ಬೆಂಗಳೂರು:
“ವಿಶೇಷ ಅಭಿಯಾನದ ಮೂಲಕ ಎಸ್ ಐಆರ್ ನಂತರದ ಗೈರು, ಸ್ಥಳಾಂತರ, ಮೃತ ಹಾಗೂ ನಕಲಿ (ASDD) ಮತ್ತಿತರ ಮತದಾರರ ಪಟ್ಟಿ ಮರುಪರಿಶೀಲನೆ ಹಾಗೂ ಮತದಾರರ ಪಟ್ಟಿ ಮರುಪರಿಶೀಲಿಸಿ, ಹೆಸರು ಬಿಟ್ಟು ಹೋದ ಅರ್ಹ ಮತದಾರರ ಹೆಸರನ್ನು ಮತ್ತೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಭಾರತ ಚುನಾವಣಾ ಆಯೋಗ ಎಲ್ಲ ರಾಜ್ಯಗಳ ಚುನಾವಣೆ ಅಧಿಕಾರಿಗಳಿಗೆ ಆದೇಶ ಕೊಟ್ಟಿರುವುದು ಇಡೀ ದೇಶದ ಮತದಾರರ ಹಕ್ಕಿಗೆ ಸಂದ ಜಯ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ವಿಧಾನಸೌಧದ ಬಳಿ ಮಾಧ್ಯಮಗಳಿಗೆ ಶುಕ್ರವಾರ ಅವರು ಪ್ರತಿಕ್ರಿಯೆ ನೀಡಿದರು.
“ನಾವು ನಿನ್ನೆ ರಾಜ್ಯ ಚುನಾವಣಾ ಆಯೋಗದ ಎದಿರು ಧರಣಿ ನಡೆಸಿದ ಪರಿಣಾಮವಾಗಿ ಕೇಂದ್ರ ಚುನಾವಣೆ ಆಯೋಗವು ರಾತ್ರೋ ರಾತ್ರಿ ಹೋರಡಿಸಿರುವ ಈ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಇದು ನಮ್ಮ ಕಾಂಗ್ರೆಸ್ ಪಕ್ಷ ಮತ್ತು ಸರಕಾರದ ಗೆಲುವು ಮಾತ್ರವಲ್ಲ. ಇದು ಕರ್ನಾಟಕದ ಮತ್ತು ಇಡೀ ದೇಶದ ಮತದಾರರ ಗೆಲುವು. ಅರ್ಹ ಮತದಾರರ ಹಕ್ಕು ಕಸಿಯುವ ಸಂಚಿನ ವಿರುದ್ಧದ ಗೆಲುವು. ಮತದಾರರ ಹಕ್ಕು ರಕ್ಷಣೆಗೆ ಕಾಂಗ್ರೆಸ್ ಪಕ್ಷ ಮೊದಲಿಂದಲೂ ಹೋರಾಟ ಮಾಡುತ್ತಾ ಬಂದಿದೆ. ಅದು ಮುಂದೆಯೂ ಮುಂದುವರೆಯಲಿದೆ” ಎಂದು ಹೇಳಿದರು.
“ನಾವು ಚುನಾವಣಾ ಆಯೋಗದ ಬಳಿ ಗುರುವಾರ ನಡೆಸಿದ ಪ್ರತಿಭಟನೆ ಫಲವಾಗಿ ಕೇಂದ್ರ ಚುನಾವಣೆ ಆಯೋಗ ಎಲ್ಲ ರಾಜ್ಯಗಳ ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಸೂಚನೆ ಕೊಟ್ಟಿದೆ. ಸಾಮೂಹಿಕವಾಗಿ ಹೆಸರು ತೆಗೆದು ಹಾಕಿರುವ ದೂರುಗಳ ಬಗ್ಗೆಯೂ ಗಮನ ಹರಿಸಬೇಕು ಎಂದು ಆದೇಶ ನೀಡಿದೆ” ಎಂದು ತಿಳಿಸಿದರು.
“ಫಾರ್ಮ್ 7 ರ ಮೂಲಕ ಯಾವುದೇ ಮತವನ್ನು ಡಿಲೀಟ್ ಮಾಡಬಾರದು ಎಂದು ತಿಳಿಸಿದ್ದಾರೆ. ಮೊದಲ ಬಾರಿಗೆ ಮತದಾರರಾಗುವ ಯುವಕರ ಹೆಸರು ಸೇರ್ಪಡೆಗೆ ವಿಶೇಷ ಶಿಬಿರಗಳನ್ನು ಆಯೋಜಿಸಬೇಕು. ಅದರಂತೆ ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು ಇವುಗಳನ್ನು ಖಚಿತಪಡಿಸಿಕೊಳ್ಳಲು ಆದೇಶಿಸಲಾಗಿದೆ. ಬಿಎಲ್ ಒ (BLO) ಏನು ಮಾಡಬೇಕು, ಫಾರ್ಮ್ 6 ಮತ್ತು ಫಾರ್ಮ್ 7 ಹೇಗೆ ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ” ಎಂದು ವಿವರಿಸಿದರು.
