| Latest Version 9.0.7 |

State News

ಹೌತಿಗಳಿಂದ ಡ್ರೋನ್ ದಾಳಿ ಆರೋಪ : ಇದೇ ಮೊದಲ ಬಾರಿಗೆ ಮಕ್ಕಾದಲ್ಲಿ ವೈಮಾನಿಕ ದಾಳಿ ಅಲರ್ಟ್‌ ನೀಡಿದ ಸೌದಿ

ರಿಯಾದ್: ಯೆಮೆನ್‌ನ ಹೌತಿ ಬಂಡುಕೋರರು (Houthis) ಮುಸ್ಲಿಮರ ಪವಿತ್ರ ನಗರವಾದ ಮಕ್ಕಾವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯತ್ನಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಪಶ್ಚಿಮ ಕರಾವಳಿಯ ಹಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಉನ್ನತ ಮಟ್ಟದ ಭದ್ರತಾ ಎಚ್ಚರಿಕೆ ಜಾರಿಗೊಳಿಸಲಾಯಿತು. ಮಕ್ಕಾ ನಗರ ಸೇರಿದಂತೆ ಜೆದ್ದಾ ಮತ್ತು ತಾಇಫ್ ಗವರ್ನರೇಟ್‌ಗಳಲ್ಲಿ ಎಚ್ಚರಿಕೆ ಘೋಷಿಸಲಾಗಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮಕ್ಕಾದಲ್ಲಿ ವೈಮಾನಿಕ ಬೆದರಿಕೆಗೆ(Aerial Threat) ಸಂಬಂಧಿಸಿದ ಎಚ್ಚರಿಕೆ ನೀಡಲಾಗಿದೆ.
ಸೌದಿ ಅರೇಬಿಯಾದ ವಾಯು ರಕ್ಷಣಾ ವ್ಯವಸ್ಥೆಯು ಮಕ್ಕಾದ ದಕ್ಷಿಣ ಭಾಗದಲ್ಲಿ ಹೌತಿ ಡ್ರೋನ್‌ವೊಂದನ್ನು ಪತ್ತೆಹಚ್ಚಿ ಹೊಡೆದುರುಳಿಸಿದ ಬಳಿಕ ಈ ಎಚ್ಚರಿಕೆ ಜಾರಿಯಾಯಿತು. ನಿಷೇಧಿತ ವಾಯುಪ್ರದೇಶಕ್ಕೆ ಡ್ರೋನ್ ಪ್ರವೇಶಿಸುವ ಮುನ್ನವೇ ಅದನ್ನು ನಾಶಪಡಿಸಲಾಗಿದೆ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್ ಬೆಂಬಲಿತ ಹೌತಿಗಳು ಮತ್ತು ಸೌದಿ ಬೆಂಬಲಿತ ಯೆಮೆನ್ ಸರ್ಕಾರದ ಪಡೆಗಳ ನಡುವಿನ ಹೊಸ ಹಂತದ ಸಂಘರ್ಷದ ಮಧ್ಯೆ ಈಗ ಸೌದಿ ಅರೇಬಿಯಾವನ್ನೇ ನೇರವಾಗಿ ಗುರಿಯಾಗಿಸಿ ಹೌತಿಗಳು ದಾಳಿ ನಡೆಸುತ್ತಿದ್ದಾರೆ. ಹೌತಿಗಳು ಸೌದಿ ವಿರುದ್ಧ ಸಮುದ್ರ ನಿರ್ಬಂಧ ಘೋಷಿಸಿ, ಕೆಂಪು ಸಮುದ್ರದಲ್ಲಿ (Red Sea) ಸಾಗುವ ಸೌದಿ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.

