| Latest Version 9.0.7 |

Feature Article

ಪ್ರಕೃತಿ ಮೈದುಂಬಿಕೊಂಡು ಹೊಸತಾಗುವ ಚೆಲುವಿನ ಹಬ್ಬ

 

 

ನಮ್ಮ ದೊಡ್ಡ ಹಬ್ಬಗಳಲ್ಲಿ ಯುಗಾದಿಯೂ ಒಂದು. ಹಳೆಯದೆಲ್ಲವ ಅಳಿಸಿ ಹೊಸತಾಗುವ ಈ ಹಬ್ಬ ವರ್ಷಾರಂಭದ ಸಂಕೇತವಾಗಿದೆ. ಮಾಗಿಯ ಕಾಲ ಮುಗಿದು ಬೇಸಿಗೆ ಬರುತ್ತಿದ್ದಂತೆ ಪ್ರಕೃತಿ ಮೈದುಂಬಿಕೊಳ್ಳುವದರೊಂದಿಗೆ ಹಬ್ಬ ಆಗಮಿಸುತ್ತದೆ. ವಸಂತ ಮಾಸ ಬರಲು ಸೃಷ್ಟಿಯು ಚಿಗಿತು ಕೊನರಾಗಿ ಹೂವು, ಮಿಡಿಗಳನ್ನು ಹೊತ್ತು ನಿಲ್ಲುವುದು. ದುಂಬಿಗಳು ಝೇಂಕರಿಸಿ ಮೊಗ್ಗೆ ಹೂಗಳೊಡನೆ ಆಟವಾಡುವವು. ಕೋಗಿಲೆಯು ಚಿಗುರು ಮೆದ್ದು ಕಂಠ ಪರಿಶುದ್ದವಾಗಿ ಪಂಚಮಸರದಲ್ಲಿ ಹಾಡುವುದು. ಪಕ್ಷಿಗಳು ಹೊಸ ದುಪ್ಪಳ ಧರಿಸುವುವು. ಸಕಲ ಸೃಷ್ಟಿಯೇ ಪ್ರಾಯ ತುಂಬಿ ಕುಲು ಕುಲು ನಗುವುದು. ಯುಗಾದಿ ಆಗಮಿಸುವ ಸಂಕೇತವಿದು.
ಜೀವನದ ಸಿಹಿ ಕಹಿಗಳನ್ನು ಸಮಾನವಾಗಿ ಸ್ವೀಕರಿಸಿ ಬದುಕಬೇಕೆಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ. ಹಬ್ಬದ ದಿನ ಮನೆಯವರೆಲ್ಲಾ ಸ್ನಾನ ಮಾಡಿ ಹೊಸ ಬಟ್ಟೆಯನ್ನು ಧರಿಸುತ್ತಾರೆ. ದೇವಸ್ಥಾನಗಳಿಗೆ ತೆರಳಿ ಪೊಜೆ ಮಾಡಿಸಿಕೊಂಡು ಬಂದ ನಂತರ ಮನೆಯಲ್ಲಿ ಪಿತೃ ದೇವತೆಗಳಿಗೆ ಎಡೆ ಹಿಡಿಯುತ್ತಾರೆ. ಬೇವು ಬೆಲ್ಲವನ್ನು ಸಮನಾಗಿ ಬೆರೆಸಿ ದೇವರಿಗೆ ಅರ್ಪಿಸಿ ಎಲ್ಲರೂ ಹಂಚಿಕೊಂಡು ಸೇವಿಸುತ್ತಾರೆ. ವರ್ಷದಲ್ಲಿ ಬರುವ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂಬುದು ಇದರ ಉದ್ದೇಶವಾಗಿದೆ.

ಗುಡಿ ಪಾಡವಾ..

