ಮಚಾರಿಣಿ:*
ಶಿವಪುರಾಣದ ಪಾರ್ವತಿ ಖಂಡದ ಪ್ರಕಾರ, ಶೈಲಪುತ್ರಿಯು ಪರಶಿವನನ್ನು ಪತಿಯಾಗಿ ಪಡೆಯುವ ಸಂಕಲ್ಪದೊಂದಿಗೆ ಘೋರವಾದ ತಪಸ್ಸನ್ನಾಚರಿಸುತ್ತಾಳೆ. ಎಲೆಗಳನ್ನೂ ತ್ಯಜಿಸಿ (ಅಪರ್ಣಾ) ಕಠಿಣ ತಪಗೈದ ದೇವಿಯ ವೈರಾಗ್ಯ ಹಾಗೂ ದೃಢನಿಶ್ಚಯದ ಸ್ವರೂಪವೇ ಬ್ರಹ್ಮಚಾರಿಣಿ. ಶ್ವೇತವರ್ಣದ ವಸ್ತ್ರಧಾರಿಣಿಯಾಗಿ, ಕೈಯಲ್ಲಿ ಜಪಮಾಲೆ ಮತ್ತು ಕಮಂಡಲವನ್ನು ಹಿಡಿದಿರುವ ಈಕೆಗೆ ಸಕ್ಕರೆ ಅಥವಾ ಪಂಚಾಮೃತವನ್ನು ನೈವೇದ್ಯವಾಗಿ ನೀಡಿ ಸಾಧಕರು ವೈರಾಗ್ಯವನ್ನು ಕರುಣಿಸುವಂತೆ ಬೇಡುತ್ತಾರೆ.

*೩. ತೃತೀಯ ದಿನ – ಚಂದ್ರಘಂಟಾ:*
ಮಾರ್ಕಂಡೇಯ ಪುರಾಣದ ವಿವರಣೆಯಂತೆ, ವಿವಾಹದ ದಿನ ಶಿವನು ಭಯಾನಕ ರೂಪದಲ್ಲಿ ಬಂದಾಗ ಪಾರ್ವತಿಯ ತಾಯಿ ಮೂರ್ಛೆ ಹೋಗುತ್ತಾಳೆ. ಈ ವೇಳೆ ಪಾರ್ವತಿಯು ಹಣೆಯ ಮೇಲೆ ಗಂಟೆಯ ಆಕಾರದ ಅರ್ಧ ಚಂದ್ರನನ್ನು ಹೊಂದಿರುವ ಉಗ್ರ ‘ಚಂದ್ರಘಂಟಾ’ ರೂಪವನ್ನು ತಾಳಿ, ಶಿವನನ್ನು ಶಾಂತಗೊಳಿಸುತ್ತಾಳೆ. ಹುಲಿಯ ಮೇಲೆ ಸವಾರಿ ಮಾಡುವ, ದಶಭುಜೆಯಾದ ಈ ದೇವಿಗೆ ಹಾಲಿನ ಸಿಹಿ ತಿನಿಸುಗಳನ್ನು ಅರ್ಪಿಸಿ ನಿರ್ಭಯತೆಗಾಗಿ ಆರಾಧಿಸಲಾಗುತ್ತದೆ.

*೪. ಚತುರ್ಥ ದಿನ – ಕೂಷ್ಮಾಂಡ:*
ದೇವಿ ಭಾಗವತ ಪುರಾಣದ ಉಲ್ಲೇಖದಂತೆ, ಸೃಷ್ಟಿಯ ಆದಿಯಲ್ಲಿ ಎಲ್ಲೆಲ್ಲೂ ಕಗ್ಗತ್ತಲು ಆವರಿಸಿದ್ದಾಗ, ದೇವಿಯು ತನ್ನ ಮಂದಹಾಸದಿಂದಲೇ ಬ್ರಹ್ಮಾಂಡವನ್ನು ಸೃಷ್ಟಿಸಿದಳು. ಆಕೆಯೇ ಸೌರಮಂಡಲದ ಕೇಂದ್ರ ಬಿಂದು. ಎಂಟು ಕೈಗಳಿರುವ ಸಿಂಹವಾಹಿನಿಯಾದ ಈಕೆಗೆ ಕುಂಬಳಕಾಯಿಯನ್ನು ಬಲಿಯಾಗಿ ಅಥವಾ ಮಾಲ್ಪುವಾವನ್ನು ನೈವೇದ್ಯವಾಗಿ ಸಮರ್ಪಿಸಿ ಆಯಸ್ಸು ಮತ್ತು ಯಶಸ್ಸಿಗಾಗಿ ಪ್ರಾರ್ಥಿಸಲಾಗುತ್ತದೆ.

