ಮಂಗಳೂರು:
ಕರಾವಳಿ ಮತ್ತು ಮಲೆನಾಡು ಭಾಗಗಳಿಗೆ ಹೊಸ ರೂಪ ನೀಡುವ ಮೂಲಕ ಇಲ್ಲಿನ ಮಾನವ ಸಂಪತ್ತು ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕರಾವಳಿ ಭಾಗಕ್ಕೆ 340 ಕಿ.ಮೀ. ಉದ್ದದ ಕರಾವಳಿ ತೀರವಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಈ ಭಾಗದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಬೇಕು. ಕರಾವಳಿ ಹಾಗೂ ಮಲೆನಾಡಿನಲ್ಲಿ ವಲಸೆ ಹೋಗುವುದನ್ನು ತಡೆಯುವಂತಹ ಅವಕಾಶಗಳನ್ನು ಸೃಷ್ಟಿಸಬೇಕು” ಎಂದರು.
ಕರ್ನಾಟಕದಲ್ಲೇ ಕರಾವಳಿ–ಮಲೆನಾಡು ಭಾಗದಲ್ಲಿ ಹೆಚ್ಚು ವಿದ್ಯಾವಂತರು, ಪ್ರಜ್ಞಾವಂತರು ಹಾಗೂ ಪ್ರತಿಭಾವಂತ ಮಾನವ ಸಂಪನ್ಮೂಲವಿದೆ. ಈ ಮಾನವ ಸಂಪತ್ತಿಗೆ ಸ್ಥಳೀಯವಾಗಿಯೇ ಅವಕಾಶ ಮತ್ತು ಶಕ್ತಿ ತುಂಬುವ ಅಗತ್ಯವಿದೆ. ಈ ನಾಡು ಯಾವುದಕ್ಕೂ ಕಡಿಮೆಯಿಲ್ಲ ಎಂದು ಹೇಳಿದರು.
*30–40 ವರ್ಷಗಳ ಬೇಡಿಕೆಗಳತ್ತ ಸರ್ಕಾರದ ಗಮನ*
ಕರಾವಳಿ ಭಾಗದ ಜನರು ಕಳೆದ 30–40 ವರ್ಷಗಳಿಂದ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು, ಪಕ್ಷದವರು ಸೇರಿದಂತೆ ಬಿಜೆಪಿ ಶಾಸಕರು ಹಾಗೂ ಸಂಸದರೂ ತಮ್ಮ ಅಭಿಪ್ರಾಯ ಮತ್ತು ಬೇಡಿಕೆಗಳನ್ನು ತಿಳಿಸಿದ್ದಾರೆ. “ನಾವು ಕೈಹಿಡಿಯದಿದ್ದರೆ ಇನ್ನಾರು ಕೈಹಿಡಿಯುತ್ತಾರೆ ಎಂಬ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಅವರ ಹಲವು ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡಿದ್ದೇನೆ” ಎಂದು ಹೇಳಿದರು.
ಈ ಎಲ್ಲ ವಿಚಾರಗಳ ಕುರಿತು ಶುಕ್ರವಾರ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಸರ್ಕಾರ ಕೈಗೊಳ್ಳುವ ತೀರ್ಮಾನಗಳನ್ನು ಬಳಿಕ ತಿಳಿಸಲಾಗುವುದು ಎಂದರು.
*ಕಸ್ತೂರಿರಂಗನ್: ರೈತರ ವಾಸ್ತವಾಂಶ ಅರಿಯಲು ವಿಶೇಷ ಅಧಿವೇಶನ*
ಕಸ್ತೂರಿರಂಗನ್ ವರದಿ ಜಾರಿ ವಿಚಾರದಲ್ಲಿ ರೈತರು ಹಾಗೂ ಮಲೆನಾಡು–ಕರಾವಳಿ ಭಾಗದ ಜನರಿಗೆ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆಯೂ ಪ್ರತಿಕ್ರಿಯೆಸಿದ ಅವರು, ಸರ್ಕಾರ ಈಗಾಗಲೇ ವರದಿಯನ್ನು ತಿರಸ್ಕರಿಸುವ ನಿಲುವು ಹೊಂದಿದ್ದರೂ, ಈ ವಿಚಾರದಲ್ಲಿ ವಿವಿಧ ಒತ್ತಡಗಳು ಮತ್ತು ಅಭಿಪ್ರಾಯಗಳಿವೆ ಎಂದರು.
