| Latest Version 9.0.7 |

State News

ಕೇಂದ್ರ ಸಚಿವ ಗಡ್ಕರಿಯವರಿಗೆ ಬೆದರಿಕೆಯೊಡ್ಡಿ ಹಿಂಡಲಗಾ ಜೈಲಿನಲ್ಲಿದ್ದ ಜಯೇಶ್‌ಗೆ ಎರಡು ವರ್ಷ ಸಾದಾ ಜೈಲು ಶಿಕ್ಷೆ

 

 

 

 

ಪುತ್ತೂರು : ಜೋಡಿ ಕೊಲೆ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಕಟಕಟೆಯಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದ ಪ್ರಕರಣದಲ್ಲಿ ರೌಡಿಶೀಟರ್ ಸಿರಿಬಾಗಿಲು ನಿವಾಸಿ ಜಯೇಶ್ (41) ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್‌ ಮತ್ತು ಎಸಿಜೆಎಂ ನ್ಯಾಯಾಲಯ, ಆತನಿಗೆ 2 ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿದೆ.

 

2008ರಲ್ಲಿ ಶಿರಾಡಿಯಲ್ಲಿ ನಡೆದಿದ್ದ ತಾಯಿ ಮತ್ತು ಮಗುವಿನ ಕೊಲೆ ಪ್ರಕರಣ ಆರೋಪಿಯಾಗಿದ್ದ ಜಯೇಶ್‌ನ ವಿಚಾರಣೆಯು 2016ರ ಏಪ್ರಿಲ್ 5ರಂದು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವೇಳೆ ಜಯೇಶ್ ಕಟಕಟೆಯಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದ. ಆತನನ್ನು ನ್ಯಾಯಾಲಯದ ಹೊರಗೆ ಕಡಬದ ಪೊಲೀಸ್‌ ಸಿಬ್ಬಂದಿ ಮಹೇಶ್ ಮತ್ತು ಪುತ್ತೂರಿನ ವಕೀಲರೊಬ್ಬರು ಸೇರಿ ಸಾರ್ವಜನಿಕರು ಹಿಡಿದು ನ್ಯಾಯಾಲಯಕ್ಕೆ ಕರೆ ತಂದಿದ್ದರು.

 

ಈ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣಪು‌ರ್ ಶಿಕ್ಷೆ ವಿಧಿಸಿ ಆದೇಶ ಪ್ರಕಟಿಸಿದರು.

 

ಪುತ್ತೂರು ನಗರ ಠಾಣೆಯ ಆಗಿನ ಎಸ್.ಐ ಖಾದರ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಶನ್ ಪರ ಸರ್ಕಾರಿ ವಕೀಲ

ಮನೋಜ್ ಕುಮಾರ್ ವಾದ ಮಂಡಿಸಿದ್ದರು.

 

ಘಟನೆ ಹಿನ್ನೆಲೆ: ಕಡಬ ತಾಲೂಕಿನ ಶಿರಾಡಿ ನಿವಾಸಿಯಾದ ಜಯೇಶ್ 2008ರಲ್ಲಿ ತನ್ನ ದೊಡ್ಡಪ್ಪನ ಮಗನಾದ ಲೋಹಿತ್ ಅವರ ಪತ್ನಿ ಸೌಮ್ಯ ಮತ್ತು ಆಕೆಯ ಮೂರು ವರ್ಷದ ಮಗುವನ್ನು ಕೊಲೆ ಮಾಡಿ ಚಿನ್ನಾಭರಣದೊಂದಿಗೆ ಪರಾರಿಯಾಗಿ ಕೇರಳದಲ್ಲಿ ತಲೆಮರೆಸಿಕೊಂಡಿದ್ದ.

 

ಕೇರಳದ ಅಲಪುರಂ ಜಿಲ್ಲೆಯಲ್ಲಿ ಮುಸ್ಲಿಂ ಯುವತಿಯೊಬ್ಬಳನ್ನು ಪ್ರೀತಿಸಿ ವಿವಾಹವಾಗಿದ್ದ ಆತ 2012ರ ಅ. 10ರಂದು ತನ್ನ ಪತ್ನಿಯೊಂದಿಗೆ ಜಗಳವಾಡಿ ತೆಂಗಿನ ಮರವೇರಿ ಕುಳಿತಿದ್ದ. ಈ ಘಟನೆ ಸಂಬಂಧ ಅಲ್ಲಿನ ಪೊಲೀಸರು ಸ್ಥಳಕ್ಕೆ ತೆರಳಿ ಆತನನ್ನು ಮರದಿಂದ ಕೆಳಗಿಳಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಶಿರಾಡಿಯ ತಾಯಿ ಮತ್ತು ಮಗುವಿನ ಕೊಲೆ ಪ್ರಕರಣದ ತಲೆಮರೆಸಿಕೊಂಡಿದ್ದ ಆರೋಪಿ ಎಂದು ತಿಳಿದು ಬಂದಿತ್ತು.

 

ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಪ್ರಕರಣದಲ್ಲಿ 5 ವರ್ಷ ಶಿಕ್ಷೆ: ಶಿರಾಡಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಜಯೇಶ್ ಅಲ್ಲಿಂದಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಕರೆ ಮಾಡಿ, ತಾನು ಭೂಗತ ಪಾತಕಿ ದಾವೂದ್ ಇಬ್ರಾಹಿಂ ತಂಡದವನೆಂದು ಹೇಳಿಕೊಂಡು ರೂ. 100 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದ. ಹಣ ನೀಡದಿದ್ದರೆ ಬಾಂಬ್ ಸ್ಪೋಟ ನಡೆಸಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಪ್ರಕರಣದಲ್ಲೂ ಜಯೇಶ್‌ಗೆ ನಾಗಪುರ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

Team Udayaprabha
";