*೫. ಪಂಚಮ ದಿನ – ಸ್ಕಂದಮಾತಾ:*
ಸ್ಕಂದ ಪುರಾಣದ ಪ್ರಕಾರ, ತಾರಕಾಸುರನ ಹಾವಳಿಯನ್ನು ತಡೆಯಲು ದೇವಿಯು ಕಾರ್ತಿಕೇಯನಿಗೆ (ಸ್ಕಂದ) ಜನ್ಮ ನೀಡಿ, ಆತನನ್ನು ಯುದ್ಧಕ್ಕೆ ಅಣಿಗೊಳಿಸುತ್ತಾಳೆ. ತೊಡೆಯ ಮೇಲೆ ಬಾಲಕ ಸ್ಕಂದನನ್ನು ಕೂರಿಸಿಕೊಂಡಿರುವ ದೇವಿಯ ವಾತ್ಸಲ್ಯಮಯಿ ಮಾತೃರೂಪವಿದು. ಜ್ಞಾನ ಮತ್ತು ವಾತ್ಸಲ್ಯವನ್ನು ಬೇಡಿ ಈಕೆಗೆ ಬಾಳೆಹಣ್ಣನ್ನು ನೈವೇದ್ಯವಾಗಿ ನೀಡಲಾಗುತ್ತದೆ.

*೬. ಷಷ್ಠ ದಿನ – ಕಾತ್ಯಾಯಿನಿ:*
ದುರ್ಗಾ ಸಪ್ತಶತಿಯ ಪ್ರಕಾರ, ಮಹಿಷಾಸುರನನ್ನು ಸಂಹರಿಸಲು ತ್ರಿಮೂರ್ತಿಗಳು ಹಾಗೂ ದೇವತೆಗಳ ಶಕ್ತಿ ಒಗ್ಗೂಡಿ ಒಂದು ಸ್ತ್ರೀರೂಪವನ್ನು ತಾಳುತ್ತದೆ. ಕಾತ್ಯಾಯನ ಋಷಿಯು ಆಕೆಗೆ ಪುತ್ರಿಯ ಸ್ಥಾನ ನೀಡಿ ಮೊದಲು ಪೂಜಿಸಿದ ಕಾರಣ ಆಕೆಗೆ ‘ಕಾತ್ಯಾಯಿನಿ’ ಎಂಬ ಹೆಸರು ಬಂತು. ಕೈಯಲ್ಲಿ ಖಡ್ಗ ಹಿಡಿದಿರುವ ಈ ಉಗ್ರ ರೂಪಕ್ಕೆ, ವಿವಾಹದ ಅಡೆತಡೆ ನಿವಾರಣೆ ಮತ್ತು ಶತ್ರುನಾಶಕ್ಕಾಗಿ ಜೇನುತುಪ್ಪವನ್ನು ನೈವೇದ್ಯವಾಗಿ ಅರ್ಪಿಸಿ ಆರಾಧಿಸುತ್ತಾರೆ.

*೭. ಸಪ್ತಮ ದಿನ – ಕಾಳರಾತ್ರಿ:*
ದುರ್ಗಾ ಸಪ್ತಶತಿಯ ಉಲ್ಲೇಖದಂತೆ, ರಕ್ತಬೀಜಾಸುರನ ರಕ್ತ ನೆಲಕ್ಕೆ ಬೀಳದಂತೆ ಕುಡಿದು ಸಂಹರಿಸಲು ದೇವಿಯು ತಾಳಿದ ಅತ್ಯಂತ ಉಗ್ರರೂಪವೇ ‘ಕಾಳರಾತ್ರಿ’. ಕಡುಗಪ್ಪು ಬಣ್ಣ, ಹರಡಿದ ಕೂದಲು, ಕತ್ತೆಯ ವಾಹನ ಮತ್ತು ಕೈಯಲ್ಲಿ ರಕ್ತಸಿಕ್ತ ಕತ್ತಿ ಹಿಡಿದಿರುವ ಈ ದೇವಿಯನ್ನು ದುಷ್ಟ ಶಕ್ತಿಗಳ ನಾಶ ಮತ್ತು ಭಯ ನಿವಾರಣೆಗಾಗಿ ಆರಾಧಿಸಿ ಬೆಲ್ಲದ ನೈವೇದ್ಯ ನೀಡಲಾಗುತ್ತದೆ.

