ಬೆಳಗಾವಿ: ದಿ:05-10-2026 : ಬೆಳಗಾವಿಯ ಉತ್ತರ ಕ್ಷೇತ್ರಕ್ಕೆ ಸಾರಿಗೆ ಸಂಪರ್ಕದ ಕೊರತೆ ನೀಗಿಸಲು ಕೋರಿ “ನ್ಯಾಯವೆಂಬ ಬೆಳಕು” ಸಂಸ್ಥೆಯಿಂದ ಬೆಳಗಾವಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಕರಿಗೆ ಮನವಿ ಸಲ್ಲಿಸಲಾಯಿತು.
ಸಂಸ್ಥೆಯ ಚೇರಮನ್, ನ್ಯಾಯವಾದಿ ಸುನೀಲ ಸಾಣಿಕೊಪ್ಪ ಮಾತನಾಡಿ, ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದ ಪೂರ್ವ-ಉತ್ತರ ಭಾಗಕ್ಕೆ ಮಹಾಂತೇಶನಗರ ಮತ್ತು ಅದರಾಚೆಗೆ ನಗರವು ವ್ಯಾಪಕವಾಗಿ ಬೆಳೆಯುತ್ತಿದೆ. ಈ ಪ್ರದೇಶದಲ್ಲಿ, ಅಶೋಕನಗರ, ಮಹಾಂತೇಶನಗರ, ಶಿವಬಸವನಗರ, ಆಂಜನೇಯನಗರ, ಶ್ರೀನಗರ, ವಂಟಮುರಿ, ರಾಮತೀರ್ಥನಗರ, ಅಟೋನಗರ, ಕಣಬರ್ಗಿ, ಸಿದ್ದೇಶ್ವರ ನಗರ, ಕಲಕಾಂಬ, ಮುಚ್ಚಂಡಿ, ಖನಗಾಂವ, ಚಂದಗಡ, ಹೊಸ ಗಾಂಧಿನಗರ, ರುಕ್ಮಿಣಿನಗರ, ರೆವಿನ್ಯೂ ಕಾಲನಿ, ಶಿವತೀರ್ಥಕಾಲನಿ, ಭಾರತನಗರ, ಚಂದ್ರಮೌಳಿ ಕಾಲನಿ, ಜನ್ನತನಗರ, ಅಮನ್‌ನಗರ ಮುಂತಾದ ಹಲವಾರು ವಸತಿ ಪ್ರದೇಶಗಳಿದ್ದು ಬಹುದೊಡ್ಡ ಜನಸಂಖ್ಯೆಯನ್ನು ಹೊಂದಿದೆ.
ಈ ಮೊದಲು ಬೈಲಹೊಂಗಲ, ಸವದತ್ತಿ ಮತ್ತು ಧಾರವಾಡ, ಬೆಂಗಳೂರು ಮಾರ್ಗದ ಕಡೆಗೆ ಸಾಗುವ ಬಸ್ಸುಗಳು ಮಹಾಂತೇಶನಗರ ಓವರ್‌ಬ್ರಿಜ್ ಮೂಲಕ ಸಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಈ ಭಾಗದ ಜನರಿಗೆ ಕೇಂದ್ರ ಬಸ್ ನಿಲ್ದಾಣಕ್ಕೆ ಹೋಗದೇ ಮಹಾಂತೇಶನಗರ ಓವರ್‌ಬ್ರಿಜ್ ದಲ್ಲಿಯೇ ಬಸ್ಸು ಹತ್ತಿ ಹೋಗಲು ಅನುಕೂಲವಾಗಿತ್ತು. ಇದರಿಂದ ತಮ್ಮ ಇಲಾಖೆಗೂ ಹೆಚ್ಚಿನ ಆದಾಯವಾಗುತ್ತಿತ್ತು.
ಆದರೆ ಕೆಲವು ದಿನಗಳಿಂದ ಟ್ರಾಫಿಕ್ ಸಮಸ್ಯೆ ಎಂದು ಮತ್ತು ಡಿಸೇಲ ಉಳಿತಾಯ ಎಂಬ ಕುಂಟು ನೆಪವೊಡ್ಡಿ, ಈ ಮಾರ್ಗವನ್ನು ಬದಲಿಸಿ, ಸದರಿ ಬಸ್ಸುಗಳು ಹಳೆ ಪಿ.ಬಿ. ರಸ್ತೆ [ಶ್ರೀ. ಬಿ.ಎಸ್. ಯಡಿಯೂರಪ್ಪ ಮಾರ್ಗ] ಮೂಲಕ ಸಾಗಲು ನಿರ್ದೇಶನ ನೀಡಿದ್ದಾರೆ. ಆ ಕಾರಣ ಈ ಭಾಗದ ಜನರಿಗೆ ಬಹಳ ಅಡಚಣೆ, ತೊಂದರೆಯಾಗಿದೆ. ಅಲ್ಲದೇ ಈ ಹೊಸ ಮಾರ್ಗದಲ್ಲಿ ಹೆಚ್ಚಿನ ಪ್ರಯಾಣಿಕರಿಲ್ಲದ ಕಾರಣ, ತಮ್ಮ ಇಲಾಖೆಗೆ ಆದಾಯವೂ ಕಡಿಮೆಯಾಗಿದೆ. ಹಳೆ ಪಿ.ಬಿ. ರಸ್ತೆ ಮೂಲಕ ಮೂರವರೆ ಕಿಲೋಮೀಟರ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ಕೂಡುವುದರಿಂದ ಹೆಚ್ಚಿನ ಡಿಸೇಲ್ ನಷ್ಟವಾಗುತ್ತಿದೆ ಮತ್ತು ಪ್ರಯಾಣಿಕರಿಲ್ಲದೇ ಸಾರಿಗೆ ಇಲಾಖೆಗೆ ನಷ್ಟವಾಗುತ್ತಿದೆ.
