ಆಗ ನಾನು ಅತೀ ಚಿಕ್ಕವ.ಆಗಿನ ನಮಗೆ ಯಕ್ಷಗಾನವೇ ಏಕೈಕ ಮನೋರಂಜನೆಯ ಸಾಧನವಾಗಿತ್ತು.
ಅಂದು ನಮಗೆ ಗೊತ್ತಿರೋದು ಹೆಚ್ಚಾಗಿ ಎರಡೇ ಎರಡು ಮೇಳಗಳು ಒಂದು ಮಂದಾರ್ತಿ ಇನ್ನೊಂದು ಮಾರಣಕಟ್ಟೆ.
ಮಂದಾರ್ತಿ ಮೇಳದಲ್ಲಿ ಹರಾಡಿ ರಾಮಗಾಣಿಗರು ಪ್ರಸಿದ್ಧ 2ನೇ
ವೇಷದಾರಿಯಾದರೆ ಮಾರಣ ಕಟ್ಟೆ ಮೇಳದಲ್ಲಿ ವೀರಭದ್ರ ನಾಯಕರು ಅಥವಾ ಉಡುಪಿ ಬಸವ ನಾಯಕರು ಎರಡನೇ ವೇಷ ಹಾಕುತ್ತಿದ್ದರು.
ಆಗ ದೊಂದಿ ಬೆಳಕಿನ ಜೊತೆಯಲ್ಲಿ ಒಂದೆರಡು ಗ್ಯಾಸ್ ಲೈಟ್ ಗಳ ಏರ್ಪಾಟು ಮಾಡಲಾಗುತ್ತಿತ್ತು. ಗದ್ದೆಬಯಲಿನಲ್ಲಿ ನಾಲ್ಕು ತೆಮೆ ನಾಲ್ಕು ದಿಕ್ಕಿಗೆ ಕಟ್ಟಿ ಒಂದು ಹಡಿಮಂಚ ಇಟ್ಟರೆ ಅಲ್ಲಿಗೆ ರಂಗಸ್ಥಳದ ವ್ಯವಸ್ಥೆ ಆದಂತೆ.ಧ್ವನಿ ವರ್ಧಕವಂತು ದೂರದ ಮಾತಾಯಿತು.
ಇನ್ನು ದೂರ ದೂರದಿಂದ ಪ್ರೇಕ್ಷಕರು ಚಂಡೆ ಸದ್ದು (ಅಬ್ಬರತಾಳ) ಕೇಳಿ ಆಟಕ್ಕೆ ಬರುವ ಕಾಲವದು.
ಕಾಲ್ನಡಿಗೆಯಲ್ಲಿ ಬಂದು ನೆಲದ ಮೇಲೆ ಕೂತು ಬೆಳಗಿನ ತನಕ ಫಿಟ್ಟೆoಬ ಶಬ್ದವನ್ನು ಮಾಡದೆ ಅತಿ ಶ್ರದ್ಧಾ ಭಕ್ತಿಯಿಂದ ಆಟ ನೋಡುವ ಕಾಲ. ಮಧ್ಯಾಹ್ನ ಊಟದ ವ್ಯವಸ್ಥೆಯು ಇರಲಿಲ್ಲ ರಾತ್ರಿ ಚಟ್ಟಂಬಡಿ ಬಿಸಿ ಬಿಸಿ ಚಾಯಂತೂ ಇಲ್ಲವೇ ಇಲ್ಲ.
ಊರಿನ ಸರಕಾರಿ ಶಾಲೆಯಿಂದ ಒಂದೆರಡು ಬೆಂಚುಗಳನ್ನು ತಂದರೆ ಅದನ್ನು ವಿಐಪಿ ಗಳಿಗೆ ಮೀಸಲಿಡುತ್ತಿದ್ದರು.
ಮಧ್ಯರಾತ್ರಿ ಆಗುತ್ತಿದ್ದಂತೆ ಬರ ಬರುತ್ತಾ ಆಟದ ಕಳೆ ಏರಲಾರಂಭಿಸುತ್ತದೆ. ಆಗ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಬಂದು ಗ್ಯಾಸ್ ಲೈಟ್ ಗಳಿಗೆ ಗಾಳಿ ಹಾಕಿ ಅದನ್ನ ಚಮಕಾಯಿಸುತ್ತಾನೆ.ಹಾಗೆ ಮಾಡುತ್ತಾನೆಂದರೆ ರಾಮಗಾಣೀಗರ ಎರಡನೇ ವೇಷ ರಂಗಸ್ಥಳಕ್ಕೆ ಬರಲಿದೆ ಎಂದು ತಿಳಿಯಬೇಕು.