ನೂತನ ವರ್ಷದ ಸ್ವಾಗತದ ಸಂಕೇತವಾಗಿ ಮನೆಗೆ ಗುಡಿಯನ್ನಿಟ್ಟು ತೋರಣ ಕಟ್ಟುವರು. ಮನೆಯ ಮುಂಭಾಗದಲ್ಲಿ ಬ್ರಹ್ಮ ಧ್ವಜವನ್ನು ನಿಲ್ಲಿಸುತ್ತಾರೆ, ಇದನ್ನು ‘ಗುಡಿ ಪಾಡವಾ’ ಎಂದು ಕರೆಯುತ್ತಾರೆ. ರಾವಣನ ವಧೆಯ ನಂತರ ಅಯೋಧ್ಯೆಗೆ ಮರಳುವ ರಾಮನ ವಿಜಯದ ಮತ್ತು ಆನಂದದ ಪ್ರತೀಕವೆಂದು ಮನೆ ಮನೆಗಳಲ್ಲಿ ಗುಡಿ ಪಾಡವಾ ಕಟ್ಟುತ್ತಾರೆ. ದೊಡ್ಡ ಕೋಲಿನ ತುದಿಗೆ ಹಸಿರು ಅಥವಾ ಹಳದಿ ಬಣ್ಣದ ಜರಿಯ ಖಣವನ್ನು ಕಟ್ಟುತ್ತಾರೆ. ಅದರ ಮೇಲೆ ಬೆಲ್ಲದ ಗಂಟು, ಬೇವಿನ ಚಿಗುರೆಲೆ, ಮಾವಿನ ಎಲೆ ಮತ್ತು ಕೆಂಪು ಹೂಗಳ ಹಾರವನ್ನು ಕಟ್ಟಿ ಮೇಲೆ ಬೆಳ್ಳಿಯ ಇಲ್ಲವೇ ತಾಮ್ರದ ಕಲಶದಿಂದ ಶೃಂಗರಿಸಿ ಧ್ವಜವನ್ನು ನಿಲ್ಲಿಸುತ್ತಾರೆ. ಪೂಜೆಮಾಡಿ ಆರತಿ ಬೆಳಗುತ್ತಾರೆ. ಸೂರ್ಯಾಸ್ತದ ಸಮಯದಲ್ಲಿ ಬೆಲ್ಲದ ನೈವೇದ್ಯವನ್ನು ತೋರಿಸಿ ಧ್ವಜವನ್ನು ಕೆಳಗಿಳಿಸುತ್ತಾರೆ.

ಜನಪದ ಆಟಗಳ ರಂಗು.

ಯುಗಾದಿ ಹಬ್ಬದ ಸಂದರ್ಭದಲ್ಲಿ ಹಲವು ಆಟಗಳ ಮೂಲಕ ಜನಪದರು ತಮ್ಮ ಕಷ್ಟ ಸುಖ ಹಂಚಿಕೊಳ್ಳುತ್ತಾರೆ. ಹೊಲದಲ್ಲಿ ದುಡಿದು ರಾಶಿಮಾಡಿ ಹೊಸಬೆಳೆಯನ್ನು ಮನೆತುಂಬಿಸಿಕೊಂಡ ನಮ್ಮ ರೈತಾಪಿ ಜನರು ಯುಗಾದಿ ಬರುವ ಹೊತ್ತಿಗೆ ನಿರಾಳವಾಗಿರುತ್ತಾರೆ. ಹಬ್ಬದ ಸಂದರ್ಭದಲ್ಲಿ ಹಲವಾರು ಜನಪದ ಆಟಗಳು ಗರಿಗೆದರುತ್ತವೆ. ಲಗೋರಿ, ಕಬಡ್ಡಿ, ಚೌಕಾಬಾರ, ಬಟ್ಟೆ ಚಂಡಾಟ, ಚಿನ್ನಿದಾಂಡು, ಬುಗರಿ, ಕುಂಟೆಬಿಲ್ಲೆ, ಸರಗೆರಿ ಹೀಗೆ ಹಲವಾರು ಆಟಗಳನ್ನು ಸಣ್ಣವರು ದೊಡ್ಡವರೆನ್ನದೇ ಆಡುತ್ತಾರೆ. ಆಟದ ಸೋಲು ಗೆಲುವುಗಳು ಬರುವ ವರ್ಷದ ಸೋಲು ಗೆಲುವುಗಳನ್ನು ನಿರ್ಣಯಿಸುತ್ತದೆಂಬ ನಂಬಿಕೆ ಜನಪದರಲ್ಲಿದೆ.

ಹೊನ್ನೆತ್ತು ಹಿಡಿಯುವುದು.