ಈ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನದಲ್ಲಿ ಎಲ್ಲ ಶಾಸಕರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಲಾಗುವುದು. ಅಧಿವೇಶನಕ್ಕೂ ಮುನ್ನ ತಾವೇ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಗ್ರೌಂಡ್ ರಿಯಾಲಿಟಿ ಅರಿಯುತ್ತಿರುವುದಾಗಿ ಎಂದು ಹೇಳಿದರು.
“ಅಸೆಂಬ್ಲಿಯಲ್ಲಿ ಚರ್ಚೆ ಮಾಡುವ ಮೊದಲು, ಯಾವುದೇ ಅಂತಿಮ ಅಭಿಪ್ರಾಯಕ್ಕೆ ಬರುವ ಮೊದಲು ವಾಸ್ತವಾಂಶ ತಿಳಿದುಕೊಳ್ಳಬೇಕು. ಸಾಮಾನ್ಯ ರೈತರು, ಸ್ಥಳೀಯ ಜನರು, ಜನಪ್ರತಿನಿಧಿಗಳು ಹಾಗೂ ಹೋರಾಟಗಾರರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಿದ್ದೇನೆ” ಎಂದರು.
*ಬರ, ರೈತರ ಸಮಸ್ಯೆಗೂ ವಿಶೇಷ ಅಧಿವೇಶನ*
ವಿಶೇಷ ಅಧಿವೇಶನದಲ್ಲಿ ಕಸ್ತೂರಿರಂಗನ್ ವರದಿ ಮಾತ್ರವಲ್ಲದೆ, ರೈತರ ಸಮಸ್ಯೆಗಳು ಮತ್ತು ಬರ ಪರಿಸ್ಥಿತಿಯ ಬಗ್ಗೆಯೂ ಚರ್ಚಿಸಲಾಗುವುದು. ರೈತರ ಬದುಕಿನ ಮೇಲೆ ನೇರವಾಗಿ ಪರಿಣಾಮ ಬೀರುವ ಸಮಸ್ಯೆಗಳನ್ನು ಅರಿತುಕೊಂಡು ಚರ್ಚಿಸಲು ಅಧಿವೇಶನ ಕರೆದಿರುವುದಾಗಿ ಎಂದು ತಿಳಿಸಿದರು.
ಉಮರ್ ಖಾಲೀದ್ ವಿಚಾರವಾಗಿ ಬಿ.ಕೆ. ಹರಿಪ್ರಸಾದ್ ಅವರು ಹೇಳಿಕೆ ಕುರಿತು ಮಾಧ್ಯಮ ಪ್ರತಿನಿಧಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬಿ.ಕೆ. ಹರಿಪ್ರಸಾದ್ ಅವರು ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.