ಆದ್ದರಿಂದ ಬೈಲಹೊಂಗಲ, ಸೌದತ್ತಿ ಮತ್ತು ಧಾರವಾಡ, ಬೆಂಗಳೂರು ಮಾರ್ಗದ ಕಡೆಗೆ ಸಾಗುವ ಬಸ್ಸುಗಳನ್ನು ಪುನಃ ಮಹಾಂತೇಶನಗರ ಓವರ್‌ಬ್ರಿಜ್ ಮೂಲಕ ಸಾಗುವಂತೆ ನಿರ್ದೇಶಿಸಬೇಕು ಮತ್ತು ಇಲ್ಲಿ ಅಂದರೆ ಮಹಾಂತೇಶನಗರ ಓವರ್‌ಬ್ರಿಜ್ ಹತ್ತಿರ ಒಂದು ಶಾಶ್ವತ ವಿಶಾಲ ಬಸ್ ನಿಲ್ದಾಣ ನಿರ್ಮಿಸಬೇಕೆಂದು ವಿನಂತಿಸಲಾಯಿತು.
ಅಲ್ಲದೇ ಈ ಮುಂಚೆ ಮಹಾಂತೇಶನಗರ ಪ್ರದೇಶದಿಂದ ವಡಗಾವಿ, ಟಿಳಕವಾಡಿ, ಅನಿಗೋಳ ಕಡೆಗೆ ಬಸ್ಸುಗಳ ಸೌಕರ್ಯವಿತ್ತು. ಅದನ್ನು ಬಂದುಮಾಡಲಾಗಿದೆ. ಇದರಿಂದ ಹಲವಾರು ಕಾನೂನು, ಇಂಜಿನೀಯರಿಂಗ್, ವೈದ್ಯಕೀಯ, ಮುಂತಾದ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ನೌಕರರಿಗೆ ಮತ್ತು ಜಿಲ್ಲಾಧಿಕಾರಿಗಳ ಆವರಣದಲ್ಲಿರುವ ನೂರಾರು ಕೋರ್ಟ್, ಕಚೇರಿಗಳಿಗೆ ಹೋಗುವ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ. ಆದ್ದರಿಂದ ಮೊದಲಿನಂತೆ ಮಹಾಂತೇಶನಗರದಿಂದ ವಡಗಾವಿ, ಟಿಳಕವಾಡಿ, ಅನಗೋಳ ಕಡೆಗೆ ಬಸ್ಸುಗಳ ಸೌಕರ್ಯವನ್ನು ಪುನ:ರಾರಂಭಿಸಬೇಕು.
ಕಿಲ್ಲಾ ಕೆರೆಯ ಹತ್ತಿರ ಲೇಕ್‌ವೀವ್ ಆಸ್ಪತ್ರೆಯ ಹತ್ತಿರ ಮಾರ್ಗ ತಿರುವು ಕೊಟ್ಟಿರುವ ಕಾರಣ ಅಲ್ಲಿ ಹೆಚ್ಚಿನ ಟ್ರಾಫಿಕ್ ಸಮಸ್ಯೆ ಆಗುತ್ತಿದೆ. ಆದ್ದರಿಂದ, ಕಿಲ್ಲಾ ಕೆರೆಯ ಹತ್ತಿರ ಲೇಕ್‌ವೀವ್ ಆಸ್ಪತ್ರೆಯ ಹತ್ತಿರ ಮಾಡಿರುವ ತಿರುವನ್ನು ಬಂದು ಮಾಡಿ, ಅದರ ಮುಂದಿನ ತಿರುವಿನಲ್ಲಿ ವಾಹನಗಳು ತಿರುವು ತಗೆದುಕೊಳ್ಳುವಂತೆ ವ್ಯವಸ್ಥೆ ಮಾಡಬೇಕು ಎಂದು ವಿನಂತಿಸಿದರು.
ಸಂಸ್ಥೆಯ ಪದಾಧಿಕಾರಿಗಳು ಮತ್ತು ಮಹಾಂತೇಶನಗರದ ರಹವಾಸಿಗಳಾದ ಜಯಶಂಕರಯ್ಯಾ ಎಸ್. ಸುಂಕದಮಠ, ಅಶೋಕ ಶಿವಬಸಪ್ಪ ಬುರ್ಗೆ, ಕಾಸಯ್ಯಾ ಮಲ್ಲಯ್ಯ ಹೆಬ್ಬಳ್ಳಿಮಠ, ಗುರಪ್ಪಾ ಶಿದ್ದೇಶ್ವರ ಕಾಗತೀಕರ ಮುಂತಾದವರು ಉಪಸ್ಥಿತರಿದ್ದರು.


,


















