ಬೆಂಗಳೂರು: ‘ಸ್ಟಿಂಗ್’ ಕಾರ್ಯಾಚರಣೆಯ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ದೂರು ಆಧರಿಸಿ ತನಿಖೆ ನಡೆಸುತ್ತಿರುವ ನಗರ ಕೇಂದ್ರ ಸೈಬರ್ ಅಪರಾಧ ವಿಭಾಗದ ಪೊಲೀಸರು, ಖಾಸಗಿ ಸುದ್ದಿ ವಾಹಿನಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
‘ಸ್ಟಿಂಗ್’ ಕಾರ್ಯಾಚರಣೆ ಪ್ರಕರಣದ ಪ್ರಮುಖ ಆರೋಪಿ ರಾಕೇಶ್ ಶೆಟ್ಟಿ ಬಂಧಿಸುವಂತೆ ಒತ್ತಾಯಿಸಿ ನಗರ ಪೊಲೀಸ್ ಕಮಿಷನರ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ದೂರು ನೀಡಿದ್ದರು. ಅಲ್ಲದೇ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿ ಕ್ರಮಕ್ಕೆ ಒತ್ತಾಯಿಸಿ ಗಡುವು ನೀಡಿದ್ದರು. ಇದೇ ಪ್ರಕರಣದಲ್ಲಿ ಇನ್ನೂ ಇಬ್ಬರ ಪಾತ್ರವಿದೆ ಎಂದು ಆರೋಪಿಸಿದ್ದರು.
ಮತ್ತೊಂದೆಡೆ ನಿರೀಕ್ಷಣಾ ಜಾಮೀನು ಕೋರಿ ರಾಕೇಶ್ ಶೆಟ್ಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಗರದ ಸಿಸಿಎಚ್ ಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ.
‘ರಾಕೇಶ್ ಶೆಟ್ಟಿ ಅವರನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಗಿದೆ. ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ಸಹ ಜಾರಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಳೆದ ಒಂದು ವಾರದಿಂದ ಪ್ರಕರಣದ ಮಾಹಿತಿ ಕಲೆ ಹಾಕುತ್ತಿದ್ದ ಸೈಬರ್ ಪೊಲೀಸರು, ಇದೀಗ ಪ್ರಕರಣದ ತನಿಖೆ ಚರುಕು ಮಾಡಿದ್ದಾರೆ.
ಈ ಬೆಳವಣಿಗೆಯ ಬೆನ್ನಲ್ಲೇ ರಾಕೇಶ್ ಶೆಟ್ಟಿ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಕಳೆದ ನಾಲ್ಕು ದಿನಗಳಿಂದ ವಾಸ್ತವ್ಯ ಮಾಡಿದ್ದ ರಾಕೇಶ್ ಅವರನ್ನು ಪೊಲೀಸರು ಬುಧವಾರ ರಾತ್ರಿ ವಶಕ್ಕೆ ಪಡೆದು, ಗುರುವಾರ ಮುಂಜಾನೆ ನಗರಕ್ಕೆ ಕರೆತಂದಿದ್ದರು ಎಂದು ಮೂಲ ಗಳು ತಿಳಿಸಿವೆ.


,


