“ಅರ್ಜಿಗಳ ಸಲ್ಲಿಕೆಗೆ ಅನುಕೂಲವಾಗುವಂತೆ ಬೂತ್ ಮಟ್ಟದ ಶಿಬಿರಗಳನ್ನು ಆಯೋಜಿಸಬೇಕು. ರಾತ್ರಿ ಆಶ್ರಯ ತಾಣಗಳಲ್ಲಿ ವಾಸಿಸುವ ಜನರು, ಕಾರ್ಮಿಕರು ಹಾಗೂ ನಿರಾಶ್ರಿತರಿಗಾಗಿ ವಿಶೇಷ ಶಿಬಿರಗಳನ್ನು ಆಯೋಜಿಸಬೇಕು ಎಂದು ಸೂಚಿಸಿದ್ದಾರೆ” ಎಂದು ಮಾಹಿತಿ ನೀಡಿದರು.
“ಸಮಾಜದ ದುರ್ಬಲ ವರ್ಗಗಳ ಮತಗಳನ್ನು ತೆಗೆದು ಹಾಕಲು ಬಿಜೆಪಿಯವರು ಅರ್ಜಿ ನೀಡಿದ್ದಾರೆ. ಇದು ನಾಚಿಕೆ ಗೇಡಿನ ಸಂಗತಿ. ನಮ್ಮ ನಡುವಿನ ಇತರೇ ಸಮುದಾಯಗಳು, ಜಾತಿ ಮತ್ತು ಧರ್ಮಗಳ ನಡುವೆ ಕಂದಕ ಸೃಷ್ಟಿಸಲು ಹೀಗೆ ಮಾಡುತ್ತಿದ್ದಾರೆ. ದಲಿತ ಮತ್ತು ಅಲ್ಪಸಂಖ್ಯಾತರ ಮತಗಳನ್ನು ತೆಗೆಸುವುದೇ ಅವರ ಉದ್ದೇಶ. ಇಂತಹವರು ರಾಜಕೀಯದಲ್ಲಿರಲು ನಾಲಾಯಕ್ ಗಳು” ಎಂದು ಕಿಡಿಕಾರಿದರು.
ಚುನಾವಣಾ ಆಯೋಗದ ಬಳಿ ಬಿಜೆಪಿಯವರ ಪ್ರತಿಭಟನೆ ಬಗ್ಗೆ ಕೇಳಿದಾಗ, “ಬಿಜೆಪಿಯವರು ಪ್ರತಿಭಟನೆ ನಡೆಸಲು ನಾಚಿಕೆಯಾಗಬೇಕು. ಸುಮಾರು 25,000 ಅರ್ಜಿಗಳನ್ನು ನೀಡಿರುವುದಾಗಿ ಅವರೇ ಒಪ್ಪಿಕೊಂಡಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಅವರು ಮಾಡಿರುವ ಅಪರಾಧ ಮತ್ತು ಷಡ್ಯಂತ್ರಗಳನ್ನು ಅವರೇ ಒಪ್ಪಿಕೊಂಡಿದ್ದಾರೆ. ತಕ್ಷಣವೇ ಚುನಾವಣೆ ಆಯೋಗ ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ದೂರು ದಾಖಲಿಸಬೇಕು. ಈ ದಾಖಲೆಯನ್ನು ಯಾರು ಹಂಚಿಕೊಂಡಿದ್ದಾರೋ ಅವರು ಅದನ್ನು ಈಗಾಗಲೇ ಒಪ್ಪಿಕೊಂಡಿದ್ದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದರು.
“ಬಿಜೆಪಿಯವರು ಜನರ ಹೃದಯ ಗೆದ್ದು ಚುನಾವಣೆ ಎದುರಿಸಬಹುದಿತ್ತು. ಮಹಾತ್ಮ ಗಾಂಧೀಜಿಯವರು ಒಮ್ಮೆ ಹೇಳಿದ್ದರು, ‘ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಬೇಕಾದರೆ ಮೆದುಳನ್ನು ಬಳಸಿ, ಇತರರನ್ನು ನಿಯಂತ್ರಿಸಬೇಕಾದರೆ ನಿಮ್ಮ ಹೃದಯವನ್ನು ಬಳಸಿ’ ಎಂದು. ಅವರು ಈ ದೇಶದ ಜನರ ಹೃದಯವನ್ನು ಗೆದ್ದು ಚುನಾವಣೆ ಎದುರಿಸಬಹುದಿತ್ತು. ಅದರ ಬದಲಾಗಿ, ಮತಗಳನ್ನು ತೆಗೆದು ಹಾಕುವ ಕ್ರಿಮಿನಲ್ ಕೆಲಸಕ್ಕೆ ಇಳಿದಿದ್ದಾರೆ” ಎಂದು ಕಿಡಿಕಾರಿದರು.