*೮. ಅಷ್ಟಮ ದಿನ – ಮಹಾಗೌರಿ:*
ಶಿವಪುರಾಣದ ಪ್ರಕಾರ, ರಾಕ್ಷಸರ ಸಂಹಾರದ ನಂತರ ಕಪ್ಪಾಗಿದ್ದ ದೇವಿಯ ದೇಹವನ್ನು ಪರಶಿವನು ಗಂಗಾಜಲದಿಂದ ತೊಳೆಯುತ್ತಾನೆ. ಆಗ ಆಕೆಯು ಕಾಂತಿಯುಕ್ತವಾದ ‘ಮಹಾಗೌರಿ’ಯಾಗಿ ಬದಲಾಗುತ್ತಾಳೆ. ಶ್ವೇತ ವಸ್ತ್ರಧಾರಿಣಿ ಮತ್ತು ವೃಷಭ ವಾಹನೆಯಾದ ಈ ಶಾಂತ ಸ್ವರೂಪಿಣಿಗೆ ತೆಂಗಿನಕಾಯಿಯನ್ನು ಅರ್ಪಿಸುವ ಮೂಲಕ ಪಾಪನಾಶಕ್ಕಾಗಿ ಪ್ರಾರ್ಥಿಸಲಾಗುತ್ತದೆ.

*೯. ನವಮ ದಿನ – ಸಿದ್ಧಿದಾತ್ರಿ:*
ಬ್ರಹ್ಮಾಂಡ ಪುರಾಣ ಮತ್ತು ಶಿವಪುರಾಣದ ಪ್ರಕಾರ, ಪರಶಿವನು ಸರ್ವ ಸಿದ್ಧಿಗಳನ್ನು ಪಡೆಯಲು ಸಿದ್ಧಿದಾತ್ರಿಯನ್ನು ಆರಾಧಿಸಿದನು. ಈಕೆಯ ಅನುಗ್ರಹದಿಂದಲೇ ಶಿವನಿಗೆ ‘ಅರ್ಧನಾರೀಶ್ವರ’ ಎಂಬ ಹೆಸರು ಬಂತು. ಕಮಲದ ಹೂವಿನ ಮೇಲೆ ಆಸೀನಳಾಗಿರುವ ಈಕೆಯನ್ನು ಪೂಜಿಸುವ ಮೂಲಕ ನವರಾತ್ರಿಯ ವ್ರತಗಳು ಪೂರ್ಣಗೊಳ್ಳುತ್ತವೆ. ಸಾಧಕರು ಆಧ್ಯಾತ್ಮಿಕ ಸಿದ್ಧಿ ಮತ್ತು ಮೋಕ್ಷಕ್ಕಾಗಿ ಎಳ್ಳಿನ ನೈವೇದ್ಯದೊಂದಿಗೆ ಈಕೆಯನ್ನು ಭಜಿಸುತ್ತಾರೆ.

ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ, ದುರ್ಗಾ ಸಪ್ತಶತಿಯ ಆಧಾರದ ಮೇಲೆ ಈ ನವ ದಿನಗಳನ್ನು ‘ತ್ರಿಶಕ್ತಿ’ ಆರಾಧನೆಯಾಗಿಯೂ ವಿಂಗಡಿಸಲಾಗಿದೆ. ಮೊದಲ ಮೂರು ದಿನ ತಾಮಸಿಕ ಗುಣಗಳನ್ನು ಅಳಿಸಲು ಮಹಾಕಾಳಿ, ಮಧ್ಯದ ಮೂರು ದಿನ ರಜೋಗುಣಗಳ ವೃದ್ಧಿಗಾಗಿ ಮಹಾಲಕ್ಷ್ಮಿ, ಮತ್ತು ಕೊನೆಯ ಮೂರು ದಿನ ಸಾತ್ವಿಕ ಗುಣದ ಅರಿವಿಗಾಗಿ ಮಹಾಸರಸ್ವತಿಯ ಆರಾಧನೆ ನಡೆಯುತ್ತದೆ.