ಕೆಲವು ಹಳ್ಳಿಗಳಲ್ಲಿ ಎತ್ತುಗಳನ್ನು ಓಡಿಸುವ ಆಟವಾಡುತ್ತಾರೆ. ಚೆನ್ನಾಗಿ ಮೇಯಿಸಿದ ಒಂದು ಎತ್ತಿನ ಕೊಂಬಿಗೆ ‘ಐದಣ’ವನ್ನು ಬಟ್ಟೆಯಿಂದ ಕಟ್ಟಿ. ಅದರ ಹಗ್ಗ ಮೂಗುದಾರವನ್ನು ಬಿಚ್ಚಿ ರಂಗದ ಮುಂದೆ ನಿಲ್ಲಿಸಲಾಗುತ್ತದೆ. ನಂತರ ಜನರ ಸಮ್ಮುಖದಲ್ಲಿ ಅದನ್ನು ಕೆಣಕಿ, ಬೆದರಿಸಿ ಓಡಿಸುತ್ತಾರೆ, ಹೀಗೆ ಓಡುವ ಎತ್ತನ್ನು ತಾಕತ್ತಿರುವ ಯುವಕರು ಓಡಾಡಿಸಿಕೊಂಡು ಹಿಡಿದು ನಿಲ್ಲಿಸಿದರೆ ಕಟ್ಟಿದ ‘ಐದಣ’ವು ಸಿಗುವುದಲ್ಲದೇ ಊರಲ್ಲಿ ಅವರ ಪ್ರತಿಷ್ಠೆ ಹೆಚ್ಚುತ್ತದೆ. ಈ ಆಟಕ್ಕೆ ಹೊನ್ನೆತ್ತು ಹಿಡಿಯುವುದು ಎನ್ನುತ್ತಾರೆ.

ವರ್ಷದ ಪಂಚಾಂಗ…

ವರ್ಷದ ಪಂಚಾಂಗವನ್ನು ತಿಳಿದುಕೊಳ್ಳಲು ಜನಪದರು ಊರ ಹಿರಿಯರಿಂದ ಹೊಸ ವರ್ಷದ ಪಂಚಾಂಗವನ್ನು ಓದಿಸಿ ವರ್ಷದ ಶುಭಾಶುಭಗಳು, ಮಳೆ ಬೆಳೆ, ಯೋಗ, ಗ್ರಹ ಬಲ ಮೊದಲಾದವನ್ನು ತಿಳಿದುಕೊಳ್ಳುತ್ತಾರೆ. ಯುಗಾದಿ ಜನಪದರಿಗೆ ಪ್ರತಿಯೊಂದು ಹೊಸತನದ ಮತ್ತು ಆರಂಭದ ಸಂಕೇತ. ಹೊಸ ಮುಹೂರ್ತದಲ್ಲಿ ಉಳುವುದಕ್ಕೆ ಇಂದೇ ಸಾಂಪ್ರದಾಯಕವಾಗಿ ಆರಂಭ ಮಾಡುವರು. ಇದಕ್ಕೆ ಮಜಲು ಎಂದು ಕರೆಯತ್ತಾರೆ ಹೊಸ ಮಳೆಗಳು ಕೂಡುವವು. ಉಗಾದಿಯ ದಿನ ಚಂದ್ರ ದರ್ಶನ ಮಾಡುವುದು ವಿಶೇಷ. ಅಂದು ಕಾಣುವ ಚಂದ್ರನನ್ನು ನೋಡಿದರೆ ಪವಿತ್ರವೆಂಬ ಭಾವನೆ ಜನಪದರಲ್ಲಿದೆ. ಗಿಡ ಮರ ಬೆಟ್ಟ ಗುಡ್ಡ ಹತ್ತಿ ಚಂದ್ರ ದರ್ಶನ ಮಾಡುತ್ತಾರೆ.ಯುಗಾದಿಯಂದು ಕಾಣುವ ಚಂದ್ರನ ಕೋಡುಗಳ ದಿಕ್ಕಿನಿಂದ ಆ ವರ್ಷದ ಆಯವ್ಯಯ, ಮಳೆ ಯೋಗವನ್ನು ತಮ್ಮದೇ ರೀತಿಯಲ್ಲಿ ಕಂಡುಕೊಳ್ಳುತ್ತಾರೆ. ಒಟ್ಟಾರೆ ಯುಗಾದಿಯು ಪ್ರಕೃತಿಯೊಂದಿಗೆ ಮನುಷ್ಯರನ್ನೂ ಹೊಸತಾಗಿಸುವ ಹಬ್ಬವಾಗಿದೆ.ಪ್ರತಿ ಆರಂಭವೂ ಯುಗಾದಿಯೊಂದಿಗೆ ಶುರುವಾಗುತ್ತದೆ.

ಚಿತ್ರ ರೂಪದರ್ಶಿ : ಶ್ರೀಜಾ ಘಾಟಗೆ.

– ಡಾ. ಪ್ರಕಾಶ ಗ.ಖಾಡೆ, ಬಾಗಲಕೋಟೆ

Team Udayaprabha
";