“ಗುರುವಾರ ರಾತ್ರಿ 11 ಗಂಟೆಗೆ, ಚುನಾವಣೆ ಆಯೋಗ ನಮ್ಮ ಹೋರಾಟದ ಹಿಂದಿನ ವಿಚಾರಗಳ ಗಂಭೀರತೆ ಅರಿತುಕೊಂಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇದು ಸಂವಿಧಾನಾತ್ಮಕ ಸಂಸ್ಥೆ. ನಮ್ಮ ವಿನಂತಿ, ಬೇಡಿಕೆ ಹಾಗೂ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನಾವು ಮನವರಿಕೆ ಮಾಡಿಕೊಟ್ಟ ನಂತರ, ಚುನಾವಣಾ ಆಯೋಗವು ಈ ನಿರ್ದೇಶನ ನೀಡಿದೆ. ಜೊತೆಗೆ ಪ್ರತಿಯೊಂದು ಪ್ರಕರಣಗಳನ್ನು ಆಳವಾಗಿ ಪರಿಶೀಲನೆ ನಡೆಸಬೇಕು ಎಂದು ನಿರ್ದೇಶನ ನೀಡಿದೆ. ಇದು ಸ್ವಾಗತಾರ್ಹ. ಬಿಜೆಪಿಯವರು ಇದನ್ನು ಮೊದಲು ಅರಿತುಕೊಳ್ಳಬೇಕು” ಎಂದರು.
“ನನಗೆ ಈ ಅಕ್ರಮದ ಬಗ್ಗೆ ತಿಳಿದಾಗ ಕಾಂಗ್ರೆಸ್ ಕಾರ್ಯಕರ್ತರ ಹೊರತಾಗಿ, ಒಂದು ವಿಶೇಷ ತಂಡವನ್ನು ನೇಮಿಸಿದೆ. ‘ಸಿಟಿಜನ್ಸ್ ಫೋರಂ’ ಮತ್ತು ಹೋರಾಟಗಾರರು ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ, ದತ್ತಾಂಶ ಸಂಗ್ರಹಿಸಿ ವರದಿ ನೀಡಿದ್ದಾರೆ. ಅದನ್ನು ನನ್ನ ಸ್ವಂತ ಮೂಲಗಳಿಂದಲೂ ಪರಿಶೀಲಿಸಿದ್ದೇನೆ. ನಾನು ತಳಮಟ್ಟದ ರಾಜಕಾರಣಿ” ಎಂದು ಹೇಳಿದರು.
“ಮತದಾನದ ಹಕ್ಕು ಈ ದೇಶದ ಜನರ ಬದುಕುವ ಹಕ್ಕು. ಆದ್ದರಿಂದ ಇದು ಡಿ.ಕೆ. ಶಿವಕುಮಾರ್ ಅವರ ವಿಜಯವಲ್ಲ, ಇದು ಈ ದೇಶದ ಮತದಾರರ ವಿಜಯ. ರಾಹುಲ್ ಗಾಂಧಿಯವರು ಕೈಗೊಂಡ ದೊಡ್ಡ ಆಂದೋಲನದ ಫಲ, ಇದು ಅವರ ಗೆಲುವೂ ಆಗಿದೆ. ಅವರು ಕಾರ್ಯಕಾರಿ ಸಮಿತಿಯಲ್ಲಿ ನಮಗೆ ಮಾರ್ಗದರ್ಶನ ನೀಡಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ಅವರು ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಬಂದು ಮತಗಳ್ಳತನದ ವಿರುದ್ದ ಹೋರಾಟ ಪ್ರಾರಂಭಿಸಿದರು” ಎಂದು ಹೇಳಿದರು.