*ಐತಿಹಾಸಿಕ ದಾಖಲೆಗಳು ಮತ್ತು ರಾಜಾಶ್ರಯ*
ಪೌರಾಣಿಕ ಹಿನ್ನೆಲೆಯ ಜೊತೆಗೆ, ನವರಾತ್ರಿಯು ಐತಿಹಾಸಿಕವಾಗಿಯೂ ರಾಜರ ಆಶ್ರಯವನ್ನು ಪಡೆದು ನಾಡಹಬ್ಬವಾಗಿ ರೂಪುಗೊಂಡಿದೆ. ವಿಜಯನಗರ ಸಾಮ್ರಾಜ್ಯದ ಅರಸರು ನವರಾತ್ರಿಯನ್ನು ‘ಮಹಾನವಮಿ’ ಎಂಬ ಹೆಸರಿನಲ್ಲಿ ಆಚರಿಸುತ್ತಿದ್ದರು. ಇದು ಕೇವಲ ಧಾರ್ಮಿಕ ಆಚರಣೆಯಾಗಿರದೆ, ಸಾಮ್ರಾಜ್ಯದ ಶಕ್ತಿ ಮತ್ತು ಸಂಪತ್ತಿನ ಪ್ರದರ್ಶನ ವೇದಿಕೆಯೂ ಆಗಿತ್ತು. ಸಾಮಾನ್ಯ ಶಕ ೧೫೨೦ರಲ್ಲಿ ಆಗಮಿಸಿದ ಪೋರ್ಚುಗೀಸ್ ಪ್ರವಾಸಿ ಡೊಮಿಂಗೋ ಪೇಸ್ ಮತ್ತು ಸಾಮಾನ್ಯ ಶಕ ೧೫೩೫ರಲ್ಲಿ ಆಗಮಿಸಿದ ಫೆರ್ನಾವೋ ನೂನಿಜ್ ಅವರ ಪ್ರವಾಸ ಕಥನಗಳಲ್ಲಿ ಕೃಷ್ಣದೇವರಾಯ ಮತ್ತು ಅಚ್ಯುತರಾಯನ ಕಾಲದಲ್ಲಿ ನಡೆಯುತ್ತಿದ್ದ ಮಹಾನವಮಿ ದಿಬ್ಬದ ಸೇನಾ ಪ್ರದರ್ಶನ, ಕ್ರೀಡೆಗಳು ಮತ್ತು ಸಾಂಸ್ಕೃತಿಕ ವೈಭವದ ನಿಖರ ವಿವರಣೆಗಳನ್ನು ಕಾಣಬಹುದು.

ವಿಜಯನಗರದ ಪತನದ ನಂತರ, ಅದೇ ಸಾಂಸ್ಕೃತಿಕ ಪರಂಪರೆಯನ್ನು ಮೈಸೂರು ಒಡೆಯರು ಮುಂದುವರಿಸಿಕೊಂಡು ಬಂದರು. ಸಾಮಾನ್ಯ ಶಕ ೧೬೧೦ರಲ್ಲಿ ಶ್ರೀರಂಗಪಟ್ಟಣದಲ್ಲಿ ರಾಜಾ ಒಡೆಯರ್ ಕಾಲದಿಂದ ಈ ಉತ್ಸವ ಅಧಿಕೃತವಾಗಿ ಆರಂಭವಾಯಿತು. ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದ ‘ಶ್ರೀತತ್ವನಿಧಿ’ ಕೃತಿ ಹಾಗೂ ಮೈಸೂರು ಅರಮನೆಯ ಅಧಿಕೃತ ದಸ್ತಾವೇಜುಗಳಲ್ಲಿ ವಿಜಯದಶಮಿಯ ಜಂಬೂಸವಾರಿಯ ವೈಭವವು ಸ್ಪಷ್ಟವಾಗಿ ಉಲ್ಲೇಖಗೊಂಡಿದೆ. ಪ್ರಸ್ತುತ ಈ ಆಚರಣೆಯು ಕರ್ನಾಟಕದ ‘ನಾಡಹಬ್ಬ’ ದಸರಾವಾಗಿ ಮುಂದುವರಿಯುತ್ತಿದೆ.