ನಾಡಿನ ಸಮೃದ್ಧಿ ಹಾಗೂ ಅಭಿವೃದ್ಧಿಗೆ ಗಾಣಗಾಪುರ ದತ್ತಾತ್ರೇಯನಲ್ಲಿ ವಿಶೇಷ ಪ್ರಾರ್ಥನೆ: ಸಿಎಂ ಡಿ ಕೆ ಶಿವಕುಮಾರ್
ಕಲಬುರ್ಗಿ / ಗಾಣಗಾಪುರ:
“ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದಿಂದ ಜನತೆಗೆ ಮುಕ್ತಿ ಸಿಗಲಿ, ನಾಡಿನಲ್ಲಿ ಉತ್ತಮ ಮಳೆ- ಬೆಳೆಯಾಗಿ ಶಾಂತಿ, ನೆಮ್ಮದಿ ನೆಲೆಸಲಿ ಎಂದು ಗಾಣಗಾಪುರ ದತ್ತಾತ್ರೇಯನಲ್ಲಿ ಪ್ರಾರ್ಥಿಸಿದ್ದೇನೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಅವರು ಗಾಣಗಾಪುರದ ಶ್ರೀ ದತ್ತಾತ್ರೇಯ ಸ್ವಾಮಿಯ ಸನ್ನಿಧಿಗೆ ಗುರುವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
‘ಗಾಣಗಾಪುರ ದಕ್ಷಿಣ ಭಾರತದ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠ ಪುಣ್ಯಕ್ಷೇತ್ರವಾಗಿದೆ. ಇಲ್ಲಿಗೆ ಆಗಮಿಸುವ ಭಕ್ತರ ಮನೋಕಾಮನೆಗಳು ಈಡೇರುತ್ತವೆ ಎಂಬ ದೃಢ ನಂಬಿಕೆಯಿದೆ. ನನ್ನ ಕಷ್ಟಕಾಲದಲ್ಲಿ ಹಾಗೂ ಅಭಿವೃದ್ಧಿಯ ಪಯಣದಲ್ಲಿ ಇಲ್ಲಿನ ಅರ್ಚಕರು ಮತ್ತು ಅಭಿಮಾನಿಗಳು ತಮಗಾಗಿ ಹಾಗೂ ರಾಜ್ಯದ ಶ್ರೇಯಸ್ಸಿಗೆ ನಿರಂತರ ಪ್ರಾರ್ಥನೆ ಸಲ್ಲಿಸಿದ್ದರು. ಇವತ್ತು ಬಹಳ ಪುಣ್ಯದಿನ. 79ನೇ ಕಲ್ಯಾಣ ಕರ್ನಾಟಕ ಉತ್ಸವ ಸಂದರ್ಭದಲ್ಲಿ ಭಗವಂತನ ಪ್ರಾರ್ಥನೆ ಮಾಡುವ ಭಾಗ್ಯ ನನಗೆ ದೊರೆತಿದೆ’ ಎಂದರು.
“ಗಾಣಗಾಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಭಕ್ತಾದಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ನಮ್ಮ ಸರ್ಕಾರ ಈಗಾಗಲೇ ಸೂಕ್ತ ಯೋಜನೆಗಳನ್ನು ಘೋಷಿಸಿದೆ. ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮನವಿಯಂತೆ ಹಂತ- ಹಂತವಾಗಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು” ಎಂದು ಅವರು ಭರವಸೆ ನೀಡಿದರು.
“ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಎದುರಾಗಿದೆ. ಬಿಜೆಪಿ ಪಕ್ಷದ ನಾಯಕರು ಅಧಿವೇಶನದಲ್ಲಿ ಚರ್ಚೆ ಮಾಡದೆ, ಕೇವಲ ರಾಜಕೀಯ ಮಾಡಿದರು. ಬರಗಾಲ ಕುರಿತು ಚರ್ಚಿಸಲು ಈ ತಿಂಗಳ 21ರಿಂದ 3 ದಿನಗಳ ಕಾಲ ವಿಶೇಷ ಅಧಿವೇಶನ ಕರೆಯಲಾಗಿದೆ” ಎಂದರು.