ನಮ್ಮೂರಿನಲ್ಲಿ ಚಂದ ಪೂಜಾರಿ ಎಂಬ ರಾಮ ಗಾಣಿಗರ ವೀರಾಭಿಮಾನಿ ಯೊಬ್ಬರಿದ್ದರು. ರಾಮ ಗಾಣಿಗರ ವೇಷ ರಂಗಸ್ಥಳದಲ್ಲಿ ಇರುವಷ್ಟು ಹೊತ್ತು ಯಾರು ಮಾತಾಡುವಂತಿಲ್ಲ. ಆಟ ಬಿಟ್ಟು ಎದ್ದು ಹೋಗುವoತಿಲ್ಲ. ಯಾರಾದ್ರೂ ಪಿಸುಗುಟ್ಟಿದರೆ ಚಂದ ಪೂಜಾರಿ ನಿಮ್ಮ ” ಮನೆಯಲ್ಲಿ ಏನಾದರೂ ಕೋಳಿಹೇನು ಆಗಿದೆಯೇ ? ನಿದ್ರೆ ಬರುದಿಲ್ಲವೇ ಅದಕ್ಕೆ ಆಟಕ್ಕೆ ಬಂದಿದ್ದ ” ಅಂತ ಗಟ್ಟಿಯಾಗಿ ಬೆದರಿಸುತ್ತಿದ್ದರು. ಹಾಗಾಗಿ ಅವರುಆಟಕ್ಕೆ ಬಂದಿದ್ದರೆoದರೆ ನಾವ್ಯಾರೂ ಸದ್ದೇ ಮಾಡುತ್ತಿರಲಿಲ್ಲ.
ಈಗಂತೂ ಯಕ್ಷಗಾನ ತನ್ನ ಮೂಲ ಸ್ವರೂಪವನ್ನು ಎಂದೋ ಕಳೆದುಕೊಂಡು ಕಾಲ ಮಿತಿಯ ಕೆಳಗೆ ಹೆಣಗಾಡುತ್ತಿದೆ. ಸದ್ಯ ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಯಕ್ಷಗಾನಕ್ಕೆ ಪ್ರೇಕ್ಷಕರೇ ಇಲ್ಲ. ಮುಂದೆ ಮುಂದೆ ರಾತ್ರಿ ಯಕ್ಷಗಾನ ನೋಡೋದಕ್ಕಾಗಿ ಕೂಲಿಕೊಟ್ಟು ಜನರನ್ನು ಕರೆ ತರ ಬೇಕಾದೀತು.ಆಟವೆಂದರೆ ಮಧ್ಯಾಹ್ನ ಬಂದು ಊಟ ಮಾಡಿ ಹೋಗುವುದೇ ವಾಡಿಕೆಯಾಗಿದೆ.
ಹೇಗೆ ಇಂದಿನ ಕೆಲವು ಕಲಾವಿದರು ತಮ್ಮ ಪಾತ್ರ ಮುಗಿದೊಡನೆ ವಾಹನ ಏರಿ , ಮನೆ ಸೇರಿಕೊಳ್ಳುತ್ತಾರೋ ಅದೇ ರೀತಿ ಪ್ರೇಕ್ಷಕರಲ್ಲೂ ಕೆಲವರು ಒಂದಷ್ಟು ಹೊತ್ತು ಆಟ ನೋಡಿ ಮನೆ ಸೇರಿಕೊಳ್ಳುತ್ತಾರೆ.
ಇಂಥ ಪರಿಸ್ಥಿತಿಯಲ್ಲಿ ಕಲಾವಿದ ಮತ್ತು ಪ್ರೇಕ್ಷಕರ ಮಧ್ಯೆ ಸಮನ್ವಯದ ಕೊರತೆಯಿಂದಾಗಿ ಶಿಳ್ಳೆ ಮತ್ತು ಚಪ್ಪಾಳೆಗಳ ಹೊಡೆಯುವಿಕೆಯಲ್ಲಿಯೂ ತಾಳ ತಪ್ಪಿರಬಹುದು.
ಹಾಗಾಗಿಪ್ರಬುದ್ಧ ಕಲಾವಿದ ಕಲೆಯ ಉಳಿವಿಗಾಗಿ ಒಂದಷ್ಟು ಹೊಂದಿಕೊಳ್ಳುವುದು ಅನಿವಾರ್ಯ ಎಂದು ಭಾವಿಸಬಹುದು.ಇಲ್ಲಿ ಯಾರನ್ನು ನೋಯಿಸುವುದು ಈ ಬರಹದ ಉದ್ದೇಶವಲ್ಲ ಕಲೆ ಬೆಳೆಯಬೇಕು ಕಲಾವಿದ ಬದುಕಬೇಕು ಎನ್ನುವುದೇ ನಮ್ಮ ಉದ್ದೇಶವಾಗಿದೆ.


,





