| Latest Version 9.0.7 |

State News

17 ಸಾವಿರ ಅಡಿ ಎತ್ತರದಲ್ಲಿ ಇಂಡಿಗೋ ವಿಮಾನಕ್ಕೆ ಹೊಡೆದ ಮಿಂಚು ; ವಿಮಾನದ ಮೂಗಿಗೆ ಹಾನಿ

ಲಕ್ನೋ : ಪಾಟ್ನಾದಿಂದ ಲಕ್ನೋಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನವೊಂದು ಬುಧವಾರ ಪ್ರತಿಕೂಲ ಹವಾಮಾನದ ನಡುವೆಯೇ ಸುಮಾರು 17,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಮಿಂಚಿನ ಹೊಡೆತಕ್ಕೆ ಸಿಲುಕಿದ್ದು, ವಿಮಾನದ ಮುಂಭಾಗಕ್ಕೆ ಹಾನಿಯಾಗಿದೆ. ಆದರೆ ಪೈಲಟ್ ಸಮಯಪ್ರಜ್ಞೆ ಮತ್ತು ಕೌಶಲ್ಯದಿಂದ ವಿಮಾನವನ್ನು ಸುರಕ್ಷಿತವಾಗಿ ಲಕ್ನೋ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಮಾಡಿದ್ದು, ವಿಮಾನದಲ್ಲಿದ್ದ 104 ಪ್ರಯಾಣಿಕರು ಸುರಕ್ಷಿತವಾಗಿ ಹೊರಬಂದಿದ್ದಾರೆ.
ಇಂಡಿಗೋದ 6E925 ವಿಮಾನವು ಮಧ್ಯಾಹ್ನ 3:10ಕ್ಕೆ ಪಾಟ್ನಾ ವಿಮಾನ ನಿಲ್ದಾಣದಿಂದ ಹೊರಟಿದ್ದು, ಸಂಜೆ 4:20ಕ್ಕೆ ಲಕ್ನೋ ತಲುಪಬೇಕಾಗಿತ್ತು. ಆದರೆ ಹಾರಾಟದ ವೇಳೆ ವಿಮಾನಕ್ಕೆ ಮಿಂಚು ಬಡಿದ ಪರಿಣಾಮ ಅದರ ಮುಂಭಾಗದ ಭಾಗಕ್ಕೆ ಹಾನಿಯಾಯಿತು. ಈ ಸಂದರ್ಭದಲ್ಲಿ ಪೈಲಟ್ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ವಿಮಾನವನ್ನು ಸಂಜೆ ಸುಮಾರು 4:05ಕ್ಕೆ ಲಕ್ನೋ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದರು.

ಘಟನೆಯ ಬಳಿಕ ತಾಂತ್ರಿಕ ದೋಷ ಉಂಟಾದ ಕಾರಣ ವಿಮಾನವನ್ನು ಲಕ್ನೋ ವಿಮಾನ ನಿಲ್ದಾಣದಲ್ಲೇ ಲ್ಯಾಂಡ್‌ ಪರಿಶೀಲನೆಗೆ ಒಳಪಡಿಸಲಾಯಿತು. ಇದೇ ವಿಮಾನವು ಲಕ್ನೋ–ಅಹಮದಾಬಾದ್ ಮಾರ್ಗದ ಇಂಡಿಗೋ 6E6968 ವಿಮಾನ ಸೇವೆ ನಡೆಸಬೇಕಾಗಿತ್ತು. ಆದರೆ ಮಿಂಚಿನ ಹೊಡೆತದಿಂದ ಉಂಟಾದ ಹಾನಿಯ ಹಿನ್ನೆಲೆಯಲ್ಲಿ ಆ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಅಹಮದಾಬಾದ್‌ಗೆ ತೆರಳಬೇಕಿದ್ದ ಪ್ರಯಾಣಿಕರಿಗಾಗಿ ಇಂಡಿಗೋ ಸಂಸ್ಥೆ ಪರ್ಯಾಯ ವಿಮಾನವನ್ನು ವ್ಯವಸ್ಥೆ ಮಾಡಿತು.
ಮಿಂಚಿನ ಹೊಡೆತದಿಂದ ಹಾನಿಗೊಳಗಾದ ವಿಮಾನವನ್ನು ಎಂಜಿನಿಯರ್‌ಗಳ ತಂಡ ಪರಿಶೀಲಿಸುತ್ತಿದ್ದು, ಹಾನಿಯ ಪ್ರಮಾಣ ಮತ್ತು ತಾಂತ್ರಿಕ ಸ್ಥಿತಿಯ ಕುರಿತು ತನಿಖೆ ನಡೆಸುತ್ತಿದೆ.

ಇದಕ್ಕೂ ಮುನ್ನ ಇದೇ ವರ್ಷದ ಜೂನ್ 19ರಂದು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಗುಡುಗು-ಮಿಂಚಿನ ಮಳೆಯ ಸಂದರ್ಭದಲ್ಲಿ ಮತ್ತೊಂದು ಇಂಡಿಗೋ ವಿಮಾನ ಮಿಂಚಿನ ಹೊಡೆತಕ್ಕೆ ಸಿಲುಕಿತ್ತು. ಆಗ ಅಗರ್ತಲಾಕ್ಕೆ ತೆರಳಬೇಕಿದ್ದ ಆ ವಿಮಾನಕ್ಕೆ ಮಿಂಚು ಹೊಡೆದಿದ್ದರಿಂದ ಅದರ ವಿದ್ಯುತ್ ವ್ಯವಸ್ಥೆಗೆ ಹಾನಿಯಾಗಿತ್ತು. ಪರಿಣಾಮವಾಗಿ ವಿಮಾನದಲ್ಲಿದ್ದ 141 ಪ್ರಯಾಣಿಕರು ಹಾಗೂ ಆರು ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿತ್ತು. ನಂತರ ಅವರನ್ನು ಮತ್ತೊಂದು ವಿಮಾನದ ಮೂಲಕ ಅಗರ್ತಲಾಕ್ಕೆ ಕಳುಹಿಸಲಾಗಿತ್ತು.
ಜೂನ್ ತಿಂಗಳ ಆ ಘಟನೆಯಲ್ಲಿ ಇಬ್ಬರು ಗ್ರೌಂಡ್‌ ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಇದೀಗ ಲಕ್ನೋದಲ್ಲಿ ಸಂಭವಿಸಿದ ಈ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ.

Team Udayaprabha
";