| Latest Version 9.0.7 |

State News

44 ವರ್ಷಗಳ ಕಾಯುವಿಕೆ ಅಂತ್ಯ: ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮಹಿಳಾ ಹಾಕಿ ತಂಡ

ದೆಹಲಿ : ಶುಕ್ರವಾರ (ಅಕ್ಟೋಬರ್ 2) ನಡೆದ ಏಷ್ಯನ್ ಗೇಮ್ಸ್‌ 2026ರ ಮಹಿಳಾ ಹಾಕಿ ಫೈನಲ್‌ನಲ್ಲಿ ಭಾರತ 1-0 ಗೋಲುಗಳ ಅಂತರದಿಂದ ಚೀನಾವನ್ನು ಮಣಿಸಿ ಚಿನ್ನದ ಪದಕ ಗೆದ್ದುಕೊಂಡಿತು. ಈ ಮೂಲಕ ಮಹಿಳಾ ಹಾಕಿಯಲ್ಲಿ ಚಿನ್ನಕ್ಕಾಗಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ನಿರೀಕ್ಷೆಗೆ ತೆರೆ ಎಳೆಯಿತು.
ಭಾರತ ಮಹಿಳಾ ಹಾಕಿ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ಇದಕ್ಕೂ ಮೊದಲು 1982ರ ನವದೆಹಲಿಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿತ್ತು. ಇದೀಗ 44 ವರ್ಷಗಳ ಬಳಿಕ ಮತ್ತೊಮ್ಮೆ ಚಿನ್ನದ ಪದಕ ಜಯಿಸಿ ಐತಿಹಾಸಿಕ ಸಾಧನೆ ಮಾಡಿದೆ.
ಏಷ್ಯನ್ ಗೇಮ್ಸ್‌ 2026ರ 13ನೇ ದಿನ ಭಾರತೀಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿ ದೇಶಕ್ಕೆ ಭರ್ಜರಿ ಯಶಸ್ಸು ತಂದುಕೊಟ್ಟರು. ಒಂದೇ ದಿನದಲ್ಲಿ ಆರು ಚಿನ್ನದ ಪದಕಗಳನ್ನು ಗೆದ್ದ ಭಾರತ, ಪದಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ್ದು, ಕ್ರೀಡಾಕೂಟದ ಅಂತಿಮ ಹಂತದಲ್ಲಿ ಮತ್ತಷ್ಟು ಯಶಸ್ಸಿನ ನಿರೀಕ್ಷೆ ಮೂಡಿಸಿದೆ.
ದಿನದ ಆರಂಭದಲ್ಲೇ ಭಾರತೀಯ ಮಹಿಳಾ ರಿಕರ್ವ್ ಆರ್ಚರಿ ತಂಡ ಇತಿಹಾಸ ನಿರ್ಮಿಸಿತು. ಫೈನಲ್‌ನಲ್ಲಿ ಬಲಿಷ್ಠ ದಕ್ಷಿಣ ಕೊರಿಯಾ ತಂಡವನ್ನು ಸೋಲಿಸಿದ ಭಾರತ, ದಿನದ ಮೊದಲ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.