*ಪ್ರಾದೇಶಿಕ ಆಚರಣೆಗಳ ವೈವಿಧ್ಯತೆ*
ಭಾರತದ ಸಾಂಸ್ಕೃತಿಕ ಬಹುತ್ವಕ್ಕೆ ಸಾಕ್ಷಿಯಾಗಿ, ನವರಾತ್ರಿಯು ದೇಶದಾದ್ಯಂತ ಭಿನ್ನ-ವಿಭಿನ್ನ ಸ್ವರೂಪಗಳಲ್ಲಿ ಆಚರಿಸಲ್ಪಡುತ್ತದೆ. ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಒಡಿಶಾಗಳಲ್ಲಿ ಇದು ‘ದುರ್ಗಾ ಪೂಜೆ’ಯಾಗಿ ಆಚರಿಸಲ್ಪಟ್ಟರೆ, ಗುಜರಾತ್ ಹಾಗೂ ರಾಜಸ್ಥಾನದಲ್ಲಿ ಮಣ್ಣಿನ ಮಡಕೆಯಲ್ಲಿ ದೀಪವನ್ನಿಟ್ಟು ಸೃಷ್ಟಿಯ ಮೂಲವನ್ನು ಸಂಕೇತಿಸುವ ‘ಗರ್ಬಾ’ ನೃತ್ಯವು ಪ್ರಧಾನವಾಗುತ್ತದೆ. ಉತ್ತರ ಭಾರತದಲ್ಲಿ ದೇವಿಯ ಆರಾಧನೆಗಿಂತ ರಾಮನ ವಿಜಯಕ್ಕೆ ಹೆಚ್ಚು ಒತ್ತು ನೀಡಿ, ವಾಲ್ಮೀಕಿ ಮತ್ತು ತುಳಸೀದಾಸರ ರಾಮಾಯಣವನ್ನು ಆಧರಿಸಿದ ‘ರಾಮಲೀಲಾ’ ನಾಟಕಗಳನ್ನು ಪ್ರದರ್ಶಿಸಿ, ದಶಮಿಯಂದು ರಾವಣನ ಪ್ರತಿಕೃತಿ ದಹನ ಮಾಡಲಾಗುತ್ತದೆ. ದಕ್ಷಿಣ ಭಾರತದ ಅನೇಕ ರಾಜ್ಯಗಳಲ್ಲಿ ‘ಗೊಂಬೆ ಕೂರಿಸುವ’ (ಬೊಂಬೆ ಹಬ್ಬ) ಸಂಪ್ರದಾಯವಿದ್ದು, ಇದು ದೈವತ್ವದ ಹಂತಗಳನ್ನು ಅದ್ಭುತವಾಗಿ ಪ್ರತಿನಿಧಿಸುತ್ತದೆ.

*ವಿಜಯದಶಮಿ: ಜ್ಞಾನ ಮತ್ತು ಕಾಯಕದ ಸಮನ್ವಯ*
ನವರಾತ್ರಿಯ ಹತ್ತನೇ ದಿನವಾದ ವಿಜಯದಶಮಿಯು ಕೇವಲ ಆಚರಣೆಯ ಅಂತ್ಯವಲ್ಲ; ಅದು ಹೊಸ ಕಾರ್ಯಗಳ ಆರಂಭದ ಶುಭದಿನ. ಈ ದಿನ ಮಹಾಸರಸ್ವತಿಯನ್ನು ಪೂಜಿಸಿ, ಅಕ್ಷರಾಭ್ಯಾಸ (ವಿದ್ಯಾರಂಭ) ಮಾಡುವ ಮೂಲಕ ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಸಾಗುವ ಸಂಕಲ್ಪ ಮಾಡಲಾಗುತ್ತದೆ. ಕೃಷಿಕರು, ಕುಶಲಕರ್ಮಿಗಳು ಮತ್ತು ಶ್ರಮಿಕರು ತಮ್ಮ ದೈನಂದಿನ ಕಾಯಕಕ್ಕೆ ಬಳಸುವ ಆಯುಧಗಳು ಮತ್ತು ಉಪಕರಣಗಳನ್ನು ದೇವರೆಂದು ಭಾವಿಸಿ ಪೂಜಿಸುವ ಮೂಲಕ ದುಡಿಮೆಗೆ ಘನತೆಯನ್ನು ಒದಗಿಸುತ್ತಾರೆ.