50 ಲಕ್ಷ ಮತಗಳನ್ನು ತೆಗದು ಹಾಕುವ ಸಂಚಿನ ಬಗ್ಗೆ ದಾಖಲೆ ನೀಡಬೇಕು ಇಲ್ಲದಿದ್ದರೆ ರಾಜಿನಾಮೆ ನೀಡಬೇಕು, ಮೂರು ಪಕ್ಷಗಳು ಸೇರಿ 25 ಸಾವಿರ ಅರ್ಜಿ ಸಲ್ಲಿಕೆ ಮಾಡಿವೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಅವರುಗಳು ನನ್ನ ರಾಜೀನಾಮೆ ಕೇಳಲಿ. ಆದರೆ 25 ಸಾವಿರ ಅರ್ಜಿಗಳನ್ನು ಸಲ್ಲಿಕೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರಲ್ಲ ಅದರ ಬಗ್ಗೆ ವಿಪಕ್ಷಗಳು ಮಾತನಾಡಲಿ. ಈ ಮತಗಳ್ಳತನದ ಪಿತಾಮಹರು ತಾವೇ ಎಂದು ಒಪ್ಪಿಕೊಂಡಿರುವುದಕ್ಕೆ ಅಶೋಕ್, ವಿಜಯೇಂದ್ರ ಅವರಿಗೆ ಅಭಿನಂದಿಸುವೆ. ಇದು ಕ್ರಿಮಿನಲ್ ಪಿತೂರಿಯ ತಪ್ಪೊಪ್ಪಿಗೆ. ಅದು ಅವರಿಗೆ ನಾಚಿಕೆಗೇಡಿನ ವಿಷಯವಲ್ಲವೇ? ಪೊಲೀಸರು ಅವರನ್ನು ಬಂಧಿಸಬೇಕು. ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕು? ಅವರು ಯಾವುದೇ ದೂರು ನೀಡಲಿ, ನಾನು ಅದನ್ನು ಸ್ವಾಗತಿಸುತ್ತೇನೆ. ಯಾವುದೇ ರೀತಿಯ ದೂರು ನೀಡಲು ಅವರಿಗೆ ಹಕ್ಕಿದೆ. ಒಂದು ವೇಳೆ ನನ್ನದೇ ತಪ್ಪಿದ್ದರೆ, ಚುನಾವಣೆ ಆಯೋಗ ಅಥವಾ ಯಾವುದೇ ಸಂಸ್ಥೆಗಳು ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಅದಕ್ಕೆ ನಾನು ಹೆದರುವುದಿಲ್ಲ. ಕರ್ನಾಟಕದ ಪ್ರತಿಯೊಬ್ಬ ಪ್ರಜೆಯ ಮತವನ್ನು ಹಾಗೂ ಸಂವಿಧಾನಾತ್ಮಕ ಸಂಸ್ಥೆಯನ್ನು ರಕ್ಷಿಸುವುದು ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯ” ಎಂದು ಸವಾಲೆಸೆದರು.
“ಬಿಜೆಪಿಯವರ ತಂತ್ರ, ಕುತಂತ್ರ, ಮಂತ್ರವನ್ನು ನಾನು ಬಿಚ್ಚಿಟ್ಟಿದ್ದೇನೆ. ಚುನಾವಣಾ ಆಯೋಗದವರು ದಡ್ಡರಲ್ಲ. ಅವರಿಗೆ ನಾನು ಮನದಟ್ಟು ಮಾಡಿಕೊಟ್ಟಿದ್ದೇನೆ. ಐವತ್ತು ಲಕ್ಷ ಮತಗಳೋ, ಒಂದು ಮತವೋ ಒಟ್ಟಿನಲ್ಲಿ ಅವರ ಬಂಡವಾಳವನ್ನು ಬಿಚ್ಚಿಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಬಯಲಿಗೆ ಬರಲಿದೆ” ಎಂದರು.
“ಬಿಜೆಪಿಯವರ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಬಹಳ ಸಂತೋಷ, ಅವರು ಒಳ್ಳೆ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದುಕೊಂಡಿದ್ದಾರೆ. ಮಾಧ್ಯಮದವರು ಈ ದೇಶದ ಸಾಮಾನ್ಯ ಜನರ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಈ ವಿಚಾರವನ್ನು ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆ ಮಾಡಬೇಕು” ಎಂದು ಹೇಳಿದರು.