ಆ ಬಳಿಕ ಬಾಕ್ಸಿಂಗ್‌ ರಿಂಗ್‌ನಲ್ಲಿ ಭಾರತೀಯ ಆಟಗಾರ್ತಿಯರ ಪ್ರಾಬಲ್ಯ ಮುಂದುವರಿಯಿತು. ಮಹಿಳೆಯರ 75 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಭಾರತದ ಸ್ಟಾರ್ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್, ಚೀನಾದ ಬಾವೊ ಜಿಯಿಯನ್ನು ಮಣಿಸಿ ಚಿನ್ನದ ಪದಕ ಗೆದ್ದರು.
ಲವ್ಲಿನಾ ಅವರ ಗೆಲುವಿನ ಕೆಲವೇ ಹೊತ್ತಿನಲ್ಲಿ ಪರ್ವೀನ್ ಹೂಡಾ ಕೂಡ ಚಿನ್ನದ ಪದಕವನ್ನು ಭಾರತಕ್ಕೆ ತಂದುಕೊಟ್ಟರು. ಮಹಿಳೆಯರ 65 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಚೈನೀಸ್ ತೈಪೆಯ ಚೆನ್ ವಿರುದ್ಧ ಜಯ ಸಾಧಿಸಿದ ಪರ್ವೀನ್, ಭಾರತದ ಚಿನ್ನದ ಬೇಟೆಯನ್ನು ಮುಂದುವರಿಸಿದರು.
ಬಾಕ್ಸಿಂಗ್‌ನಲ್ಲಿ ಭಾರತದ ಚಿನ್ನದ ಮೆರವಣಿಗೆ ಅಲ್ಲಿಯೇ ನಿಲ್ಲಲಿಲ್ಲ. ಪುರುಷರ 80 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಕಿಮ್ ಮಿನ್-ಸಿಯೊಂಗ್ ಅವರನ್ನು ಮಣಿಸಿದ ಅಂಕುಶ್ ಪಂಘಾಲ್ ಚಿನ್ನದ ಪದಕ ಗೆದ್ದು, ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಪದಕಗಳ ಸಂಖ್ಯೆಯನ್ನು 14ಕ್ಕೆ ಏರಿಸಿದರು.
ಇದರ ಬೆನ್ನಲ್ಲೇ ಫ್ರೀಸ್ಟೈಲ್ ಕುಸ್ತಿಯಲ್ಲೂ ಭಾರತಕ್ಕೆ ಚಿನ್ನ ಒಲಿಯಿತು. ಪುರುಷರ 65 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಸುಜೀತ್ ಕಲ್ಕಲ್ ಪುನರಾಗಮನದ ಮೂಲಕ ತಜಿಕಿಸ್ತಾನದ ಅಬ್ದುಲ್‌ಮಜಿದ್ ಕುಡಿಯೆವ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದರು. ಈ ಗೆಲುವಿನೊಂದಿಗೆ ಭಾರತದ ಚಿನ್ನದ ಪದಕಗಳ ಸಂಖ್ಯೆ 15ಕ್ಕೆ ತಲುಪಿತು.
ದಿನದ ಅಂತ್ಯದಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಇತಿಹಾಸ ರಚಿಸಿತು. ಬಹು ನಿರೀಕ್ಷಿತ ಫೈನಲ್‌ನಲ್ಲಿ ಆತಿಥೇಯ ಚೀನಾವನ್ನು ಎದುರಿಸಿದ ಭಾರತ 1-0 ಅಂತರದ ರೋಚಕ ಜಯ ಸಾಧಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿತು. ಈ ಮೂಲಕ 44 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್ ಮಹಿಳಾ ಹಾಕಿಯಲ್ಲಿ ಭಾರತ ಚಿನ್ನದ ಪದಕ ಗೆದ್ದ ಸಾಧನೆ ಮಾಡಿತು. ಜೊತೆಗೆ ಲಾಸ್ ಏಂಜಲೀಸ್ 2028 (LA28) ಒಲಿಂಪಿಕ್ಸ್‌ಗೆ ಅರ್ಹತೆಯನ್ನೂ ಪಡೆದುಕೊಂಡಿತು.
13ನೇ ದಿನದ ಈ ಅದ್ಭುತ ಪ್ರದರ್ಶನದ ನೆರವಿನಿಂದ ಭಾರತದ ಪದಕಗಳ ಒಟ್ಟು ಸಂಖ್ಯೆ 76ಕ್ಕೆ ಏರಿಕೆಯಾಗಿದೆ. ಭಾರತ 16 ಚಿನ್ನ, 25 ಬೆಳ್ಳಿ ಮತ್ತು 35 ಕಂಚಿನ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ಏಷ್ಯನ್ ಗೇಮ್ಸ್‌ ಅಭಿಯಾನವನ್ನು ಭರ್ಜರಿಯಾಗಿ ಮುಗಿಸುವ ವಿಶ್ವಾಸ ಮೂಡಿಸಿದೆ.

Team Udayaprabha
";