*ತುಳುನಾಡಿನಲ್ಲಿ‌ ನವರಾತ್ರಿ ಆರಾಧನೆ*
ಕರಾವಳಿ ಕರ್ನಾಟಕ ಅಥವಾ ತುಳುನಾಡಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯಲ್ಲಿ ಆಶ್ವಯುಜ ಮಾಸದ ‘ನವರಾತ್ರಿ’ ಅಥವಾ ದಸರಾ ಉತ್ಸವವು ವಿಶಿಷ್ಟವಾದ ಸ್ಥಾನವನ್ನು ಹೊಂದಿದೆ. ದೈವಾರಾಧನೆಗೆ ಪ್ರಸಿದ್ಧವಾದ ಈ ಮಣ್ಣಿನಲ್ಲಿ, ಶಕ್ತಿ ಆರಾಧನೆಯು ಕೇವಲ ದೇವಸ್ಥಾನಗಳ ಆಗಮೋಕ್ತ ಪೂಜೆಗಳಿಗೆ ಸೀಮಿತವಾಗದೆ, ವಿಶಿಷ್ಟ ಜಾನಪದ ಕಲೆಗಳು, ಭಕ್ತಿ ಮತ್ತು ಬೃಹತ್ ಸಾರ್ವಜನಿಕ ಉತ್ಸವಗಳ ಅದ್ಭುತ ಸಮನ್ವಯವಾಗಿ ರೂಪುಗೊಂಡಿದೆ.

*​ಸಾರ್ವಜನಿಕ ಶಾರದೋತ್ಸವ ಮತ್ತು ನವದುರ್ಗಾ ಪ್ರತಿಷ್ಠಾಪನೆ*
ತುಳುನಾಡಿನ ನವರಾತ್ರಿಯ ಪ್ರಧಾನ ಆಕರ್ಷಣೆಯೆಂದರೆ ಊರಿಗೊಂದರಂತೆ ನಡೆಯುವ ಬೃಹತ್ ‘ಸಾರ್ವಜನಿಕ ಶಾರದೋತ್ಸವ’ಗಳು. ಸಾಮುದಾಯಿಕ ಸಹಭಾಗಿತ್ವದೊಂದಿಗೆ ನಡೆಯುವ ಈ ಉತ್ಸವಗಳಲ್ಲಿ ಶಾರದಾ ಮಾತೆ ಹಾಗೂ ನವದುರ್ಗೆಯರ ಬೃಹತ್ ಮತ್ತು ಅತ್ಯಂತ ಕಲಾತ್ಮಕ ಮಣ್ಣಿನ ಮೂರ್ತಿಗಳನ್ನು ನಿರ್ಮಿಸಿ, ವಿಶಾಲವಾದ ಮಂಟಪಗಳಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

​ಒಂಬತ್ತೂ ದಿನಗಳ ಕಾಲ ದೇವಿಗೆ ವಿಶೇಷ ಹೂವಿನ ಅಲಂಕಾರ, ದೀಪಾಲಂಕಾರ, ಚಂಡಿಕಾ ಹೋಮ ಹಾಗೂ ಅನ್ನಸಂತರ್ಪಣೆಗಳು ನಡೆಯುತ್ತವೆ. ವಿಜಯದಶಮಿಯಂದು ಈ ಮೂರ್ತಿಗಳನ್ನು ಭವ್ಯವಾದ ಸ್ತಬ್ಧಚಿತ್ರಗಳ (ಟ್ಯಾಬ್ಲೊ) ಮತ್ತು ವಾದ್ಯ-ಘೋಷಗಳ ಮೆರವಣಿಗೆಯೊಂದಿಗೆ ಊರಿನಾದ್ಯಂತ ಕೊಂಡೊಯ್ದು ಜಲ-ವಿಸರ್ಜನೆ ಮಾಡುವ ಮೂಲಕ ಉತ್ಸವವು ಸಂಪನ್ನಗೊಳ್ಳುತ್ತದೆ. ಇದು ಸಮುದಾಯದ ಏಕತೆ ಮತ್ತು ಧಾರ್ಮಿಕ ಶ್ರದ್ಧೆಯ ಪ್ರತೀಕವಾಗಿದೆ.

*​ಜಾನಪದ ಕಲೆಯ ಅನನ್ಯ ಅಭಿವ್ಯಕ್ತಿ: ಹರಕೆಯ ‘ಪಿಲಿ ಯೇಸ’ (ಹುಲಿವೇಷ)*
ಇಡೀ ತುಳುನಾಡಿನ ನವರಾತ್ರಿಯ ಅತ್ಯಂತ ಆಕರ್ಷಕ, ರೋಮಾಂಚಕ ಮತ್ತು ಅವಿಭಾಜ್ಯ ಅಂಗವೆಂದರೆ ‘ಹುಲಿವೇಷ’ (ಪಿಲಿ ಯೇಸ). ದುರ್ಗಾ ದೇವಿಯ ವಾಹನ ಹುಲಿಯಾಗಿರುವುದರಿಂದ, ಯುವಕರು ದೇವಿಗೆ ಭಕ್ತಿ ಸಮರ್ಪಿಸಲು ಮತ್ತು ಹರಕೆ ತೀರಿಸಲು ಮೈಗೆ ಹುಲಿಯ ಬಣ್ಣ ಬಳಿದುಕೊಂಡು ವೇಷ ಹಾಕುತ್ತಾರೆ. ಇದು ಕೇವಲ ನೃತ್ಯವಲ್ಲ; ಶಕ್ತಿ ಮತ್ತು ಕೌಶಲ್ಯದ ಪ್ರದರ್ಶನ.

