| Latest Version 9.0.7 |

State News

ನವಭಾರತ ನಿರ್ಮಾಣದಲ್ಲಿ ಇಂಜಿನಿಯರ್ ಪಾತ್ರ ಬಹುಮುಖ್ಯ

ಬೆಳಗಾವಿ: ಸರ್ ಎಂ. ವಿಶ್ವೇಶ್ವರಯ್ಯ ಅವರ 165ನೇ ಜನ್ಮ ಜಯಂತಿ ಅಂಗವಾಗಿ ಬ್ರಹ್ಮಕುಮಾರಿಸ್ ಸಿಟಿ ಸೆಂಟರ್, ಕಾಳಿ ಅಂಬ್ರಾಯಿ ಸೇವಾ ಕೇಂದ್ರದಲ್ಲಿ ಇಂಜಿನಿಯರ್ಸ್ ಡೇ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸರಕಾರಿ ಪೊಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ವಾಸುದೇವ್ ಅಪ್ಪಾಜಿ ಗೋಳ ಮಾತನಾಡಿ, ನವ ಭಾರತ ನಿರ್ಮಾಣ ಮತ್ತು ದೇಶದ ತಾಂತ್ರಿಕ ಪ್ರಗತಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಮಹತ್ವದ್ದಾಗಿದೆ ಎಂದರು. ಕೇವಲ ಬಾಹ್ಯ ನಿರ್ಮಾಣವಷ್ಟೇ ಅಲ್ಲ, ಆಂತರಿಕ ಮೌಲ್ಯಗಳ ನಿರ್ಮಾಣವೂ ಇಂದಿನ ಅಗತ್ಯ ಎಂದು ಹೇಳಿದ ಅವರು, “ಮೌಲ್ಯಯುತ ಇಂಜಿನಿಯರ್, ಉಜ್ವಲ ಭಾರತ” ವಿಷಯದ ಮೇಲೆ ಉಪನ್ಯಾಸ ನೀಡಿದರು. ಸರ್ ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯಿಂದ ನಿರ್ಮಿತವಾದ ಕನ್ನಂಬಾಡಿ ಆಣೆಕಟ್ಟು ಇಂದು ಬೆಂಗಳೂರು, ಮೈಸೂರು, ಮಂಡ್ಯ ಜನರಿಗೆ ಕುಡಿಯುವ ನೀರು ಮತ್ತು ರೈತರಿಗೆ ಬೆಳೆ ನೀರು ಒದಗಿಸುತ್ತಿದೆ ಎಂದು ನೆನಪಿಸಿದರು.

ಬುಡಾ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಹಾಗೂ ಅಖಿಲ ಭಾರತ ಹಿರಿಯ ನಾಗರಿಕ ಸಂಘದ ಉಪಾಧ್ಯಕ್ಷ ಮಹಾಂತೇಶ ಹಿರೇಮಠ ಅವರು ರಾಜಯೋಗದಿಂದ ತಮ್ಮ ಜೀವನದಲ್ಲಿ ಆದ ಬದಲಾವಣೆ ಹಂಚಿಕೊಂಡರು. ಸಹಜ ರಾಜಯೋಗ ಅಭ್ಯಾಸದಿಂದ ತಮ್ಮಲ್ಲಿರುವ ದುರಭ್ಯಾಸಗಳು ಮತ್ತು ದುಶ್ಚಟಗಳು ದೂರವಾಗಿವೆ. ಹಿಂದೆ ಬಹಳ ಕೋಪ ಬರುತ್ತಿತ್ತು, ಈಗ ಕಡಿಮೆಯಾಗಿದೆ. ರಾಜಯೋಗದಿಂದ ಶಾಂತಿ ಮತ್ತು ನೆಮ್ಮದಿಯ ಜೀವನ ಸಾಧ್ಯ ಎಂದು ಹೇಳಿದರು.

ನಿವೃತ್ತ ಪಿಡಬ್ಲ್ಯೂಡಿ ಇಂಜಿನಿಯರ್ ಎ. ವೈ. ಬೆಂಡಿಗೇರಿ ಮಾತನಾಡಿ, ಸರ್ ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರವಾಗಿದೆ. ಅವರ ಮಾರ್ಗದರ್ಶನದಲ್ಲಿ ನಡೆಯೋಣ ಎಂದು ಕರೆ ನೀಡಿದರು.

ಸಿಟಿ ಸೆಂಟರ್ ಸೇವಾ ಕೇಂದ್ರದ ಸಂಚಾಲಕಿ ರಾಜಯೋಗಿನಿ ಬಿಕೆ ಸಾಧನಾ ಅಕ್ಕನವರು ಎಲ್ಲ ಅತಿಥಿಗಳಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿದರು.

ಬಿಕೆ ಸುಧೀರ್, ಮೆಕ್ಯಾನಿಕಲ್ ಇಂಜಿನಿಯರ್ ವೈಶಾಲಿ ವಿಜಯ ಪಾಟೀಲ, ಇಂಜಿನಿಯರ್ ವಿವೇಕ್ ವಿಜಯ ಪಾಟೀಲ್, ಮೆಕ್ಯಾನಿಕಲ್ ಇಂಜಿನಿಯರ್ ಸುನಿತಾ, ಇಂಜಿನಿಯರ್ ಎಸ್. ಇಂಚಲ್, ಪ್ರಾಜೆಕ್ಟ್ ಮ್ಯಾನೇಜರ್ ಅಶೋಕ, ಬಿಕೆ ಸಂಪತ್ತಿ ಅಕ್ಕ, ಬಿಕೆ ಬಸವರಾಜ್ ಸದಲಗಿ, ಬಿಕೆ ಸುರೇಶ್, ಬಿಕೆ ಶ್ರೀಕಾಂತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪೂರ್ಣಿಮಾ ಪಾಟೀಲ ನಿರೂಪಿಸಿ ವಂದಿಸಿದರು.

Team Udayaprabha
";