ಖಾನಾಪುರ : ಕಳೆದ ಕೆಲವು ದಿನಗಳಿಂದ ಅಂಬೋಳಿ, ಬಾಂದೇಕರವಾಡ, ನಿಲಾವಡೆ, ಕಬನಾಳಿ, ಕೊಂಕಣವಾಡ ಮತ್ತು ಮುಗವಡೆ ಗ್ರಾಮಗಳಲ್ಲಿ ಆನೆಗಳು ಬೆಳೆಗಳನ್ನು ನಾಶಪಡಿಸಿರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆಯೇ ಇಂದು ನೇರವಾಗಿ ರೈತರ ಜಮೀನುಗಳಿಗೆ ಭೇಟಿ ನೀಡಿ, ಹಾನಿಗೊಳಗಾದ ಬೆಳೆಗಳ ಪರಿಶೀಲನೆ ನಡೆಸಿದ ಶಾಸಕ ವಿಠ್ಠಲ ಹಲಗೇಕರ ಅವರು ರೈತರ ಕಷ್ಟ-ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.
ಆನೆಗಳ ಹಾವಳಿಗೆ ತುರ್ತಾಗಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಹಾನಿಗೊಳಗಾದ ರೈತರಿಗೆ ಶೀಘ್ರವಾಗಿ ಸೂಕ್ತ ಪರಿಹಾರಧನ ದೊರಕಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ರೈತರ ಬೆಳೆ ಮತ್ತು ಬದುಕಿನ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.


,


