​ಹುಲಿವೇಷ ಹಾಕುವ ಯುವಕರು ನವರಾತ್ರಿಯ ಅವಧಿಯಲ್ಲಿ ವ್ರತಧಾರಿಗಳಾಗಿ, ಮಾಂಸಾಹಾರ ತ್ಯಜಿಸಿ ಕಠಿಣ ನಿಯಮಗಳನ್ನು ಪಾಲಿಸುತ್ತಾರೆ. ವಿಶಿಷ್ಟವಾದ ‘ತಾಸೆ’ ಮತ್ತು ಡೋಲಿನ ನಾದಕ್ಕೆ ಹೆಜ್ಜೆ ಹಾಕುವ ಇವರು, ಕವಾಯತು ಮಾಡುವುದು, ಗಾಳಿಯಲ್ಲಿ ಎತ್ತರಕ್ಕೆ ಜಿಗಿಯುವುದು (ಬ್ಯಾಕ್‌ಫ್ಲಿಪ್), ಹಿಂದಕ್ಕೆ ಬಾಗಿ ಕೇವಲ ಬಾಯಿಯಿಂದಲೇ ನೆಲದಲ್ಲಿರುವ ನಾಣ್ಯ ಅಥವಾ ನೋಟು ಕಚ್ಚುವುದು ಮುಂತಾದ ಮೈನವಿರೇಳಿಸುವ ಕಸರತ್ತುಗಳನ್ನು ಪ್ರದರ್ಶಿಸುವ ಮೂಲಕ ದೇವಿಗೆ ನಮನ ಸಲ್ಲಿಸುತ್ತಾರೆ.

*​ಆಯುಧ ಪೂಜೆ ಮತ್ತು ವಾಹನಗಳ ಶೃಂಗಾರ*
ಮಹಾನವಮಿಯ ದಿನದಂದು ತುಳುನಾಡಿನ ಕೆಲವು ಕಡೆ ಆಯುಧ ಪೂಜೆಯ ಸಂಭ್ರಮ ಮನೆಮಾಡಿರುತ್ತದೆ. ಕೃಷಿ ಉಪಕರಣಗಳಿಂದ ಹಿಡಿದು ಆಧುನಿಕ ಯಂತ್ರೋಪಕರಣಗಳವರೆಗೆ ಎಲ್ಲವನ್ನೂ ದೇವರೆಂದು ಭಾವಿಸಿ ಪೂಜಿಸುವುದು ಶ್ರಮ ಸಂಸ್ಕೃತಿಯ ದ್ಯೋತಕವಾಗಿದೆ. ಮನೆಗಳಲ್ಲಿ, ಕಚೇರಿಗಳಲ್ಲಿ, ಕಾರ್ಖಾನೆಗಳಲ್ಲಿ ಮತ್ತು ಪ್ರತಿಯೊಂದು ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ವಾಹನಗಳನ್ನು ಶುಚಿಗೊಳಿಸಿ, ಬಾಳೆಕಂದು (ಬಾಳೆ ಗಿಡದ ಕಾಂಡ), ಕುಂಬಳಕಾಯಿ, ಹಾಗೂ ಸೇವಂತಿಗೆ ಹೂವಿನ ಹಾರಗಳಿಂದ ಶೃಂಗರಿಸುವುದು ಇಲ್ಲಿನ ನವರಾತ್ರಿಯ ವಿಶಿಷ್ಟ ಸೌಂದರ್ಯವನ್ನು ಹೆಚ್ಚಿಸುತ್ತದೆ.