ಇಸ್ರೇಲ್‌ನ ಹಯೋಮ್ ಪತ್ರಿಕೆಯ ವರದಿ ಪ್ರಕಾರ, ಮದೀನಾದ ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲ್ ಅಜೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Prince Mohammad bin Abdulaziz International Airport) ತೆರಳುತ್ತಿದ್ದ ವಿಮಾನ ಸಂಚಾರವನ್ನು ಕೂಡ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು.
ಈ ಬೆಳವಣಿಗೆಗೆ ಒಂದು ದಿನ ಮೊದಲು ಹೌತಿಗಳು ಯೆಮೆನ್‌ನಿಂದ ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ದಾಳಿಯಲ್ಲಿ ಸೌದಿ ಅರೇಬಿಯಾದಲ್ಲಿ 13 ಮಂದಿ ಗಾಯಗೊಂಡಿದ್ದರು.
ಹೌತಿಗಳ ವಿರುದ್ಧ ಹೋರಾಟ ನಡೆಸುತ್ತಿರುವ ಸೌದಿ ನೇತೃತ್ವದ ಮೈತ್ರಿಕೂಟವು ಈ ದಾಳಿಯನ್ನು “ಅಮಾನವೀಯ ಮತ್ತು ಖಂಡನೀಯ ಕೃತ್ಯ” ಎಂದು ತೀವ್ರವಾಗಿ ಖಂಡಿಸಿದೆ. 57 ಮುಸ್ಲಿಂ ರಾಷ್ಟ್ರಗಳ ಒಕ್ಕೂಟದ ಪರವಾಗಿ ಪ್ರತಿಕ್ರಿಯಿಸಿದ ಇಸ್ಲಾಮಿಕ್ ಸಹಕಾರ ಸಂಘಟನೆ (OIC) ವಕ್ತಾರ ತುರ್ಕಿ ಅಲ್ ಮಲಿಕಿ, “ಇಸ್ಲಾಂನ ಎರಡು ಪವಿತ್ರ ಮಸೀದಿಗಳ ಭದ್ರತೆ ಮತ್ತು ಯಾತ್ರಿಕರ ಸುರಕ್ಷತೆ ನಮಗೆ ಅತ್ಯಂತ ಮುಖ್ಯವಾದದ್ದು. ಮುಂದಿನ ಯಾವುದೇ ದಾಳಿಯನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮೈತ್ರಿಕೂಟ ಹಿಂಜರಿಯುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.

ಆದರೆ ಮಕ್ಕಾವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಲಾಗಿದೆ ಎಂಬ ಸೌದಿ ಅರೇಬಿಯಾದ ಆರೋಪವನ್ನು ಹೌತಿಗಳು ಸಂಪೂರ್ಣವಾಗಿ ತಳ್ಳಿಹಾಕಿವೆ. ಹೌತಿ ರಾಜಕೀಯ ಬ್ಯೂರೋದ ಸದಸ್ಯ ಹಜೇಮ್ ಅಲ್ ಅಸ್ಸಾದ್ ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪ್ರತಿಕ್ರಿಯಿಸಿ, “ಮಕ್ಕಾವನ್ನು ಗುರಿಯಾಗಿಸಿಕೊಂಡಿದ್ದೇವೆ ಎಂಬ ಆರೋಪ ಹಳೆಯ ಸುಳ್ಳು. ಇದನ್ನು ಹಿಂದೆ ಕೂಡ ಬಳಸಲಾಗಿತ್ತು. ಈಗ ಅದು ಯಾರನ್ನೂ ಮೋಸಗೊಳಿಸುವುದಿಲ್ಲ” ಎಂದು ಹೇಳಿದ್ದಾರೆ.
ಇದರ ನಡುವೆಯೇ ಹೌತಿಗಳು ಈ ವಾರ ಸೌದಿ ಅರೇಬಿಯಾ ವಿರುದ್ಧ ಹಲವು ವರ್ಷಗಳಲ್ಲೇ ಅತಿದೊಡ್ಡ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ನಡೆಸಿದ್ದಾರೆ. ಈ ದಾಳಿಯಲ್ಲಿ ತೈಲ ಸ್ಥಾವರಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 73 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ ಪಶ್ಚಿಮ ಯೆಮೆನ್‌ನಲ್ಲಿ ನಡೆದ ಮತ್ತೊಂದು ಹೌತಿ ದಾಳಿಯಲ್ಲಿ ಸರ್ಕಾರದ ಎಂಟು ಯೋಧರು ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಜೊತೆಗೆ, ದಕ್ಷಿಣ ಸೌದಿ ಅರೇಬಿಯಾದ ಖಮೀಸ್ ಮುಶೈತ್‌ನಲ್ಲಿರುವ ಕಿಂಗ್ ಖಾಲಿದ್ ವಾಯುನೆಲೆಯನ್ನು (King Khalid Air Base) ಗುರಿಯಾಗಿಸಿಕೊಂಡು “ಡಜನ್‌ಗಟ್ಟಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು” ಬಳಸಿ ಭಾರಿ ದಾಳಿ ನಡೆಸಿರುವುದಾಗಿ ಹೌತಿಗಳು ಹೇಳಿಕೊಂಡಿವೆ.
ಯೆಮೆನ್‌ನ ಗೃಹಯುದ್ಧವು ಜುಲೈನಲ್ಲಿ ಮತ್ತೆ ತೀವ್ರಗೊಂಡ ನಂತರ ಹೌತಿಗಳು ಸೌದಿ ವಿರುದ್ಧ ಸಮುದ್ರ ನಿರ್ಬಂಧ ಘೋಷಿಸಿ, ಕೆಂಪು ಸಮುದ್ರದಲ್ಲಿ ಅದರ ಹಡಗುಗಳ ಮೇಲೆ ದಾಳಿ ಆರಂಭಿಸಿವೆ. ಅದಾದ ಬಳಿಕ ಹೌತಿಗಳು ಮತ್ತು ಸೌದಿ ಬೆಂಬಲಿತ ಯೆಮೆನ್ ಸರ್ಕಾರಿ ಪಡೆಗಳ ನಡುವಿನ ಯುದ್ಧ ಮತ್ತಷ್ಟು ಉಲ್ಬಣಗೊಂಡಿದೆ.