ಗಾಂಧಿ ಭವನದ ಬಳಿ ಮಾಧ್ಯಮಗಳು, ಮುಖ್ಯ ಚುನಾವಣಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ವಿಚಾರವಾಗಿ ಸಚಿವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಬಿಜೆಪಿ ನಾಯಕರು ಆಯುಕ್ತರ ಕಚೇರಿ ಬಳಿ ಪ್ರತಿಭಟನೆ ಮಾಡಿರುವ ಬಗ್ಗೆ ಕೇಳಿದಾಗ, “ಒಳ್ಳೆಯದು, ಕಾನೂನು ಪ್ರಕಾರ ನಾವು ತಪ್ಪು ಮಾಡಿದ್ದರೆ ಕೇಸ್ ದಾಖಲಿಸಲಿ. ಅವರ ಬೇಡಿಕೆಗಳು ಕಾನೂನಾತ್ಮಕವಾಗಿ ಈಡೇರಲಿ. ನಾನು, ನಮ್ಮ ಸಚಿವರು ಎಲ್ಲಿ ಪ್ರತಿಭಟನೆ ಮಾಡಿದ್ದೇವೆ? ನಾವು ಚುನಾವಣಾ ಆಯುಕ್ತರಿಗೆ ನಮ್ಮ ಅರ್ಜಿ ಕೊಟ್ಟೆವು. ಕೆಲಸ ಆಗುವವರೆಗೂ ಅಲ್ಲಿ ಕೂತಿದ್ದೆವು. ಮಾಧ್ಯಮಗಳು ಅದನ್ನು ಪ್ರತಿಭಟನೆ ಎಂದು ಬರೆದರೆ ನಾನು ಹೊಣೆಯೇ?” ಎಂದು ಪ್ರಶ್ನಿಸಿದರು.
“ಪ್ರಜಾಸೇವಕನಾಗಿ ರಾಜ್ಯದ ಜನರ ಮತದಾನದ ಹಕ್ಕು ಉಳಿಸಲು ಆಯೋಗದ ಕಚೇರಿಯಲ್ಲಿ ಕೂತಿದ್ದೆ. ಅದು ಸಂವಿಧಾನಿಕ ಸಂಸ್ಥೆ. ನನ್ನ ಕೆಲಸ ಆಗುವವರೆಗೂ ಕಾಯುತ್ತಾ ಕುಳಿತಿದ್ದೆ. ಮತ್ತೊಂದು ದಿನ ಬನ್ನಿ ಎಂದು ಕರೆದರು. ನನಗೆ ಮತ್ತೊಂದು ದಿನ ಬರಲು ಸಮಯವಿಲ್ಲ ಇಂದೇ ಎಲ್ಲಾ ಕೆಲಸ ಮುಗಿಸಿಕೊಳ್ಳುವೆ ಎಂದು ಕೂತಿದ್ದೆ. ನನ್ನ ಜೊತೆ ಕೆಲವು ಸಚಿವರುಗಳು ಇದ್ದರು. ಇದಕ್ಕೆ ಪ್ರಕರಣ ದಾಖಲಿಸುವುದಾದರೆ ದಾಖಲಿಸಲಿ. ಅವರು ಅಧಿಕಾರಿಗಳು, ಕೋರ್ಟ್ ಮೊರೆ ಹೋಗಲಿ” ಎಂದು ತಿರುಗೇಟು ನೀಡಿದರು.
ಗಾಂಧೀಜಿ ಹೆಸರು, ವಿಚಾರಧಾರೆ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ: ಸಿಎಂ ಡಿ ಕೆ ಶಿವಕುಮಾರ್
ಬೆಂಗಳೂರು:
“ಗಾಂಧೀಜಿ ಅವರನ್ನು ವಿಶ್ವ ಒಪ್ಪಿಕೊಂಡಿದೆ. ಅವರ ಹೆಸರು, ವಿಚಾರಧಾರೆ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.ಗಾಂಧೀ ಜಯಂತಿ ಅವರ ಜನ್ಮದಿನದ ಅಂಗವಾಗಿ ಸಿಎಂ ಡಿ ಕೆ ಶಿವಕುಮಾರ್ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಶುಕ್ರವಾರ ಬೆಳಗ್ಗೆ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೌರಕಾರ್ಮಿಕರಿಗೆ ಸನ್ಮಾನ ಮಾಡಿದರು. ನಂತರ ಸರ್ಕಾರಿ ಕಲಾ ಕಾಲೇಜಿನಲ್ಲಿ ಮಹಾತ್ಮಾ ಗಾಂಧಿ ಸ್ಮಾರಕ ಸ್ತಂಭ ಅನಾವರಣಗೊಳಿಸಿದರು. ಬಳಿಕ ಗಾಂಧಿ ಭವನದಲ್ಲಿ ನಡೆದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಎಲ್ಲರೂ ಮಹಾತ್ಮ ಗಾಂಧೀಜಿ ಅವರನ್ನು ಸ್ಮರಿಸುತ್ತಾರೆ. ಅವರ ಪ್ರತಿಮೆಗೆ ಗೌರವ ಸಲ್ಲಿಸುತ್ತಾರೆ. ವಿದೇಶದಿಂದ ಬರುವ ಗಣ್ಯರೂ ರಾಜಘಾಟ್ ಗೆ ತೆರಳಿ ಗೌರವ ಸಲ್ಲಿಸುತ್ತಾರೆ.