*​ಮನೆಮನೆಗೆ ತೆರಳುವ ವೇಷಗಳು ಮತ್ತು ಮನರಂಜನೆ*
ನವರಾತ್ರಿಯ ಸಮಯದಲ್ಲಿ ಹುಲಿವೇಷದ ಹೊರತಾಗಿ, ಕರಡಿ ವೇಷ, ದೈತ್ಯ ವೇಷ, ಕೋಡಂಗಿ ವೇಷ ಮತ್ತು ವಿವಿಧ ಪೌರಾಣಿಕ ಪಾತ್ರಗಳ ವೇಷಗಳನ್ನು ಹಾಕಿಕೊಂಡು ಯುವಕರು ಊರಿನ ಮನೆಮನೆಗೆ ಅಥವಾ ಅಂಗಡಿಗಳಿಗೆ ತೆರಳಿ ಕುಣಿಯುವ ವಿಶಿಷ್ಟ ಪದ್ಧತಿಯೂ ತುಳುನಾಡಿನಲ್ಲಿದೆ. ಇದು ಹಬ್ಬದ ವಾತಾವರಣಕ್ಕೆ ಮೆರುಗು ನೀಡುವುದರ ಜೊತೆಗೆ, ಜನಪದ ಕಲೆಗಳನ್ನು ಜೀವಂತವಾಗಿರಿಸುವ ಪ್ರಯತ್ನವೂ ಹೌದು.

*ವಿದ್ಯಾರಂಭ ಮತ್ತು ಅಕ್ಷರಾಭ್ಯಾಸ*
ತುಳುನಾಡಿನ ಶಕ್ತಿ ಪೀಠಗಳಲ್ಲಿ ವಿಜಯದಶಮಿಯ ದಿನವನ್ನು ಅತ್ಯಂತ ಪವಿತ್ರ ಹಾಗೂ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನ ದೇವಿಯ ಸನ್ನಿಧಿಯಲ್ಲಿ ‘ವಿದ್ಯಾರಂಭ’ ಅಥವಾ ‘ಅಕ್ಷರಾಭ್ಯಾಸ’ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗುತ್ತವೆ. ಅಜ್ಞಾನದ ಅಂಧಕಾರವನ್ನು ಕಳೆದು ಜ್ಞಾನದ ಬೆಳಕಿನೆಡೆಗೆ ಸಾಗುವ ಸಂಕೇತವಾಗಿ, ಸಣ್ಣ ಮಕ್ಕಳಿಗೆ ಅಕ್ಕಿಯ ಮೇಲೆ ‘ಓಂ’ ಎಂದು ಬರೆಸುವ ಮೂಲಕ ಅವರ ಶೈಕ್ಷಣಿಕ ಜೀವನಕ್ಕೆ ನಾಂದಿ ಹಾಡಲಾಗುತ್ತದೆ.

ಒಟ್ಟಾರೆಯಾಗಿ ಮಾರ್ಕಂಡೇಯ ಪುರಾಣ, ರಾಮಾಯಣ ಹಾಗೂ ಮಹಾಭಾರತದಂತಹ ಉದ್ಗ್ರಂಥಗಳು ನವರಾತ್ರಿಯ ತಾತ್ವಿಕ ಬುನಾದಿಯನ್ನು ಹಾಕಿಕೊಟ್ಟರೆ, ವಿಜಯನಗರದ ಶಾಸನಗಳು ಮತ್ತು ಮೈಸೂರು ಅರಮನೆಯ ಇತಿಹಾಸವು ಇದರ ಭವ್ಯವಾದ ಚಾರಿತ್ರಿಕ ಪರಂಪರೆಯನ್ನು ಸಾಬೀತುಪಡಿಸುತ್ತವೆ. ನವರಾತ್ರಿಯ ಈ ಒಂಬತ್ತು ದಿನಗಳ ಆಚರಣೆಯು ಕೇವಲ ಒಂದು ಧಾರ್ಮಿಕ ಪ್ರಕ್ರಿಯೆಯಾಗಿರದೆ, ಮನುಷ್ಯನು ಅಜ್ಞಾನದಿಂದ ಆರಂಭಿಸಿ, ಕಠಿಣ ಸಾಧನೆ ಮಾಡಿ, ಅಹಂಕಾರವನ್ನು ನಾಶಪಡಿಸಿ, ಅಂತಿಮವಾಗಿ ಪರಮ ಜ್ಞಾನ ಮತ್ತು ಮೋಕ್ಷವನ್ನು ಪಡೆಯುವ ಒಂದು ವಿಶಿಷ್ಟ ಆಧ್ಯಾತ್ಮಿಕ ಪ್ರಯಾಣವಾಗಿದೆ.

*ಬರಹ:* ಶ್ರೇಯಾ ಶ್ರುತೇಶ್ ಆಚಾರ್ಯ

Team Udayaprabha
";