| Latest Version 9.0.7 |

Local News

ಉದ್ಯಮಿಯಾಗಿ ಇತರರ ಬಾಳಲ್ಲಿ ಬೆಳಕಾಗಿ: ಪ್ರೊ. ತೇಲಿ 

 

 

ಬೆಳಗಾವಿ : ಉದ್ಯೋಗಿಯಾದರೆ ವೈಯಕ್ತಿಕ ಆರ್ಥಿಕ ಭದ್ರತೆ ದೊರೆಯುತ್ತದೆ. ಆದರೆ ಉದ್ಯಮಿಯಾದರೆ ಇತರರಿಗೂ ಆರ್ಥಿಕ ಭದ್ರತೆ ಒದಗಿಸುವುದರ ಜೊತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು ಎಂದು ಮರಾಠ ಮಂಡಳ ಕಾಲೇಜಿನ ವಿಶ್ರಾಂತ ಅರ್ಥಶಾಸ್ತ್ರ ಪ್ರಾಧ್ಯಾಪಕ ಆರ್. ಎಂ. ತೇಲಿ ಅಭಿಪ್ರಾಯಪಟ್ಟರು.

 

ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗವು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಉದ್ಯೋಗಿ ಅಥವಾ ಉದ್ಯಮಿಯಾಗು’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

 

ಅರ್ಥಶಾಸ್ತ್ರದ ಜೊತೆಗೆ ಮಹಿಳಾ ಅರ್ಥಶಾಸ್ತ್ರವೂ ಮಹತ್ವದ ಅಧ್ಯಯನ ಕ್ಷೇತ್ರವಾಗಿ ಬೆಳೆಯುತ್ತಿದೆ. ದೇಶದ ಜಿಡಿಪಿಯಲ್ಲಿ ಮಹಿಳೆಯರ ಪಾಲು ಶೇ. 20ರಷ್ಟಿದೆ. ಮನುಷ್ಯ ಘನತೆಯಿಂದ ಬದುಕಬೇಕಾದರೆ ಉತ್ತಮ ಉದ್ಯೋಗಿಯಾಗಬೇಕು. ಆದರೆ ಸರ್ಕಾರಿ ಉದ್ಯೋಗಗಳ ಸಂಖ್ಯೆ ಸೀಮಿತವಾಗಿರುವುದರಿಂದ ಎಲ್ಲರಿಗೂ ಸರ್ಕಾರಿ ಉದ್ಯೋಗ ಒದಗಿಸಲು ಸಾಧ್ಯವಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಉದ್ಯಮಿಗಳಾಗುವ ಕನಸು ಕಾಣಬೇಕು. ಉದ್ಯಮಶೀಲತೆಯು ಸ್ವಾವಲಂಬನೆಗೆ ದಾರಿ ಮಾಡಿಕೊಡುವುದರ ಜೊತೆಗೆ ಇತರರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಶಕ್ತಿಯನ್ನೂ ನೀಡುತ್ತದೆ ಎಂದು ಹೇಳಿದರು.

 

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್. ಸಿ. ಪಾಟೀಲ್ ಅವರು ನಾವು ಬದುಕಬೇಕು; ನಮ್ಮೊಂದಿಗೆ ಇತರರನ್ನೂ ಬದುಕಿಸಬೇಕು. ಅದಕ್ಕಾಗಿ ಸ್ವಂತ ಉದ್ಯಮ ಅಥವಾ ವ್ಯವಹಾರ ಆರಂಭಿಸುವ ಕೌಶಲ ಬೆಳೆಸಿಕೊಳ್ಳಬೇಕು. ಸೋಲುಗಳನ್ನು ಸವಾಲಾಗಿ ಸ್ವೀಕರಿಸಿ, ಅವಕಾಶಗಳನ್ನು ಗುರುತಿಸಿ, ಆತ್ಮವಿಶ್ವಾಸದಿಂದ ಮುನ್ನಡೆಯುವ ಮನೋಭಾವವನ್ನು ಬೆಳೆಸಿಕೊಳ್ಳಲಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

 

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಅರ್ಜುನ ಜಂಬಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಕುಮಾರ ಎಸ್. ಬಡಿಗೇರ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಹರ್ಷಿತಾ ಮರಳಿ ನಿರೂಪಿಸಿದರು, ಖೋಜಾ ಪಾಶ್ಚಪುರಿ ವಂದಿಸಿದರು.

Team Udayaprabha
";