ಲಕ್ನೋ: ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೇರ ಸವಾಲು ಹಾಕಿದ್ದಾರೆ. “ಧಮ್ ಇದ್ದರೆ ಅಯೋಧ್ಯೆಯಿಂದ ನಾಮಪತ್ರ ಸಲ್ಲಿಸಿ, ನಾನೂ ಅಲ್ಲಿಂದಲೇ ಸ್ಪರ್ಧಿಸುತ್ತೇನೆ; ನಮ್ಮ ಅದೃಷ್ಟ ಹೇಗಿದೆ ಎಂದು ಒಮ್ಮೆ ಪರೀಕ್ಷಿಸೋಣ” ಎಂದು ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ಅಯೋಧ್ಯೆಗೆ ಭೇಟಿ ನೀಡಿದ್ದ ಅಖಿಲೇಶ್ ಯಾದವ್, ಬಿಜೆಪಿ ನಾಯಕರಿಗೆ ತಾಕತ್ ಇದ್ದರೆ ಅಯೋಧ್ಯೆಯಿಂದ ನೇರವಾಗಿ ಚುನಾವಣೆಗೆ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸಿಎಂ ಯೋಗಿ ಅವರಿಗೆ ಸವಾಲು ಹಾಕಿದ್ದರು. ಇದಕ್ಕೆ ಬಲರಾಮಪುರದ ಸಾರ್ವಜನಿಕ ಸಭೆಯಲ್ಲಿ ತಿರುಗೇಟು ನೀಡಿರುವ ಯೋಗಿ, “ಅಖಿಲೇಶ್ ಜೀ, ನಾನು ನಿಮಗೆ ಒಂದು ಸವಾಲು ಹಾಕುತ್ತೇನೆ. ನೀವು ಶ್ರೀ ಅಯೋಧ್ಯೆ ಧಾಮದಿಂದ ನಾಮಪತ್ರ ಸಲ್ಲಿಸಿ, ನಾನೂ ಕೂಡ ಸಲ್ಲಿಸುತ್ತೇನೆ. ಬನ್ನಿ, ನಮ್ಮ ಅದೃಷ್ಟವನ್ನು ಒಮ್ಮೆ ಪರೀಕ್ಷಿಸೋಣ” ಎಂದು ಯೋಗಿ ಆದಿತ್ಯನಾಥ್ ಸವಾಲು ಎಸೆದಿದ್ದಾರೆ.
ಅಯೋಧ್ಯೆಗೆ ತಾವು ರಾಜಕೀಯಕ್ಕಾಗಿ ಹೋಗುವುದಿಲ್ಲ, ಅಭಿವೃದ್ಧಿಗಾಗಿ ಮತ್ತು ಉತ್ತರ ಪ್ರದೇಶದ ಗೌರವವನ್ನು ಕಾಪಾಡಲು ಹೋಗುತ್ತೇವೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಹಿಂದಿನ ಸರ್ಕಾರಗಳ ಆಡಳಿತಾವಧಿಯಲ್ಲಿ ಮಫಿಯಾಗಳು ಮತ್ತು ಭೂಗಳ್ಳರು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಿದ್ದರು ಎಂದು ಆರೋಪಿಸಿದರು. 2017ಕ್ಕಿಂತ ಮೊದಲು ಬಲರಾಮ್‌ಪುರದ ರಸ್ತೆಗಳು ಅತ್ಯಂತ ಹದಗೆಟ್ಟಿದ್ದವು ಎಂದರು.
ಸಮಾಜವಾದಿ ಪಕ್ಷದ ‘ಪಿಡಿಎ’ (PDA)
‘ಪರಿವಾರ ಅಭಿವೃದ್ಧಿ ಪ್ರಾಧಿಕಾರ’ (Parivar Development Authority) ಎಂದು ವ್ಯಂಗ್ಯವಾಡಿದ ಯೋಗಿ, ರಾಜ್ಯಸಭಾ ಚುನಾವಣೆಯಲ್ಲಿ ಎಸ್‌ಪಿ ಒಬ್ಬೇ ಒಬ್ಬ ದಲಿತ ಅಭ್ಯರ್ಥಿಗೆ ಅವಕಾಶ ನೀಡಲಿಲ್ಲ ಎಂದು ಕಿಡಿಕಾರಿದರು.
ಎಸ್‌ಪಿ ಪಕ್ಷವು ಕೇವಲ ವಂಶ ರಾಜಕಾರಣ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿರುವ ಯೋಗಿ, ಸೋತಾಗ ಇವಿಎಂ (EVM) ಮೇಲೆ ಗೂಬೆ ಕೂರಿಸುವುದು ವಿಪಕ್ಷಗಳ ಚಾಳಿಯಾಗಿದೆ ಎಂದು ಟೀಕಿಸಿದ್ದಾರೆ.
ಅಯೋಧ್ಯೆಯು ತಮ್ಮ ಪಾಲಿಗೆ ಕೇವಲ ಒಂದು ನಗರವಷ್ಟೇ ಅಲ್ಲ; ಪವಿತ್ರ ಧಾರ್ಮಿಕ ಸ್ಥಳವಾಗಿದೆ. ಅದರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಅಯೋಧ್ಯೆಗೆ ಆಗಾಗ್ಗೆ ಭೇಟಿ ನೀಡುವ ವಿಚಾರದ ಬಗ್ಗೆ ಅಖಿಲೇಶ್ ಇತ್ತೀಚೆಗೆ ಮಾತನಾಡಿದ್ದರು. ಅಲ್ಲಿಂದಲೇ ವಿಧಾನಸಭೆ ಚುನಾವಣೆಗೆ ನಿಲ್ಲಿ ಎಂದು ಸವಾಲು ಹಾಕಿದ್ದಾರೆ. ಅದೇ ಕಾರಣಕ್ಕಾಗಿ ಯೋಗಿ ಈ ಹೇಳಿಕೆಗಳನ್ನು ನೀಡಿದ್ದಾರೆ.
ಸಿಎಂ ಯೋಗಿ ಅವರು ವಿಧಾನಸಭೆಯಲ್ಲಿ ಗೋರಖ್‌ಪುರ ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
2024ರ ಲೋಕಸಭಾ ಚುಣಾವಣೆಯಲ್ಲಿ, ಅಯೋಧ್ಯೆಯನ್ನೂ ಒಳಗೊಂಡ ಫೈಜಾಬಾದ್ ಕ್ಷೇತ್ರದಲ್ಲಿ ಅಖಿಲೇಶ್ ಅವರ ಸಮಾಜವಾದಿ ಪಕ್ಷ ಜಯ ಸಾಧಿಸಿತ್ತು. ಈ ಬಾರಿ ಅಯೋಧ್ಯೆ ಕ್ಷೇತ್ರಕ್ಕೆ ಮಾಜಿ ಶಾಸಕ ಪವನ್ ಪಾಂಡೆ ಅವರನ್ನು ಕಣಕ್ಕಿಳಿಸಲು ಯೋಜಿಸಿದೆ.
ಅಖಿಲೇಶ್ ಅವರು ಕನೌಜ್ ಲೋಕಸಭಾ ಕ್ಷೇತ್ರದಿಂದ ಸಂಸತ್ ಪ್ರವೇಶಿಸಿದ್ದಾರೆ.


,


















