ಈ ಹಲಾಲ್ ಕಟ್ ಮತ್ತು ಝಟ್ಕಾ ಕಟ್ ವಿವಾದದ ನಡುವೆ ಒಂದು ಹಳೇ ವಿಚಾರ ನೆನಪಾಯಿತು…
ನಾವು ಚಿಕ್ಕವರಿದ್ದಾಗ ದಾವಣಗೆರೆಯಲ್ಲಿ ಬಹುತೇಕ ಸಸ್ಯಹಾರಿ ಹೋಟೆಲುಗಳು, ಖಾನಾವಳಿಗಳೇ ಇದ್ದವು. ಅಲ್ಲೊಂದು ಇಲ್ಲೊಂದು ಮಾಂಸಾಹಾರದ ಮಿಲಿಟ್ರಿ ಹೋಟಲುಗಳು ಕಾಣಿಸಿಕೊಳ್ಳುತ್ತಿದ್ದವು. ಅವುಗಳಲ್ಲಿ ಕೆಲವು ಹಿಂದೂ ಮರಾಠ ಮಿಲಿಟ್ರಿ ಹೋಟಲುಗಳಾದರೆ ಇನ್ನು ಕೆಲವು just ಮಿಲಿಟ್ರಿ ಹೋಟಲುಗಳು, ಬಹುಶಃ ಅವು ಸಾಬ್ರ ಹೋಟೆಲುಗಳಾಗಿರಬಹುದು. ಮಾಂಸ ಮಾರಾಟ ಕೂಡ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಮಾರಾಟವಾಗುತ್ತಿತ್ತು. ಈ ಹೋಟೆಲುಗಳಿಗೆ ‘ಮಿಲಿಟರಿ’ ಎನ್ನುವ ಪದ ಹೇಗೆ ಅಂಟಿಕೊಂಡಿತು ಎನ್ನುವುದು ಒಂದು ಗೊಂದಲದ ವಿಷಯವಾಗಿತ್ತು. ಇಲ್ಲಿ ಮಿಲಿಟರಿಯವರು ಊಟಕ್ಕೆ ಬರ್ತಾರಾ ಅಥವಾ ಬಹುತೇಕ ಮಿಲಿಟರಿಯವರು ಮಾಂಸಾಹಾರ ತಿನ್ನುತ್ತಾರೆ ಅದಕ್ಕೆ ಮಾಂಸಾಹಾರ ಎನ್ನುವ ಬದಲು ಮಿಲಿಟರಿ ಎನ್ನುತ್ತಿದ್ದರಾ…ಮನಸ್ಸಿನಲ್ಲಿ ತುಂಬಾ ಗೊಂದಲವಿರುತ್ತಿತ್ತು. ವಾಯುಸೇನೆಗೆ ಸೇರಿದ ಮೇಲೆ ಒಂದು ಸಮಸ್ಯೆ ಬಗೆಹರಿಯಿತು, ಅದೇನೆಂದರೆ ಇದು ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾದ ಪದ. ಮತ್ತೆ ಮಿಲಿಟರಿಯವರಲ್ಲಿ ಅರ್ಧಕ್ಕರ್ಧ ಸಸ್ಯಾಹಾರಿಗಳಿರುತ್ತಾರೆ ಆದ್ದರಿಂದ ಮಿಲಿಟರಿಯವರಿಂದಾಗಿ ಈ ಹೋಟಲುಗಳಿಗೆ ಈ ಹೆಸರು ಬಂದಿರಲು ಸಾಧ್ಯವಿಲ್ಲ ಎನ್ನುವುದು ಖಚಿತವಾಯಿತು. ಈ ಮಾಂಸಾಹಾರದ ಹೋಟೆಲುಗಳು ಹಿಂದೂಗಳಿಗೆ ಅವರ ಆಚರಣೆಯ ಪ್ರಕಾರ ಸಿದ್ಧಪಡಿಸಿದ ಖಾದ್ಯಗಳನ್ನು ತಯಾರಿಸಿ ಕೊಡುತ್ತಾರೆ ಎನ್ನುವ ನಂಬಿಕೆ ಇತ್ತು ಮತ್ತು ಈ ಹೊಟೆಲಿನ ಮಾಲೀಕರ ಹೆಸರುಗಳು ರಾವ್ ಎಂದೆಲ್ಲಾ ಇದ್ದಾಗ ಇದು