ಯುಪಿಐ ಶುಲ್ಕ ವಿದೇಶಿ ವ್ಯಾಪಾರಿಗಳಿಗೆ ಅನುಕೂಲ
ಕೇಂದ್ರದಿಂದ ದೊಡ್ಡ ಉದ್ಯಮಿಗಳ ಸಾಲಮನ್ನಾ
ಕಲಬುರ್ಗಿ :
“ಯುಪಿಐ ಪಾವತಿಗೆ ವರ್ತಕರ ಮೇಲೆ ಶುಲ್ಕ ವಿಧಿಸಿರುವ ಕೇಂದ್ರ ಸರ್ಕಾರ ಪಿಕ್ ಪಾಕೆಟ್ ಮಾಡುತ್ತಿದೆ. ಶಿಕ್ಷಕರಿಗೆ Tr. ಎಂಜಿನಿಯರ್ ಗಳಿಗೆ Er. ಪದನಾಮ ನೀಡಿರುವಂತೆ ಕೇಂದ್ರ ಸರ್ಕಾರದ ಎಲ್ಲಾ ಸಚಿವರಿಗೂ ಪಿಕ್ ಪಾಕೆಟ್ ನಲ್ಲಿ ಪಿಎಚ್ ಡಿ ನೀಡಬೇಕಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ವ್ಯಂಗ್ಯವಾಡಿದರು.
ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಶಿವಕುಮಾರ್ ಅವರು ಗುರುವಾರ ನಡೆದ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದರು.
“ನಮ್ಮೆಲ್ಲ ವರ್ತಕರು ಈಗ ಕೇಂದ್ರ ವಿಧಿಸಲು ಹೊರಟಿರುವ ಯುಪಿಐ ಶುಲ್ಕದ ಭಾರವನ್ನ ಗ್ರಾಹಕರ ಮೇಲೆ ಹಾಕುತ್ತಾರೆ. ಇದು ಕೇಂದ್ರ ಸರ್ಕಾರದಿಂದ ಜನಸಾಮಾನ್ಯರ ಹೊಸ ಪಿಕ್ ಪಾಕೆಟ್. ನಾನು ಇದನ್ನು ಖಂಡಿಸುತ್ತೇನೆ. ಯಪಿಐ ಶುಲ್ಕ ಜಾರಿಯ ವಿರುದ್ದ ವಿರುದ್ಧ ಪ್ರತಿಭಟನೆ ಮಾಡಲೇ ಬೇಕಾಗುತ್ತದೆ. ಹೊರಗಿನ ದೇಶದ ವರ್ತಕರಿಗೆ ಅನುಕೂಲ ಮಾಡಿಕೊಡಲು ಇಂಥ ಘೋರ ತೀರ್ಮಾನ ಮಾಡಲಾಗಿದೆ. ಇದನ್ನು ವಾಪಸ್ಸು ಪಡೆದು ಮೊದಲಿನ ಸ್ಥಿತಿಯನ್ನೇ ತರಲು ಒತ್ತಾಯ ಮಾಡುತ್ತೇವೆ” ಎಂದರು.
“ಯಾವ ಕಾರಣಕ್ಕೆ ಕ್ಯಾಸ್ ಲೆಸ್ ಇಂಡಿಯಾ ಎಂದು ಅವರು ಕರೆದರು. ನೋಟು ಬ್ಯಾನ್ ಮಾಡಿದ್ದು ಯಾವ ಕಾರಣಕ್ಕೆ ಈಗ ಮತ್ತೆ ಹಳೆಯ ಪದ್ದತಿ ಕಡೆಗೆ ಹೋಗುವಂತೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಎನ್ ಪಿಸಿಐ (NPCI) ತೆರಿಗೆ ರಹಿತ ಲಾಭವೇ 6,119 ಕೋಟಿ” ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವ ಬಗ್ಗೆ ಕೇಳಿದಾಗ ಬಗ್ಗೆ “ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ಬಳಿ ಮಾತನಾಡುತ್ತೇನೆ. ಅವರಿಗೆ ಎಲ್ಲಿ ಬೇಕೋ ಅಲ್ಲಿ ಜಾಗ ಕೊಡೋಣ” ಎಂದರು.