ಗಾಂಧೀಜಿ ಅವರನ್ನು ಜನ ಒಪ್ಪಿಕೊಂಡಿದ್ದಾರೆ, ವಿಶ್ವ ಒಪ್ಪಿಕೊಂಡಿದೆ. ಅವರ ಪ್ರತಿಮೆಯನ್ನು ತೆಗೆದುಹಾಕಲು ಯಾರಿಂದಲೂ ಸಾಧ್ಯವಿಲ್ಲ” ಎಂದರು.“ಮಹಾತ್ಮ ಗಾಂಧೀಜಿ ಭಾರತದ ಆತ್ಮದಂತಿದ್ದು, ವಿಶ್ವಕ್ಕೆ ಶಾಂತಿ ಮತ್ತು ಸಹಬಾಳ್ವೆಯ ಸಂದೇಶ ನೀಡಿದ ಶ್ರೇಷ್ಠ ವ್ಯಕ್ತಿ. ಯಾವುದೇ ರಾಜಕೀಯ ಪಕ್ಷದವರು ಗಾಂಧೀಜಿ ವಿಚಾರಧಾರೆಯನ್ನು ಒಪ್ಪಿಕೊಳ್ಳಲು ಹಿಂಜರಿಯಬಾರದು. ಈ ವಿಚಾರವನ್ನು ಇಂದಿನ ಪೀಳಿಗೆ ಗಂಭೀರವಾಗಿ ಚರ್ಚಿಸಬೇಕು” ಎಂದು ತಿಳಿಸಿದರು.
“ಈ ದೇಶದಲ್ಲಿ ಎರಡು ವಿಚಾರಧಾರೆಗಳಿವೆ. ಒಂದು ಗಾಂಧಿವಾದಿ ತತ್ವವನ್ನು ಒಪ್ಪಿಕೊಂಡಿರುವ ಕುಟುಂಬ; ಮತ್ತೊಂದು ಗಾಂಧಿವಾದವನ್ನು ವಿರೋಧಿಸುವ ಗುಂಪು. ಇವೆರಡರ ನಡುವಿನ ಸಂಘರ್ಷವನ್ನು ದೇಶ ನೋಡುತ್ತಿದೆ” ಎಂದು ಹೇಳಿದರು.
“ವ್ಯಕ್ತಿ ಮರಣ ಹೊಂದಿದರೂ ಅವರ ವಿಚಾರಧಾರೆಗಳು ಸಾಯುವುದಿಲ್ಲ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಗಾಂಧೀಜಿ ಪ್ರತಿಮೆಗಳಿವೆ. ಅನೇಕ ವಿಶ್ವವಿದ್ಯಾಲಯಗಳಲ್ಲಿ ಅವರ ಚಿಂತನೆಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಅಹಿಂಸಾ ದಿನ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ವಿಶ್ವವೇ ಗಾಂಧೀಜಿ ವಿಚಾರಗಳನ್ನು ಸ್ಮರಿಸುತ್ತಿದೆ. ಗಾಂಧೀಜಿ ನಿಧನರಾದ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಕಟ್ಟಡದ ಮೇಲಿದ್ದ ವಿವಿಧ ರಾಷ್ಟ್ರಗಳ ಧ್ವಜಗಳನ್ನು ಕೆಳಗಿಳಿಸಿ ಗೌರವ ಸಲ್ಲಿಸಲಾಗಿತ್ತು. ಗಾಂಧೀಜಿ ಅವರ ಜಾಗತಿಕ ಪ್ರಭಾವವನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.
ಗಾಂಧೀಜಿಯವರು ಧೀಮಂತ ನಾಯಕರಾಗಿದ್ದು, ಅಪರೂಪದ ವ್ಯಕ್ತಿತ್ವ ಹೊಂದಿದ್ದರು. ಭಾರತಕ್ಕೆ ಮಾತ್ರವಲ್ಲದೇ, ವಿಶ್ವಕ್ಕೆ ಶಾಂತಿಯ ಸಂದೇಶ ನೀಡಿದ ಶಾಂತಿಯ ಧೂತರಾಗಿದ್ದರು. ಗಾಂಧಿ ತತ್ವಗಳನ್ನು ಪಾಲಿಸುವ ನಾವೆಲ್ಲರೂ ಗಾಂಧಿ ಕುಟುಂಬದವರೇ ಆಗಿದ್ದೇವೆ. ಅವರ ವಿಚಾರಧಾರೆಗಳ ಹಾದಿಯಲ್ಲಿ ನಮ್ಮ ಸರ್ಕಾರ ನಡೆಯುತ್ತಿದೆ” ಎಂದರು.
