| Latest Version 9.0.7 |

State News

ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದ ಗಣೇಶೋತ್ಸವ

ಬೆಳಗಾವಿ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧ ಗ್ರಾಮಗಳು ಹಾಗೂ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಸಾರ್ವಜನಿಕ ಗಣೇಶ ಮೂರ್ತಿಗಳ ದರ್ಶನ ಪಡೆದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ವಿಶೇಷ ಪೂಜೆ ಸಲ್ಲಿಸಿದರು.

ಕ್ಷೇತ್ರದ ವಿವಿಧೆಡೆ ಆಯೋಜಿಸಲಾಗಿರುವ ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಅವರು, ವಿಘ್ನ ವಿನಾಶಕ ಶ್ರೀ ಗಣೇಶನಲ್ಲಿ ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಉತ್ತಮ ಆರೋಗ್ಯ ಕರುಣಿಸುವಂತೆ ಪ್ರಾರ್ಥಿಸಿದರು.
ಅಂಬೇವಾಡಿಯಲ್ಲಿ ಗಣೇಶೋತ್ಸವದ ಸಂಭ್ರಮ
ಅಂಬೇವಾಡಿ ಗ್ರಾಮದಲ್ಲಿ ವಿವಿಧ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಲಕ್ಷ್ಮೀ ಹೆಬ್ಬಾಳಕರ್ ಅವರು ಗಣೇಶ ಮೂರ್ತಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬಳಿಕ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲಾ ಮಕ್ಕಳು ಪ್ರದರ್ಶಿಸಿದ ವಿವಿಧ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದ ಅವರು, ಮಕ್ಕಳ ಪ್ರತಿಭೆಯನ್ನು ಮೆಚ್ಚಿ ಪ್ರೋತ್ಸಾಹಿಸಿದರು.
ಕಂಗ್ರಾಳಿ ಬಿಕೆ, ಗಣೇಶಪುರ, ಬಿಜಗರಣಿಯಲ್ಲೂ ದರ್ಶನ
ಕಂಗ್ರಾಳಿ ಬಿಕೆ ಗ್ರಾಮದ ಶ್ರೀ ಗಣೇಶ್ ಲೇಔಟ್ನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಗಣೇಶಪುರದ ಶ್ರೀ ಲಕ್ಷ್ಮೀ ನಗರ–ನೀಲಕಂಠ ವಿಹಾರದಲ್ಲಿರುವ ಗಣೇಶೋತ್ಸವ ಮಂಡಳಿಗೆ ಭೇಟಿ ನೀಡಿ ಗಣೇಶನ ದರ್ಶನ ಪಡೆದ ಅವರು, ಕ್ಷೇತ್ರದ ಜನತೆಯ ಒಳಿತಿಗಾಗಿ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾರ್ಥಿಸಿದರು.
ಬಿಜಗರಣಿ ಗ್ರಾಮದಲ್ಲಿ ಶ್ರೀ ವಿಕಾಸ ಯುವಕ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ ಅವರು, ಗ್ರಾಮಸ್ಥರಿಗೆ ಗಣೇಶೋತ್ಸವದ ಶುಭಾಶಯಗಳನ್ನು ತಿಳಿಸಿದರು.
ವಿವಿಧ ಬಡಾವಣೆಗಳಲ್ಲೂ ಗಣೇಶೋತ್ಸವದಲ್ಲಿ ಭಾಗಿ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಓಂಕಾರ್ ನಗರ, ಟೀಚರ್ಸ್ ಕಾಲೋನಿ, ಶಿವನಗರ, ಸಂಕಲ್ಪ ಲೇಔಟ್, ಕೆ.ಎಚ್.ಬಿ. ಸೊಸೈಟಿ ಹಾಗೂ ಆಜಾದ್ ಸೊಸೈಟಿ ವ್ಯಾಪ್ತಿಯಲ್ಲಿ ಸ್ವಯಂಭು ಯುವಕ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಶ್ರೀ ಗಣೇಶ ಮೂರ್ತಿಯ ದರ್ಶನ ಪಡೆದು ಪೂಜೆ ಸಲ್ಲಿಸಲಾಯಿತು.