“ಬಿಜೆಪಿಯವರಿಗೆ ರಾಜಕೀಯವೇ ಮುಖ್ಯ. ರೈತರು ಹಾಗೂ ಬಡವರ ಬಗ್ಗೆ ಅವರಿಗೆ ಕಾಳಜಿ ಇಲ್ಲ. ವಿಧಾನಮಂಡಲದ ಅಧಿವೇಶನವನ್ನು ನಡೆಸಲು ಕೂಡ ಬಿಡಲಿಲ್ಲ. ಆ ಪಕ್ಷದ ಶಾಸಕರೇ ನಮ್ಮ ಬಳಿ ಬಂದು ಗೋಳು ತೋಡಿಕೊಂಡಿದ್ದಾರೆ. ಅವರು ಏನು ಬೇಕಾದರೂ ಮಾಡಲಿ ಎಂದು ತೀರ್ಮಾನಿಸಿ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಕಸ್ತೂರಿ ರಂಗನ್ ವರದಿ, ಬರಗಾಲ ಹಾಗೂ ರೈತರ ಸಮಸ್ಯೆ ಬಗ್ಗೆ ಚರ್ಚಿಸಲಾಗುವುದು. ಇದನ್ನು ಬಿಟ್ಟರೆ ಬೇರೆ ಯಾವ ಚರ್ಚೆಯೂ ನಡೆಯುವುದಿಲ್ಲ” ಎಂದರು.
ವಿರೋಧ ಪಕ್ಷದವರು ಚರ್ಚೆಗೆ ಅವಕಾಶ ನೀಡುತ್ತಾರೆಯೇ ಎಂದು ಕೇಳಿದಾಗ, “ಅವರು ಏನೂ ಮಾಡಿದರೂ ನಾವಂತೂ ಚರ್ಚೆಗೆ ಸಿದ್ದ. ಅವರಿಗೆ ಆಸಕ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಚರ್ಚೆಗೆ ಅವಕಾಶ ಕಲ್ಪಿಸಿಕೊಳ್ಳಲು ನಮಗೂ ಅಲ್ಪ ಸ್ವಲ್ಪ ಅರಿವಿದೆ” ಎಂದರು.
ಬರಪೀಡಿತ ತಾಲ್ಲೂಕುಗಳ ರೈತರ ಸಾಲ ಪಾವತಿ, ವಸೂಲಾತಿಯನ್ನು ಬ್ಯಾಂಕ್ ಗಳು ಒಂದು ವರ್ಷ ಮುಂದೂಡಿರುವ ಬಗ್ಗೆ ಕೇಳಿದಾಗ, “ಮೂರು ದಿನ ತಡೆಯಿರಿ. ಬ್ಯಾಂಕುಗಳ ಜೊತೆಗೆ ಮಾತನಾಡಬೇಕು. ಸಾಲ ಮನ್ನಾ ಮಾಡಿ ಎಂದು ಕೆಲಸವರು ಹೇಳಿದ್ದಾರೆ. ಆರ್.ಅಶೋಕ್, ವಿಜಯೇಂದ್ರ ಅವರನ್ನೆಲ್ಲಾ ಕರೆದುಕೊಂಡು ನವದೆಹಲಿಗೆ ಪ್ರಧಾನಿಗಳನ್ನು ಭೇಟಿ ಮಾಡಲು ಹೋಗಬೇಕಲ್ಲಾ. ಕೇಂದ್ರ ಸರ್ಕಾರ ದೊಡ್ಡ ದೊಡ್ಡವರ ಸಾಲ ಮನ್ನಾವನ್ನು ಒಂದೇ ಏಟಿಗೆ ಮಾಡುತ್ತಿದ್ದಾರೆ. ಅದೇ ರೀತಿ ನಮ್ಮ ರೈತರನ್ನೂ ಬದುಕಿಸಿ ಎಂದು ಅವರೆಲ್ಲಾ ಹೇಳಲು ಬರಬೇಕಲ್ಲ. ವಿಧಾನಮಂಡಲದಲ್ಲಿ ಅವರು ಈ ಬಗ್ಗೆ ಸಲಹೆಗಳನ್ನು ನೀಡಲಿ” ಎಂದು ಹೇಳಿದರು.
