ಬೆಳಗಾವಿ : ಪೌಷ್ಟಿಕತೆಯು ದೇಹದ ಬೆಳವಣಿಗೆ, ಆರೋಗ್ಯ, ರೋಗನಿರೋಧಕ ಶಕ್ತಿ ಮತ್ತು ದೈನಂದಿನ ಕಾರ್ಯಚಟುವಟಿಕೆಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ ಎಂದು ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಹೇಳಿದರು.
ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಹಾಗೂ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ (ರಿ.), ಚಿಕ್ಕಬಳ್ಳಾಪುರ ಇವರ ಸಹಯೋಗದಲ್ಲಿ ಗುರುವಾರ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿನಿಯರಿಗಾಗಿ ಹಮ್ಮಿಕೊಂಡಿದ್ದ ‘ಮಾರ್ನಿಂಗ್ ನ್ಯೂಟ್ರಿಷನ್ ಪ್ರೋಗ್ರಾಂ’ಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿನಿಯರು ತಮ್ಮ ಆರೋಗ್ಯದತ್ತ ಹೆಚ್ಚಿನ ಗಮನಹರಿಸಬೇಕು. ಆರೋಗ್ಯವಿದ್ದಾಗ ಮಾತ್ರ ಶೈಕ್ಷಣಿಕ ಹಾಗೂ ಜೀವನದ ಸಾಧನೆ ಸಾಧ್ಯ. ಜಂಕ್ ಫುಡ್ ಸಂಸ್ಕೃತಿಯಿಂದ ದೂರವಾಗಿ ಪೌಷ್ಟಿಕ ಮತ್ತು ಸಮತೋಲಿತ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿದಿನ ಬೆಳಗ್ಗೆ ಪೌಷ್ಟಿಕ ಆಹಾರ ನೀಡುವುದರಿಂದ ವಿದ್ಯಾರ್ಥಿನಿಯರಿಗೆ ದಿನನಿತ್ಯದ ಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿ ದೊರೆಯುವುದು. ಜೊತೆಗೆ ಅವರಲ್ಲಿ ಆರೋಗ್ಯಕರ ಆಹಾರ ಪದ್ಧತಿಯ ಅರಿವು ಮೂಡುತ್ತದೆ.
ಮಹಾವಿದ್ಯಾಲಯದಲ್ಲಿ ಪ್ರತಿದಿನ ಬೆಳಗ್ಗೆ ವಿದ್ಯಾರ್ಥಿನಿಯರಿಗೆ ವಿವಿಧ ಪೌಷ್ಠಿಕ ಮಿಶ್ರಣಯುಕ್ತ ರಾಗಿ ಮಾಲ್ಟ್ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಇದರಿಂದ ವಿದ್ಯಾರ್ಥಿನಿಯರ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗಲಿದೆ ಎಂದು ಹೇಳಿದ ಅವರು, ಇಂತಹ ಅನುಪಮ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್. ಸಿ. ಪಾಟೀಲ ಅವರನ್ನು ಅಭಿನಂದಿಸಿದರು.
ಕುಲಸಚಿವ ಸಂತೋಷ ಕಾಮಗೌಡ ಅವರು ಮಾತನಾಡಿ , ಪೌಷ್ಟಿಕ ಆಹಾರವು ಆರೋಗ್ಯಕರ ಜೀವನದ ಪ್ರಮುಖ ಆಧಾರವಾಗಿದೆ. ಇಂತಹ ಪೌಷ್ಟಿಕತೆಯಿಂದ ವಿದ್ಯಾರ್ಥಿಗಳು ಹೆಚ್ಚು ಲವಲವಿಕೆಯಿಂದ ಇದ್ದು, ಶೈಕ್ಷಣಿಕ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಗದಗದ ವಿಎಸ್‌ಎಂ ಕಲ್ಯಾಣ ಸಮಿತಿಯ ಜಂಟಿ ಕಾರ್ಯದರ್ಶಿ ರಾಮಚಂದ್ರ ಬಿ. ಜೋಗಿನ್ ಮಾತನಾಡಿ , ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಇದರಿಂದ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ತಮಿಳುನಾಡು ಇತ್ಯಾದಿ ರಾಜ್ಯಗಳ ಸರಕಾರದ ಸಹಯೋಗದಲ್ಲಿ ಪ್ರತಿ ದಿನ ಒಂದು ಕೋಟಿ ಶಾಲಾ ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್ ನೀಡಲಾಗುತ್ತಿದೆ. ಕಾಲೇಜಿನ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಇದೇ ಮೊದಲು ಎಂದರು .
ಮಹಾವಿದ್ಯಾಲಯದ
ಪ್ರಾಚಾರ್ಯ ಪ್ರೊ. ಎಸ್. ಸಿ. ಪಾಟೀಲ ಮಾತನಾಡಿ, ವಿದ್ಯಾರ್ಥಿನಿಯರ ಆರೋಗ್ಯ ಮತ್ತು ಶೈಕ್ಷಣಿಕ ಪ್ರಗತಿಗೆ ಪೌಷ್ಟಿಕ ಆಹಾರದ ಮಹತ್ವವನ್ನು ಮನಗಂಡು ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ (ರಿ.), ಚಿಕ್ಕಬಳ್ಳಾಪುರ ಅವರ ನೆರವಿನೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪ್ರತಿದಿನ ಬೆಳಗ್ಗೆ ವಿದ್ಯಾರ್ಥಿನಿಯರಿಗೆ ಒಂದು ಗ್ಲಾಸ್ ರಾಗಿ ಮಾಲ್ಟ್ ನೀಡುತ್ತೇವೆ ಎಂದರು.
ಡಾ. ದೀಪಾ ಅಂಟಿನ ನಿರೂಪಿಸಿದರು, ಉಪ ಪ್ರಾಚಾರ್ಯ ಪ್ರೊ. ಅರ್ಜುನ ಜಂಬಗಿ ಸ್ವಾಗತಿಸಿದರು. ಡಾ . ನಮಿತಾ ಪೋತದಾರ ವಂದಿಸಿದರು. ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿಗಳ ಹಿತರಕ್ಷಣಾ ಸದಸ್ಯರು ಮತ್ತು ಬೋಧಕ , ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


,


















