ಮೂಡಲಗಿ: ರೈತರು ತಮ್ಮ ಕೃಷಿ ಚಟುವಟಿಕೆಗಳ ಜೊತೆಗೆ ಉಪ ಕಸುಬಾಗಿ ಆಕಳು ಮತ್ತು ಎಮ್ಮೆ ಸಾಕಾಣಿಕೆ ಮಾಡುವ ಮೂಲಕ ಹೈನುಗಾರಿಕೆಗೆ ಉತ್ತೇಜನ ನೀಡಿದರೆ, ದಿನನಿತ್ಯದ ಖರ್ಚು-ವೆಚ್ಚಗಳನ್ನು ಸರಿತೂಗಿಸಿಕೊಂಡು ರೈತನ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯವಾಗಲಿದೆ. ಆದ್ದರಿಂದ ರೈತರು ಹೈನುಗಾರಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಅನೇಕ ಸಹಾಯ ಸೌಲಭ್ಯಗಳು ಹಾಗೂ ಬೆಳಗಾವಿ ಕೆಎಂಎಫ್ ಒದಗಿಸುತ್ತಿರುವ ಸೌಲಭ್ಯಗಳನ್ನು ಉಪಯೋಗ ಮಾಡಿಕೊಂಡು ಹೈನುಗಾರಿಕೆಯನ್ನು ಬೆಳೆಸಬೇಕು ಮತ್ತು ಅದರ ಮೂಲಕ ತಮ್ಮ ಆರ್ಥಿಕ ಶಕ್ತಿಯನ್ನು ಹೆಚ್ಚಳ ಮಾಡಿಕೊಳ್ಳಬೇಕೆಂದು ರಾಜ್ಯಸಭಾ ಮಾಜಿ ಸಂಸದ ಈರಣ್ಣ ಕಡಾಡಿ ಕರೆ ನೀಡಿದರು.
ಸೋಮವಾರ ಕಲ್ಲೋಳಿ ಪಟ್ಟಣದ ಕಲ್ಲೋಳಿ ಹಾಲು ಉತ್ಪಾದಕ ಸಹಕಾರಿ ಸಂಘದ ವತಿಯಿಂದ ಕಳೆದ ಆರ್ಥಿಕ ವರ್ಷದಲ್ಲಿ ಸಂಘಕ್ಕೆ ನಿರಂತರವಾಗಿ ಹಾಲು ಪೂರೈಸಿ ಸಂಘದ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದ ಎಲ್ಲಾ ಹಾಲು ಉತ್ಪಾದಕ ಸದಸ್ಯರಿಗೆ 1.87 ಲಕ್ಷ ರೂ.ಗಳ ಪ್ರೋತ್ಸಾಹ ಧನವನ್ನು ವಿತರಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಆರ್ಥಿಕತೆಗೆ ಹಾಲು ಉತ್ಪಾದಕರ ಸಹಕಾರ ಸಂಘಗಳು ನೀಡುತ್ತಿರುವ ಕೊಡುಗೆ ಅಪಾರ. ಹೈನುಗಾರರಿಗೆ ಆಸರೆಯಾಗಲು ರಾಜ್ಯ ಸರ್ಕಾರವು ಪ್ರತಿ ಲೀಟರ್ ಹಾಲಿಗೆ ರೂ.5 ಪ್ರೋತ್ಸಾಹ ಧನವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡುತ್ತಿದೆ. ಅದಲ್ಲದೆ, ಕಲ್ಲೋಳಿ ಹಾಲು ಉತ್ಪಾದಕ ಸಹಕಾರಿ ಸಂಘದಿಂದಲೂ ಕೂಡ ಪ್ರತಿ ಲೀಟರ್ ಹಾಲಿಗೆ 2 ರೂ.ಗಳ ಪ್ರೋತ್ಸಾಹ ಧನವನ್ನು ನೀಡುತ್ತಿದ್ದೇವೆ ಜೊತೆಗೆ ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ದೇಸಿ ತಳಿಗಳ ಅಭಿವೃದ್ಧಿಗೆ ಬೆಂಬಲ ಹಾಗೂ ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ ಮೂಲಕ ಡೈರಿ ಉದ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದೆ. ರೈತರು ಇಂತಹ ಯೋಜನೆಗಳ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀಶೈಲ ತುಪ್ಪದ, ನಿರ್ದೇಶಕರಾದ ಪ್ರಭು ಕಡಾಡಿ, ಶಿವಪ್ಪ ಕಡಾಡಿ, ಭೀಮಶಿ ಚೌಗಲಾ, ಬಸವರಾಜ ದಾಸನಾಳ, ಗೋಪಾಲ ಜಾಲರ, ಸಿದ್ದಪ್ಪ ಹೆಬ್ಬಾಳ ಸೇರಿದಂತೆ ಪಟ್ಟಣದ ಹಾಲು ಉತ್ಪಾದಕ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಲ್ಲಪ್ಪ ಕಪ್ಪಲಗುದ್ದಿ ನಿರೂಪಿಸಿದರು. ಸಂಘದ ಕಾರ್ಯದರ್ಶಿ ದೊಡ್ಡಪ್ಪ ಉಜ್ಜಿನಕೊಪ್ಪ ಸ್ವಾಗತಿಸಿ, ಕೊನೆಯಲ್ಲಿ ವಂದನಾರ್ಪಣೆ ನೆರವೇರಿಸಿದರು.


,


