ಬರ ಘೋಷಣೆಯಾಗದಿರುವ ತಾಲ್ಲೂಕುಗಳ ರೈತರ ಪರವಾಗಿ ಸರ್ಕಾರ ನಿಲ್ಲಲಿದೆಯೇ ಎಂಬ ಪ್ರಶ್ನೆಗೆ “ಈಗ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ವರದಿಯೂ ಈಗಷ್ಟೇ ಬಂದಿದೆ ಶೀಘ್ರದಲ್ಲೇ ಘೋಷಿಸಲಾಗುವುದು” ಎಂದರು.
ಕಲ್ಬುರ್ಗಿ ಜಿಲ್ಲೆಯ ಕಲ್ಯಾಣಕ್ಕಾಗಿ ಮಾಡಿರುವ ಘೋಷಣೆಗಳಿಗೆ ಅನುದಾನದ ಪೂರೈಕೆ ಬಗ್ಗೆ ಕೇಳಿದಾಗ, “ಕೆಕೆಆರ್ ಡಿ ಬಿಯ ಅನುದಾನವೂ ಸರ್ಕಾರದ ಅನುದಾನವೇ ಆಗಿರುತ್ತದೆ. ನಾನು ಆಡಳಿತ ಪಕ್ಷದ ಮುಖ್ಯಮಂತ್ರಿಯಾಗಿ ಹೇಳುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ ಜನರು ನಮ್ಮ ಸರ್ಕಾರದ ಮೇಲೆ ಅಪಾರ ವಿಶ್ವಾಸವನ್ನಿಟ್ಟಿದ್ದಾರೆ. ಸರ್ಕಾರ ಹಾಗೂ ಸರ್ಕಾರದ ಭಾಗವೇ ಆಗಿರುವ ಕೆಕೆಆರ್ ಡಿ ಬಿ ಯೂ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಘೋಷಣೆ ಮಾಡಿರುವ ಕಾರ್ಯಕ್ರಮಗಳಿಗೆ ಅನುಗುಣವಾಗಿ ಸೂಕ್ತ ಅನುದದಾನವನ್ನು ಪೂರೈಸಲಾಗುವುದು” ಎಂದರು.
ಮೋಡ ಬಿತ್ತನೆ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಳಿದಾಗ, “ಕಳೆದೊಂದು ವಾರದಿಂದ, ಅವಕಾಶವಿರುವ ಕಡೆಗಳಲ್ಲಿ ಮೋಡಬಿತ್ತನೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ”ಎಂದರು.
ಮಹಾರಾಷ್ಟ್ರದ ಹಂತದಲ್ಲಿಯೇ ಭೀಮಾ ನದಿ ನೀರಿನ ಅತಿಯಾದ ಬಳಕೆ ಬಗ್ಗೆ ಕೇಳಿದಾಗ, “ಮಹಾರಾಷ್ಟ್ರದಲ್ಲಿಯೇ ಭೀಮಾನದಿ ನೀರಿನ ಅತಿಯಾದ ಬಳಕೆಯಾಗುತ್ತಿರುವ ಸ್ಥಳೀಯ ಶಾಸಕರು ಮಾಹಿತಿ ನೀಡಿದ್ದಾರೆ. ಇದರಿಂದ ಗಡಿ ಜಿಲ್ಲೆಗಳಿಗೆ ಕುಡಿಯುವ ನೀರಿಗೆ ತೊಂದರೆಯುಂಟಾಗಿದೆ. ಈ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಿದ್ದೇನೆ” ಎಂದರು.