ಈ ನಡುವೆ, ಬಾಬ್ ಅಲ್-ಮಂದಬ್ ಜಲಸಂಧಿಯನ್ನು (Bab al-Mandab Strait) ಮುಚ್ಚಿದರೆ ಅದರ ಪರಿಣಾಮ ಜಗತ್ತಿನಾದ್ಯಂತ ತೀವ್ರವಾಗಿರಲಿದೆ ಎಂದು ಕತಾರ್ ಎಚ್ಚರಿಕೆ ನೀಡಿದೆ. ಕತಾರ್ ವಿದೇಶಾಂಗ ಸಚಿವಾಲಯದ ಅಧಿಕಾರಿ ಇಬ್ರಾಹಿಂ ಅಲ್ ಹಾಶ್ಮಿ, “ಈ ಪ್ರಮುಖ ಸಮುದ್ರ ಮಾರ್ಗವನ್ನು ಮುಚ್ಚುವುದು ಇಡೀ ಜಗತ್ತಿಗೆ ದುರಂತಕರ ಪರಿಣಾಮ ಉಂಟುಮಾಡಲಿದೆ” ಎಂದು ಹೇಳಿದ್ದಾರೆ.
ಇನ್ನೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೌದಿ ಯುವರಾಜರು ಯುದ್ಧದಲ್ಲಿ ಮಧ್ಯಪ್ರವೇಶಿಸುವಂತೆ ಮಾಡಿದ ಮನವಿಯನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಶನಿವಾರ ಹೌತಿಗಳು ಅಮೆರಿಕವನ್ನು ಸಂಪರ್ಕಿಸಿ ಈ ಸಂಘರ್ಷದಲ್ಲಿ ತಲೆಹಾಕದಂತೆ ವಿನಂತಿಸಿದ್ದರೆಂದು ಟ್ರಂಪ್ ಹೇಳಿದ್ದಾರೆ.
ಇರಾನ್ ಬೆಂಬಲಿತ ಹೌತಿ ಬಂಡುಕೋರರ ವೇಗದ ಮುನ್ನಡೆ ಮತ್ತು ಜಾಗತಿಕ ವ್ಯಾಪಾರಕ್ಕೆ ಅತ್ಯಂತ ಮಹತ್ವದ ಕೆಂಪು ಸಮುದ್ರದ ಸಾಗರ ಮಾರ್ಗದ ಮೇಲಿನ ಹೆಚ್ಚುತ್ತಿರುವ ಬೆದರಿಕೆ ಸೌದಿ ಅರೇಬಿಯಾದ ಆಡಳಿತವನ್ನು ಸಂಕಷ್ಟದ ಪರಿಸ್ಥಿತಿಗೆ ತಳ್ಳಿದೆ. ಈ ಬೆಳವಣಿಗೆಗಳ ನಡುವೆ ಮುಂದಿನ ಕ್ರಮಗಳ ಕುರಿತು ಸೌದಿ ಅರೆಬಿಯಾ ಗಂಭೀರ ಚಿಂತನೆ ನಡೆಸುತ್ತಿರುವುದಾಗಿ ವರದಿಗಳು ಸೂಚಿಸಿವೆ.

Team Udayaprabha
";