ಮರಾಠಿ ಹಿಂದೂಗಳುದ್ದು ಎಂದು ಖಚಿತವಾಗುತ್ತಿತ್ತು. ಬಹುಶಃ ಇದು ಶಹಾಜಿ ಭೋಸಲೆಯ ಕಾಲದಿಂದ ಪ್ರಾರಂಭವಾಗಿರಬಹುದು ಎನಿಸಿತು. ಮುಂದೆ ಮಿಲಿಟರಿ ಎನ್ನುವ ಪದಬಳಕೆ ಬ್ರಿಟಿಷರ ಸಮಯದಲ್ಲಿ ಅಳವಡಿಕೆಯಾಗಿರಬಹುದು. ಈ ಮಾಂಸಾಹಾರಿ ಖಾದ್ಯಗಳು ವಿಷೇಶವಾಗಿ ಮರಾಠಿ ಸೈನಿಕರ ಆಹಾರವಾಗಿದ್ದವು ಎನ್ನುವುದಂತೂ ಖಚಿತ.
ಶಹಾಜಿ ಭೋಸ್ಲೆ ತನ್ನ ಮರಾಠಿ ಸೈನ್ಯದೊಂದಿಗೆ ಬೆಂಗಳೂರಿಗೆ ಬಂದದ್ದು 1638 ರ ಸಮಯದಲ್ಲಿ. ಆಗ ಮೂರನೇ ಕೆಂಪೇಗೌಡರು ಬೆಂಗಳೂರನ್ನು ಆಳುತ್ತಿದ್ದರು. ಬಿಜಾಪುರದ ಆದಿಲ್ ಷಾಹಿಗಳ ಪರವಾಗಿ ನಡೆದ ಯುದ್ಧದಲ್ಲಿ ಬೆಂಗಳೂರನ್ನು ಗೆದ್ದು ಅದನ್ನು ಜಾಗೀರಾಗಿ ಪಡೆದುಕೊಂಡಿದ್ದರು ಶಹಾಜಿ ಭೋಸ್ಲೆ, ಅಲ್ಲಿಂದ ಪ್ರಾರಂಭವಾಯಿತು ಮರಾಠಿಗರ ಆಗಮನ. ಷಹಾಜಿ ಭೋಸ್ಲೆ ಮತ್ತು ಕೆಂಪೇಗೌಡರ ನಡುವಿನ ಒಪ್ಪಂದದಂತೆ ಮೂರನೇ ಕೆಂಪೇಗೌಡರು ಮಾಗಡಿಗೆ ತೆರಳಿದರು. ಎಲ್ಲಾ ವಿಧದಲ್ಲಿ ಬೆಂಗಳೂರು ಆಗ ಒಂದು ಸಂಪದ್ಭರಿತ ಪಟ್ಟಣ. ಆದರೆ ಇಲ್ಲಿನ ಆಹಾರ ಪದ್ದತಿ ಮುಖ್ಯವಾಗಿ ಸಸ್ಯಾಹಾರ. ಇಲ್ಲಿನ ಧರ್ಮಛತ್ರಗಳಲ್ಲಿ ಯಥೇಚ್ಛವಾದ ಭೋಜನ ವ್ಯವಸ್ಥೆ ಇರುತ್ತಿತ್ತು. ಮರಾಠಿ ಸೈನಿಕರಿಗೆ ಗೋಮಾಂಸ ಮತ್ತು ಹಂದಿಮಾಂಸಗಳು ವರ್ಜಿತವಾದ ಮಾಂಸಾಹಾರಗಳ ಭೋಜನಾಲಯಗಳ ಹುಡುಕಾಟ ಪ್ರಾರಂಭವಾಯಿತು. ಸೈನಿಕರಲ್ಲೇ ಕೆಲವರು ಇಂತಹ ಭೋಜನಾಲಯಗಳನ್ನು ಪ್ರಾರಂಭ ಮಾಡಿದರು, ಮುಂದುವರೆದು ಇದೊಂದು ಮರಾಠಿಗರಿಗೆಂದೇ ವಿಶೇಷ ಭೋಜನ ವ್ಯವಸ್ಥೆಯ ಪ್ರಾರಂಭವಾಯಿತು, ಹಿಂದೂ ಮರಾಠಿ ಭೋಜನಾಲಯಗಳು. ಶಹಾಜಿ ಭೋಸ್ಲೆ ಮುಂದೆ ತಂಜಾವೂರಿನವರೆಗೂ ರಾಜ್ಯ ವಿಸ್ತರಣೆ ಮಾಡಿದಾಗ ಅದಕ್ಕನುಸಾರವಾಗಿ ಮರಾಠಿ ಸೈನಿಕರ ಹಿಂದೂ ಭೋಜನಾಲಯಗಳ ವಿಸ್ತರಣೆಯೂ ಮುಂದುವರೆಯಿತು.