ಹಿಂದುಳಿದ ಜಿಲ್ಲೆಗಳಲ್ಲೂ ಸಚಿವ ಸಂಪುಟಸಭೆ ನಡೆಸುವ ಬಗ್ಗೆ ಕೇಳಿದಾಗ, “ಮಂಗಳೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ನಡೆಯಲಿದೆ. ಆ ಭಾಗದ ಶಾಸಕರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ಕರಾವಳಿ ಮತ್ತು ಮಲೆನಾಡು ಭಾಗದ ಅಭಿವೃದ್ಧಿಗೆ ಪ್ರವಾಸೋದ್ಯಮ ನೀತಿ ಬಗ್ಗೆ ಚರ್ಚಿಸಿದ್ದು, ನಾಳೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
“ಪ್ರದೇಶವಾರು ನಡೆದ ಸಚಿವ ಸಂಪುಟ ಸಭೆಗಳಲ್ಲಿ ಘೋಷಿಸಲಾದ ಕಾರ್ಯಕ್ರಮಗಳು ಹಾಗೂ ಅದಕ್ಕೆ ಬಿಡುಗಡೆಯಾದ ಅನುದಾನಗಳ ವಿವರಗಳನ್ನು ಸಧ್ಯದಲ್ಲಿಯೇ ನೀಡಲಾಗುವುದು” ಎಂದರು.
“ತುಂಗಭದ್ರಾದಲ್ಲಿ 33 ಟಿಎಂಸಿ ನೀರು ವ್ಯರ್ಥವಾಗುತ್ತಿದ್ದು, ಆಂಧ್ರಪ್ರದೇಶಕ್ಕೆ ಹರಿದುಹೋಗುತ್ತಿದೆ. ತುಂಗಭದ್ರಾ ನೀರು ಪೋಲಾಗುವುದನ್ನು ತಪ್ಪಿಸುವ ಬಗ್ಗೆ ನಾನು, ಆಂಧ್ರಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಒಮ್ಮತಕ್ಕೆ ಬಂದಿದ್ದೇವೆ. ಗೋದಾವರಿ, ಕೃಷ್ಣೆ, ಕಾವೇರಿ ಜೋಡಣೆ ಬಗ್ಗೆಯೂ ಕೇಂದ್ರಕ್ಕೆ ಮೂರು ರಾಜ್ಯಗಳ ಒಮ್ಮತವನ್ನು ತಿಳಿಸಲಾಗಿದೆ. ಈ ನಿರ್ಣಯ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಒತ್ತು ನೀಡಲಿದೆ. ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಈ ರೀತಿ ಒಮ್ಮತಕ್ಕೆ ಬಂದಿರುವುದು ಇದೇ ಮೊದಲ ಬಾರಿ. ಮೂರು ರಾಜ್ಯಗಳ ನಡುವೆ ಯಾವುದೇ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ನಾನು ಅಧಿಕಾರ ವಹಿಸಿಕೊಂಡ ಒಂದು ತಿಂಗಳಲ್ಲಿ ಈ ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ” ಎಂದರು.
“ನವಲೆ ಸಮತೋಲಿತ ಜಲಾಶಯದ ಕರ್ನಾಟಕದಲ್ಲಿಯೇ ನಿರ್ಮಾಣವಾಗಲಿದ್ದು, ಇದರಿಂದ ಮೂರು ರಾಜ್ಯಗಳಿಗೆ ಲಾಭವಾಗಲಿದೆ” ಎಂದರು.
ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಅಪೌಷ್ಠಿಕತೆ ನಿವಾರಣೆಗೆ ಸರ್ಕಾರದ ಕ್ರಮಗಳ ಬಗ್ಗೆ ಕೇಳಿದಾಗ “ಪೌಷ್ಠಿಕತೆ ಹೆಚ್ಚಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕರ್ನಾಟಕ ಪ್ರೋಟೀನ್ ಮಿಷನ್ ಜಾರಿ ಮಾಡಲಿದೆ. ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್ ಜಿ ಅವರ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ಹಾಗೂ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ನೆರವು ಒದಗಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಆರ್ಥಿಕ ಮಿಷನ್ ಗೋವಿಂದರಾವ್ ಸಮಿತಿ ವರದಿ ಮೇಲೆಯೇ ರೂಪಿತವಾಗಿದೆ” ಎಂದು ಉತ್ತರಿಸಿದರು.


,


