“ಕುರ್ಚಿಯಿಂದ ಬರುವ ಗೌರವ ಶಾಶ್ವತವಲ್ಲ ಸೇವೆಯಿಂದ ದೊರಕುವ ಗೌರವ ಶಾಶ್ವತವಾದದ್ದು. ನಿನ್ನನ್ನು ನೀನು ನಿಯಂತ್ರಿಸಿಕೊಳ್ಳಬೇಕಾದರೆ ನಿನ್ನ ಮೆದುಳನ್ನು ಉಪಯೋಗಿಸು ಮತ್ತೊಬ್ಬರನ್ನು ನಿಯಂತ್ರಿಸಲು ನಿನ್ನ ಹೃದಯವನ್ನು ಉಪಯೋಗಿಸು” ಎಂಬ ಗಾಂಧಿ ಅವರ ಹೇಳಿಕೆಯನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.
“Full effort is full Victory” ಎಂದು ಮಹಾತ್ಮ ಗಾಂಧಿ ಹೇಳಿದ್ದು, ಈ ವಿಚಾರವನ್ನು ಅಳವಡಿಸಿಕೊಳ್ಳಲು ನಾನು ಸದಾ ಪ್ರಯತ್ನಿಸುತ್ತಿದ್ದೇನೆ. ನಾನು ಯಾವುದೇ ವಿಚಾರದಲ್ಲಿ ಸಂಪೂರ್ಣ ಶ್ರಮವನ್ನು ಹಾಕಿದಾಗಲೇ ನಾನು ಯಶಸ್ಸು ಕಂಡಿದ್ದೇನೆ” ಎಂದರು.
“ಸ್ವತಂತ್ರವಾಗಬೇಕಾದರೆ ಮೊದಲು ನಿರ್ಬೀತನಾಗಬೇಕು” ಎಂದು ಮಹಾತ್ಮ ಗಾಂಧಿ ಹೇಳಿದಂತೆಯೇ ನಾನು ಯಾವುದೇ ಕೆಲಸ ಮಾಡುವಾಗ ಹೆದರಿದವನು ಅಲ್ಲವೇ ಅಲ್ಲ” ಎಂದರು.
“ದೇವರಿಗೆ ಯಾವುದೇ ಧರ್ಮವಿಲ್ಲ ಎಂದು ಗಾಂಧೀಜಿ ಹೇಳಿದಂತೆ ನನಗೆ ಎಲ್ಲಾ ಧರ್ಮಗಳ ಬಗ್ಗೆ ಗೌರವವಿದೆ. ಧರ್ಮ ಯಾವುದಾದರೂ ತತ್ವ ಒಂದೇ ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು. ಶ್ರಮದಿಂದಲೇ ಸಾಧನೆ. ಎಲ್ಲಿ ಶ್ರಮವಿದೆಯೋ ಅಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಅದನ್ನು ನಂಬಿಕೊಂಡು ಬಂದವನು ನಾನು” ಎಂದರು.
“ಹಿಟ್ಲರ್ ಅವರಿಗೆ ಗಾಂಧಿ ಅವರು ಬರೆದ ಪತ್ರವನ್ನು ಓದಿದಾಗ, ಶಾಂತಿಗಾಗಿ ಅವರು ಕೊಟ್ಟ ಸಂದೇಶವನ್ನು ಅರಿತಿದ್ದೇವೆ. ಹಿಂಸೆ ಎಂದಿಗೂ ನಮ್ಮ ಗುರಿಯಾಗಬಾರದು ಎಂಬ ಬಹುದೊಡ್ಡ ಸಂದೇಶವನ್ನು ನೀಡಿದ್ದಾರೆ ಎಂದು ತಿಳಿಸಿದರು.
“ವಿದ್ಯಾರ್ಥಿ ನಾಯಕನಾಗಿ ಬೆಳೆದವನು ನಾನು. ನಾನು ರೇಣುಕಾಚಾರ್ಯ ಕಾಲೇಜಿನಲ್ಲಿ ಓದುತ್ತಿದ್ದಾಗ, ವೂಡೇ. ಪಿ ಕೃಷ್ಣಾ ಅವರು ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು. ಅವರು ಮನಸ್ಸು ಮಾಡಿದ್ದರೆ ರಾಜಕಾರಣಿಯಾಗಬಹುದಿತ್ತು.” ಎಂದರು.
“ಈ ದೇಶಕ್ಕೆ ಗಾಂಧಿ ತತ್ವಗಳ ಬಗ್ಗೆ ಅರಿತಿರುವವರ ಅಗತ್ಯವಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷವಿದು. ರಾಜೀವ್ ಗಾಂಧಿಯವರು ಪಂಚಾಯಿತಿಯಿಂದ ಸಂಸತ್ತಿನವರೆಗೆ ನಾಯಕರನ್ನು ಬೆಳೆಸಬೇಕು. ನಾಯಕರನ್ನು ಸೃಷ್ಟಿ ಮಾಡುವವನೇ ನಿಜವಾದ ನಾಯಕ ಎಂದು ಹೇಳಿದ್ದರು. ನಾಯಕರನ್ನು ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ” ಎಂದರು.
