ಬೆಳಗಾವಿ : ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯದ ಜೊತೆಗೆ ಶಿಸ್ತು, ನಾಯಕತ್ವ, ಆತ್ಮವಿಶ್ವಾಸ ಹಾಗೂ ಸಮಯಪ್ರಜ್ಞೆಯನ್ನು ಬೆಳೆಸುವ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಬುನಾದಿಯಾಗುತ್ತದೆ ಎಂದು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್. ಸಿ. ಪಾಟೀಲ್ ಹೇಳಿದರು.
ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 2026-27ನೇ ಸಾಲಿನ ಅಂತರ್ ಕಾಲೇಜು ಮಹಿಳಾ ಮತ್ತು ಪುರುಷ ಏಕ ವಲಯ ಹಾಕಿ ಕ್ರೀಡಾಕೂಟವನ್ನು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ನೇತೃತ್ವದಲ್ಲಿ ನಗರದ ತಿಲಕವಾಡಿಯಲ್ಲಿರುವ ಲೇಲೆ(ಸುಭಾಷ್ ಚಂದ್ರ ) ಆಟದ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮೂರು ದಿನಗಳ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಮಾತನಾಡಿದರು.
ಗೆಲುವು ಮತ್ತು ಸೋಲನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಕ್ರೀಡೆಗಳು ಕಲಿಸುತ್ತವೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಕ್ರೀಡೆಯಲ್ಲಿ ಸಾಧನೆಗೈದ ಕ್ರೀಡಾಪಟುಗಳಿಗೆ ಸೂಕ್ತ ಸ್ಥಾನಮಾನ ಹಾಗೂ ಅವಕಾಶಗಳನ್ನು ನೀಡುತ್ತಿವೆ. ಹೀಗಾಗಿ ಕ್ರೀಡಾ ಕ್ಷೇತ್ರವು ಇಂದು ಪ್ರತಿಷ್ಠಿತ ಕ್ಷೇತ್ರವಾಗಿ ಹೊರಹೊಮ್ಮಿದೆ. ವಿದ್ಯಾರ್ಥಿಗಳು ಕ್ರೀಡೆಯ ಮೂಲಕ ವೈಯಕ್ತಿಕ ಸಾಧನೆಯ ಜೊತೆಗೆ ದೇಶದ ಕೀರ್ತಿಗೂ ಕೊಡುಗೆ ನೀಡಬೇಕು ಎಂದು ಹೇಳಿದರು.
ಬೆಳಗಾವಿ ಹಾಕಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸುಬೇದಾರ್ ಸುಧಾಕರ ಚಾಳಕೆ ಅವರು ಪ್ರಸ್ತುತ ಕಾಲಘಟ್ಟದಲ್ಲಿ ಹಾಕಿಯಲ್ಲಿ ಭಾರತವು ತನ್ನ ಗತವೈಭವವನ್ನು ಮರಳಿ ಪಡೆಯುತ್ತ ಸಾಗುತ್ತಿದೆ. ಹಾಗಾಗಿ ವಿದ್ಯಾರ್ಥಿ ಗಳು ಹಾಕಿಯತ್ತ ಗಮನಹರಿಸಬೇಕು. ಪ್ರತಿ ಕ್ರೀಡೆಯ ಗೆಲುವಿನಲ್ಲಿ ನಿರಂತರ ಅಭ್ಯಾಸ, ತಾಳ್ಮೆ ಹಾಗೂ ಆತ್ಮವಿಶ್ವಾಸದ ಅಗತ್ಯವಿರುತ್ತದೆ ಎಂದರು.
ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿ, ವಿಜೇತ ವಿದ್ಯಾರ್ಥಿಗಳು ಮತ್ತು ತಂಡಗಳನ್ನು ಅಭಿನಂದಿಸಲಾಯಿತು.
ಬೆಳಗಾವಿ ಹಾಕಿ ಅಸೋಸಿಯೇಷನ್ ಉಪಾಧ್ಯಕ್ಷ ಪ್ರಕಾಶ್ ಕಾಳಕುಂದ್ರಿಕರ ಉಪಸ್ಥಿತರಿದ್ದರು.
ಡಾ. ಪ್ರೀತಿ ಪದಪ್ಪಗೋಳ ನಿರೂಪಿಸಿದರು. ಡಾ. ಮಹಾಂತೇಶ ದುರಗಣ್ಣವರ ಪರಿಚಯಿಸಿದರು. ವಿದ್ಯಾರ್ಥಿನಿ ಹರ್ಷಿತಾ ಮರಳಿ ಸ್ವಾಗತಿಸಿದರು. ಡಾ. ಕರುಣಾ ಅಮೃಸ್ಕರ್ ವಂದಿಸಿದರು.


,


