ವಿಘ್ನನಿವಾರಕ ಶ್ರೀ ಗಣಪತಿಯು ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.
ಬೆನಕನಹಳ್ಳಿಯಲ್ಲಿ ಮಹಾಪ್ರಸಾದ ಸೇವೆಗೆ ಚಾಲನೆ
ಬೆನಕನಹಳ್ಳಿ ಗ್ರಾಮದ ವಿವಿಧ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಲಕ್ಷ್ಮೀ ಹೆಬ್ಬಾಳಕರ್ ಅವರು ಭವ್ಯ ಗಣೇಶ ಮೂರ್ತಿಗಳ ದರ್ಶನ ಪಡೆದರು.
ಗ್ರಾಮದ ವಿವಿಧೆಡೆ ಗಣೇಶೋತ್ಸವದ ಹಿನ್ನೆಲೆಯಲ್ಲಿ ಕಂಡುಬಂದ ಭಕ್ತಿ, ಶ್ರದ್ಧೆ ಹಾಗೂ ಉತ್ಸಾಹದ ವಾತಾವರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದೇ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಮಹಾಪ್ರಸಾದ ಸೇವೆಗೆ ಚಾಲನೆ ನೀಡಿ ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು.
ಸುಳಗಾ (ಯು) ಗ್ರಾಮದಲ್ಲಿ ಭಕ್ತಿಯ ವಾತಾವರಣ
ಸುಳಗಾ (ಯು) ಗ್ರಾಮದ ವಿವಿಧ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಸಾರ್ವಜನಿಕ ಗಣೇಶ ಮೂರ್ತಿಗಳ ದರ್ಶನವನ್ನೂ ಲಕ್ಷ್ಮೀ ಹೆಬ್ಬಾಳಕರ್ ಪಡೆದರು.
ಗಣೇಶೋತ್ಸವದ ಹಿನ್ನೆಲೆಯಲ್ಲಿ ಗ್ರಾಮದಾದ್ಯಂತ ಕಂಡುಬಂದ ಭಕ್ತಿ, ಉತ್ಸಾಹ ಹಾಗೂ ಶ್ರದ್ಧೆಯ ವಾತಾವರಣದಲ್ಲಿ ಪಾಲ್ಗೊಂಡ ಅವರು, ವಿಘ್ನ ವಿನಾಶಕ ಮಹಾಗಣಪತಿಯು ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಾಗೂ ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ, ಆಯುರಾರೋಗ್ಯ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಸ್ಥಳೀಯ ಮುಖಂಡರು, ಕಾರ್ಯಕರ್ತರು ಭಾಗಿಯಾದರು.
ಕಾಡಾ ಅಧ್ಯಕ್ಷ ಯುವರಾಜ ಕದಂ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳು ದೇಸೂರಕರ್, ಜಯವಂತ ಬಾಳೇಕುಂದ್ರಿ, ಲಕ್ಷ್ಮೀ ಯಳ್ಳೂರಕರ್, ಪುಂಡಲೀಕ್ ಬಾಂದುರ್ಗೆ, ಶಿವಾಜಿ ರಕ್ಷೆ, ಅಮುಲ್ ಭಾತ್ಕಂಡೆ, ಬಾಹುರಾವ್ ತುಡವೇಕರ್, ಯೋಗೇಶ್ ರಕ್ಷೆ, ವಿಕ್ರಂ ತರಳೆ, ಶಿವಾಜಿ ಕಾಂಬಳೆ, ಮಲ್ಲಪ್ಪ ತರಳೆ, ದತ್ತಾ ಠಾಕ್ರೆ, ಮೋಹನ್ ಸಾಂಬ್ರೇಕರ್, ಎಸ್. ಪಾಟೀಲ, ಮಹಾದೇವ ಪೋದಾರ್, ಚಂದ್ರಶೇಖರ್ ಶಿರಹಟ್ಟಿ, ಚಂದ್ರಕಾಂತ ಕಡಗೆ, ಸಾಗರ್ ಗೊಡಸೆ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ

ಗಣೇಶ ಮೂರ್ತಿಗಳ ದರ್ಶನ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥನೆ

ಬೆಳಗಾವಿ: ವಿಘ್ನ ವಿನಾಶಕ ಶ್ರೀ ಗಣೇಶನ ಹಬ್ಬದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಂದ ಪ್ರತಿಷ್ಠಾಪಿಸಲಾಗಿರುವ ಶ್ರೀ ಗಣೇಶ ಮೂರ್ತಿಗಳ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಹೊನ್ನಿಹಾಳ, ಮೊದಗಾ, ಪಂತ ಬಾಳೇಕುಂದ್ರಿ ಹಾಗೂ ಬಾಳೇಕುಂದ್ರಿ ಕೆ.ಎಚ್. ಗ್ರಾಮಗಳಿಗೆ ಭೇಟಿ ನೀಡಿದ ಅವರು, ವಿವಿಧ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಶ್ರೀ ಗಣೇಶ ಮೂರ್ತಿಗಳ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ, ಆರೋಗ್ಯ ಹಾಗೂ ನೆಮ್ಮದಿ ಕರುಣಿಸುವಂತೆ ಶ್ರೀ ಗಣೇಶನಲ್ಲಿ ಪ್ರಾರ್ಥಿಸಿದರು.
ಗಣೇಶೋತ್ಸವವು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಜನರನ್ನು ಒಗ್ಗೂಡಿಸುವ ಹಾಗೂ ಸಾಮಾಜಿಕ ಬಾಂಧವ್ಯವನ್ನು ಗಟ್ಟಿಗೊಳಿಸುವ ಮಹತ್ವದ ಹಬ್ಬವಾಗಿದೆ. ಗ್ರಾಮಗಳಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಎಲ್ಲ ವರ್ಗದ ಜನರು ಒಟ್ಟಾಗಿ ಹಬ್ಬವನ್ನು ಆಚರಿಸುತ್ತಿರುವುದು ನಮ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.
ಪ್ರತಿ ಗ್ರಾಮದಲ್ಲೂ ಗಣೇಶೋತ್ಸವದ ಹಿನ್ನೆಲೆಯಲ್ಲಿ ನಿರ್ಮಿಸಲಾಗಿರುವ ಅಲಂಕೃತ ಮಂಟಪಗಳು ಹಾಗೂ ನಡೆದಾಡುತ್ತಿರುವ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅವರು ವೀಕ್ಷಿಸಿದರು. ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಚನ್ನರಾಜ ಹಟ್ಟಿಹೊಳಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚನ್ನರಾಜ ಹಟ್ಟಿಹೊಳಿ, “ವಿಘ್ನ ವಿನಾಶಕ ಗಣಪತಿ ನಮ್ಮೆಲ್ಲರ ಬದುಕಿನಲ್ಲಿರುವ ಸಂಕಷ್ಟಗಳನ್ನು ದೂರ ಮಾಡಿ, ಉತ್ತಮ ಬದುಕಿನತ್ತ ಮುನ್ನಡೆಸಲಿ. ರೈತರು, ಕಾರ್ಮಿಕರು, ಯುವಕರು, ಮಹಿಳೆಯರು ಸೇರಿದಂತೆ ಸಮಾಜದ ಪ್ರತಿಯೊಬ್ಬರಿಗೂ ನೆಮ್ಮದಿ ಮತ್ತು ಸಮೃದ್ಧಿ ದೊರೆಯಲಿ. ನಮ್ಮ ಬೆಳಗಾವಿ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂಬುದು ಗಣೇಶನಲ್ಲಿ ನನ್ನ ಪ್ರಾರ್ಥನೆ” ಎಂದು ಹೇಳಿದರು.
ಗಣೇಶೋತ್ಸವದ ಸಂದರ್ಭದಲ್ಲಿ ಯುವಕರು ಹಾಗೂ ಸಾರ್ವಜನಿಕರು ಶಾಂತಿ, ಸೌಹಾರ್ದತೆ ಮತ್ತು ಭಕ್ತಿಭಾವದಿಂದ ಹಬ್ಬವನ್ನು ಆಚರಿಸಬೇಕು. ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆ, ಸ್ವಚ್ಛತೆ ಹಾಗೂ ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ನೀಡುವ ಮೂಲಕ ಹಬ್ಬದ ಸಂಭ್ರಮವನ್ನು ಅರ್ಥಪೂರ್ಣಗೊಳಿಸಬೇಕು ಎಂದು ಅವರು ಕರೆ ನೀಡಿದರು.
ಗ್ರಾಮಗಳಿಗೆ ಆಗಮಿಸಿದ ಚನ್ನರಾಜ ಹಟ್ಟಿಹೊಳಿ ಅವರಿಗೆ ಸ್ಥಳೀಯರು ಹಾಗೂ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಮಹಿಳೆಯರು, ಯುವಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶನ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Team Udayaprabha
";