“ಯುವ ಪೀಳಿಗೆ ಗಾಂಧಿಯವರ ತತ್ವಗಳಾದ ಅಹಿಂಸೆ ಶಾಂತಿಯನ್ನು ಅಳವಡಿಸಿಕೊಳ್ಳಬೇಕು. ಚೈನಾ ದೇಶದಲ್ಲಿ ಪ್ರಾಥಮಿಕ ಹಂತದಿಂದಲೇ ಗಾಂಧಿ ತತ್ವಗಳನ್ನು ಬೋಧಿಸುತ್ತಿದ್ದಾರೆ. ನಮಗಿಂತ ದೊಡ್ಡ ದೇಶವಾದ ಚೈನಾ ಕೂಡ ತಮ್ಮ ಮಕ್ಕಳಿಗೆ ಗಾಂಧಿಯವರ ವಿಚಾರಗಳನ್ನು ಬೋಧಿಸುತ್ತಿದೆ. ವಿಶ್ವದ ಎಲ್ಲಾ ನಾಯಕರು ಗಾಂಧಿಯವರ ವಿಚಾರಗಳನ್ನು ಅಳವಡಿಸಿಕೊಂಡಿದ್ದಾರೆ. ” ಎಂದರು.
“ಗಾಂಧಿವಾದಿ ಎಸ್.ಕರಿಯಪ್ಪ ಅವರಿಂದ ತಮಗೆ ರಾಜಕೀಯ ಪ್ರವೇಶದ ಪ್ರೇರಣೆ ದೊರೆಯಿತು. ನಾನು 12–13 ವರ್ಷದವನಿದ್ದಾಗ ಕನಕಪುರದಲ್ಲಿ ಎಸ್.ಕರಿಯಪ್ಪ ಎಂಬ ಗಾಂಧಿವಾದಿ ಶಾಸಕರಿದ್ದರು. ನಮ್ಮ ತಂದೆ-ತಾಯಿ ನನ್ನನ್ನು ಅವರ ಬಳಿ ಕರೆದುಕೊಂಡು ಹೋಗಿ ಅವರ ಕಾಲಿಗೆ ನಮಸ್ಕಾರ ಮಾಡಿಸಿದ್ದರು. ಅವರು ಸ್ವಾತಂತ್ರ್ಯ ಹೋರಾಟ ಮಾಡಿದವರು, ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಎಂದು ಹೇಳಿದ್ದರು” ಎಂದು ಸ್ಮರಿಸಿದರು.
“ಆ ಸಂದರ್ಭದಲ್ಲಿ ಜನರು ರಾಜಕಾರಣಿಗಳಿಗೆ ನೀಡುತ್ತಿದ್ದ ಗೌರವವನ್ನು ಕಂಡು ತಾನೂ ರಾಜಕಾರಣಕ್ಕೆ ಬರಬೇಕು ಎಂಬ ಆಲೋಚನೆ ಮೂಡಿತು. ಯಾವುದೇ ವೃತ್ತಿಯಲ್ಲಿದ್ದರೂ ಜನಸೇವೆ ಮಾಡುವ ಅವಕಾಶ ರಾಜಕಾರಣದಲ್ಲಿ ಇದೆ ಎಂಬ ಭಾವನೆಯಿಂದ ರಾಜಕೀಯಕ್ಕೆ ಹೆಜ್ಜೆ ಇಟ್ಟೆ” ಎಂದು ಹೇಳಿದರು.
Udaya Prabha > State News > ಮತದಾರರ ಪಟ್ಟಿ ಮರು ಪರಿಶೀಲನೆಗೆ ಭಾರತ ಚುನಾವಣಾ ಆಯೋಗ ಸೂಚನೆ; ಇದು ಇಡೀ ದೇಶದ ಮತದಾರರ ಹಕ್ಕಿಗೆ ಸಂದ ಜಯ: ಸಿಎಂ ಡಿ ಕೆ ಶಿವಕುಮಾರ್
ಮತದಾರರ ಪಟ್ಟಿ ಮರು ಪರಿಶೀಲನೆಗೆ ಭಾರತ ಚುನಾವಣಾ ಆಯೋಗ ಸೂಚನೆ; ಇದು ಇಡೀ ದೇಶದ ಮತದಾರರ ಹಕ್ಕಿಗೆ ಸಂದ ಜಯ: ಸಿಎಂ ಡಿ ಕೆ ಶಿವಕುಮಾರ್
Team Udayaprabha02/10/2026
posted on


,


















