ಬೆಂಗಳೂರು : 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ವರ್ಷ ಎಷ್ಟು ಮಂದಿ ತೇರ್ಗಡೆಯಾದರು? ತೇರ್ಗಡೆ ಪ್ರಮಾಣ ಎಷ್ಟಿದೆ? ಯಾವ ಜಿಲ್ಲೆ ಅಗ್ರಹ ಸ್ಥಾನದಲ್ಲಿದೆ? ಇತ್ಯಾದಿ ಎಲ್ಲ ಮಾಹಿತಿ ಇಲ್ಲಿದೆ.

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಶೇ 73.4 ಮಂದಿ ತೇರ್ಗಡೆಯಾಗಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಬೆಂಗಳೂರಿನ ಮಲ್ಲೇಶ್ವರಂನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು https://karresults.nic.in ಜಾಲತಾಣದಲ್ಲಿ ಕೂಡ ವೀಕ್ಷಿಸಬಹುದಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಹಾಗೂ ನಿರ್ದೇಶಕ ಗೋಪಾಲಕೃಷ್ಣ ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶದ ಮಾಹಿತಿ ನೀಡಿದರು.

ಈ ಬಾರಿ ಉಡುಪಿ ಜಿಲ್ಲೆಗೆ ಮೊದಲ ಸ್ಥಾನ ದೊರೆತಿದ್ದರೆ ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ ದೊರೆತಿದೆ.

ವಿದ್ಯಾರ್ಥಿಯ ನೋಂದಾಯಿತ ಮೊಬೈಲ್​ ನಂಬರ್​ಗೂ ಸಹ ಫಲಿತಾಂಶದ ವಿವರದ ಎಸ್​ಎಂಎಸ್​ ಕಳುಹಿಸಲಾಗುವುದು ಎಂದು ಮಂಜುಶ್ರೀ ತಿಳಿಸಿದರು.

ಈ ಬಾರಿ 441910 ವಿದ್ಯಾರ್ಥಿಗಳು, 428058 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ರಾಜ್ಯಕ್ಕೆ ಉಡುಪಿ ಮೊದಲ ಸ್ಥಾನ, ದಕ್ಷಿಣ ಕನ್ನಡ ಎರಡನೇ ಸ್ಥಾನ ಹಾಗೂ ಶಿವಮೊಗ್ಗ ಮೂರನೇ ಸ್ಥಾನ ಪಡೆದರೆ, ಯಾದಗಿರಿ ಕೊನೆಯ ಸ್ಥಾನವನ್ನು ಪಡೆದಿದೆ. ಪಾಸಾಗಲಿ, ಫೇಲಾಗಲಿ 3 ಬಾರಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿದೆ. ಪಾಸಾದರು ಸಹ ಅಂಕ ಹೆಚ್ಚಿಸಿಕೊಳ್ಳಲು ಮತ್ತೆ ಪರೀಕ್ಷೆ-2, ಪರೀಕ್ಷೆ-3 ಬರೆಯಬಹುದು.