ಬೆಂಗಳೂರಿನಲ್ಲಿ ಶಹಾಜಿ ಭೋಸ್ಲೆಯ ಮಗ ಸಾಂಬಾಜಿ ರಾವ್ ಭೋಸ್ಲೆ ಉಳಿದುಕೊಂಡರೆ ಇನ್ನೊಬ್ಬ ಮಗ ಶಿವಾಜಿ ತನ್ನ ತಾಯಿ ಜೀಜಾಬಾಯಿಯೊಂದಿಗೆ ಪೂನಾದ ಕಡೆ ತೆರಳುತ್ತಾರೆ. ಈ ಸಾಂಬಾಜಿ ಭೋಸ್ಲೆಯವರಿಗೆ
‘ಆಮ್ಟೀ’ ಎನ್ನುವ ಖಾದ್ಯ ತುಂಬಾ ಇಷ್ಟವಂತೆ. ಪುನರ್ಪುಳಿಯೊಂದಿಗೆ ಬೇಳೆ ಬೇಯಿಸಿ ಮಾಡುವ ಪದಾರ್ಥ. ಸಾಂಬಾಜಿಯವರಿಗೆ ಅಡುಗೆ ಮಾಡುವುದು ಎಂದರೆ ತುಂಬಾ ಇಷ್ಟವಂತೆ. ಹೀಗೆ ಒಮ್ಮೆ ಆಮ್ಟೀ ಮಾಡುವಾಗ ಅವರಿಗೆ ಪುನರ್ಪುಳಿ ಸಿಗಲಿಲ್ಲವಂತೆ, ಸರಿ ಅದರ ಬದಲಿಗೆ ಹುಣಸೆಹಣ್ಣಿನ ರಸ ಸೇರಿಸಿಬಿಟ್ಟರಂತೆ. ಆಗ ಆಮ್ಟೀ ಇನ್ನೂ ತುಂಬಾ ರುಚಿಕರವಾಗಿತ್ತಂತೆ. ಹಾಗಾಗಿ ಇದನ್ನು ಆಮ್ಟೀ ಎನ್ನುವುದು ಬೇಡ, ಈ ಖಾದ್ಯಕ್ಕೆ ತನ್ನ ಹೆಸರಿನಿಂದಲೇ ಕರೆಯೋಣ ಎಂದು
ಅದಕ್ಕೆ ‘ಸಾಂಬಾರ್’ ಎಂದು ಹೆಸರಿಟ್ಟರಂತೆ! ಇದು ಎಷ್ಟು ಸತ್ಯವೋ ಗೊತ್ತಿಲ್ಲಾ, ಆದರೂ ಇದೊಂದು ಇಂಟರೆಸ್ಟಿಂಗ್ ಸಾಂಬಾರ್ ಸ್ಟೋರಿ.
✍️….ವಿಂಗ್ ಕಮಾಂಡರ್ ಸುದರ್ಶನ


,





