ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣದ ತನಿಖೆ ಕೈಗೊಂಡಿರುವ ಸಿಐಡಿ ಅಧಿಕಾರಿಗಳು, ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಫಯಾಜ್‌ನನ್ನು ಬುಧವಾರ ತಮ್ಮ ವಶಕ್ಕೆ ಪಡೆದಿದ್ದಾರೆ.

ಮಂಗಳವಾರದಿಂದ ತನಿಖೆ ಆರಂಭಿಸಿರುವ ಎಸ್ಪಿ ವೆಂಕಟೇಶ್ ನೇತೃತ್ವದ ತಂಡ, ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಇಲ್ಲಿನ ಒಂದನೇ ಜೆಎಂಎಫ್‌ಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಅರ್ಜಿ‌ ಪುರಸ್ಕರಿಸಿದ ನ್ಯಾಯಾಲಯ ಆರು ದಿನ ಆರೋಪಿಯನ್ನು ಸಿಐಡಿಗೆ ಒಪ್ಪಿಸಿದೆ.

ಕಾರಾಗೃಹದಲ್ಲಿದ್ದ ಫಯಾಜ್‌ನನ್ನು ವಶಕ್ಕೆ ಪಡೆದು ಅಲ್ಲಿಂದ ನೇರವಾಗಿ ಅಪರಾಧ ನಡೆದ ಸ್ಥಳವಾದ ಬಿವಿಬಿ ಕಾಲೇಜ್ ಕ್ಯಾಂಪಸ್‌ಗೆ ಕರೆ ತಂದು ಮಹಜರು ನಡೆಸಿತು. ಸಿಐಡಿಯ ಇನ್ನೊಂದು ತಂಡ ಆರೋಪಿಯ ಊರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮಕ್ಕೆ ತೆರಳಿ ಮಾಹಿತಿ ಕಲೆ ಹಾಕಿದೆ. ನೇಹಾಳನ್ನು ಕೊಲೆ ಮಾಡುವ ಉದ್ದೇಶ ಹೊಂದಿದ್ದ ಆರೋಪಿ ಫಯಾಜ್ 5 ದಿನ ಮೊದಲೇ ಚಾಕು ಖರೀದಿಸಿದ್ದ. ನೇಹಾ ಜತೆ ಕೆಲ ವಾರಗಳಿಂದ ಸಂಪರ್ಕ ಕಡಿತಗೊಂಡಿದ್ದರಿಂದ ಹತಾಶನಾಗಿ ದ್ವೇಷ ಸಾಧಿಸುತ್ತಿದ್ದ. ಧಾರವಾಡದಲ್ಲಿ ಚಾಕು ಖರೀದಿಸಿ ಬ್ಯಾಗ್‌ನಲ್ಲಿ ಇಟ್ಟುಕೊಂಡು ಕಾಲೇಜಿಗೆ ಬಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಏಪ್ರಿಲ್ 18 ರಂದು ಕಾಲೇಜಿಗೆ ಬಂದಿದ್ದ ಫಯಾಜ್, ಬೈಕ್ ಹ್ಯಾಂಡಲ್ ಲಾಕ್ ಮಾಡದೆ, ಕೃತ್ಯ ಮುಗಿಸಿ ಪರಾರಿಯಾಗಲು ಯೋಜಿಸಿದ್ದ. ಬೈಕ್‌ ನಿಲ್ಲಿಸಿದ್ದ ಸ್ಥಳಕ್ಕೆ ತೆರಳಲು ಸಾಧ್ಯವಾಗದಿದ್ದಾಗ ಕಾಲೇಜಿನ ಮುಖ್ಯದ್ವಾರದ ಮೂಲಕ ಪರಾರಿಯಾಗಲು ಯತ್ನಿಸಿದ್ದ. ಆ ವೇಳೆ ವಿದ್ಯಾರ್ಥಿಗಳು ಹಾಗೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿ ದ್ದಾನೆ ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.