| Latest Version 9.0.7 |

National News

ಇಮಾಮರು, ಅರ್ಚಕರ ಸರ್ಕಾರಿ ಸಹಾಯಧನ ಸಂಪೂರ್ಣ ಸ್ಥಗಿತ ; ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರ

 

 

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ, ಸೋಮವಾರ ನಡೆದ ಮೊದಲ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಈ ಪೈಕಿ, ಮುಂಬರುವ ಜೂನ್ ತಿಂಗಳಿನಿಂದ ಧಾರ್ಮಿಕ ಆಧಾರಿತ ಸರ್ಕಾರಿ ನೆರವುಗಳನ್ನು ಸ್ಥಗಿತಗೊಳಿಸುವುದು ಮತ್ತು ಕಲ್ಕತ್ತಾ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯದ ಪ್ರಸ್ತುತ ಇತರ ಹಿಂದುಳಿದ ವರ್ಗಗಳ (OBC) ಪಟ್ಟಿಯನ್ನು ರದ್ದುಗೊಳಿಸುವುದು ಅತ್ಯಂತ ಪ್ರಮುಖ ನಿರ್ಧಾರಗಳಾಗಿವೆ. “ಕೋಟಾ ಅರ್ಹತೆಯನ್ನು ನಿರ್ಧರಿಸಲು ಹೊಸ ಸಮಿತಿಯೊಂದನ್ನು ರಚಿಸಲಾಗುವುದು,” ಎಂದು ಸಚಿವೆ ಅಗ್ನಿಮಿತ್ರಾ ಪಾಲ್ ತಿಳಿಸಿದ್ದಾರೆ.

ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆ ಹಾಗೂ ಅಲ್ಪಸಂಖ್ಯಾತರ ವ್ಯವಹಾರಗಳು ಮತ್ತು ಮದರಸಾ ಶಿಕ್ಷಣ ಇಲಾಖೆಗಳ ಮೂಲಕ ಧಾರ್ಮಿಕ ವರ್ಗೀಕರಣದಡಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳು ಈ ತಿಂಗಳ ಅಂತ್ಯದವರೆಗೆ ಮಾತ್ರ ಮುಂದುವರಿಯಲಿದ್ದು, ಜೂನ್‌ನಿಂದ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ಈ ಕುರಿತು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಲಾಗುವುದು ಎಂದು ಅಗ್ನಿಮಿತ್ರಾ ಪಾಲ್ ಮಾಹಿತಿ ನೀಡಿದ್ದಾರೆ.

 

ಧಾರ್ಮಿಕ ಆಧಾರಿತ ಯೋಜನೆಗಳನ್ನು ನಿಲ್ಲಿಸುವ ಈ ನಿರ್ಧಾರವು ರಾಜ್ಯದ ಹಿಂದಿನ ನೀತಿಗಳಿಗೆ ತದ್ವಿರುದ್ಧವಾದ ದೊಡ್ಡ ನಿರ್ಧಾರವಾಗಿದೆ. ಕಲ್ಯಾಣ ಕಾರ್ಯಕ್ರಮಗಳು ಧಾರ್ಮಿಕ ಐಡೆಂಟಿಟಿ ಆಧಾರದ ಮೇಲೆ ಇರಬಾರದು ಎಂಬುದು ಪ್ರಸ್ತುತ ಸರ್ಕಾರದ ಸ್ಪಷ್ಟ ನಿಲುವಾಗಿದೆ.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಒಂದು ವರ್ಷದ ನಂತರ, ಮಮತಾ ಬ್ಯಾನರ್ಜಿ ನೇತೃತ್ವದ ಹಿಂದಿನ ತೃಣಮೂಲ ಕಾಂಗ್ರೆಸ್ (TMC) ಸರ್ಕಾರವು ಇಮಾಮ್‌ಗಳು, ಮುಯೆಜ್ಜೀನ್‌ಗಳು ಮತ್ತು ದೇವಾಲಯದ ಅರ್ಚಕರಿಗೆ ಮಾಸಿಕ ಗೌರವಧನವನ್ನು ಘೋಷಿಸಿತ್ತು.

2012ರಲ್ಲಿ ಮೊದಲ ಬಾರಿಗೆ ಪಶ್ಚಿಮ ಬಂಗಾಳದಾದ್ಯಂತ ಇರುವ ಇಮಾಮ್‌ಗಳಿಗೆ ಮಾಸಿಕ ಗೌರವಧನ ಯೋಜನೆಯನ್ನು ಪರಿಚಯಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ವರ್ಗದ ಧಾರ್ಮಿಕ ಮುಖಂಡರನ್ನು ಬೆಂಬಲಿಸಲು ಈ ಯೋಜನೆಯಡಿ ನೋಂದಾಯಿತ ಇಮಾಮ್‌ಗಳಿಗೆ ತಿಂಗಳಿಗೆ 2,500 ರೂ. ನೀಡಲಾಗುತ್ತಿತ್ತು.

ನಂತರದ ದಿನಗಳಲ್ಲಿ: ಇದೇ ಮಾದರಿಯ ಆರ್ಥಿಕ ನೆರವನ್ನು ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವ ಮುಯೆಜ್ಜೀನ್‌ಗಳಿಗೂ ವಿಸ್ತರಿಸಲಾಯಿತು. ಈ ಎರಡೂ ನಿಧಿಗಳನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ವಿತರಿಸಲಾಗುತ್ತಿತ್ತು.

ಮುಸ್ಲಿಂ ಧಾರ್ಮಿಕ ಮುಖಂಡರಿಗೆ ಮಾತ್ರ ಸರ್ಕಾರ ಬೆಂಬಲ ನೀಡುತ್ತಿದೆ ಎಂಬ ಟೀಕೆಗಳನ್ನು ನಿವಾರಿಸಲು ಅಂದಿನ ಸರ್ಕಾರವು 2020ರಲ್ಲಿ ಹಿಂದೂ ಅರ್ಚಕರಿಗೂ (ಪುರೋಹಿತರು) ಮಾಸಿಕ ಭತ್ಯೆಯನ್ನು ನೀಡುವುದನ್ನು ಆರಂಭಿಸಿತು.

ನೋಂದಾಯಿತ ಪುರೋಹಿತರಿಗೆ ತಿಂಗಳಿಗೆ1,000 ರೂ. ನಿಗದಿಪಡಿಸಲಾಗಿದ್ದ ಗೌರವಧನವನ್ನು, 2026 ರ ವಿಧಾನಸಭಾ ಚುನಾವಣೆಗೆ ಮುನ್ನ 2,000 ರೂ.ಗಳಿಗೆ ಪರಿಷ್ಕರಿಸಲಾಗಿತ್ತು.

 

ಭ್ರಷ್ಟಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳ ತನಿಖೆಗೆ ಆಯೋಗ ರಚನೆ

ಮಮತಾ ಬ್ಯಾನರ್ಜಿ ಸರ್ಕಾರದ ಅವಧಿಯಲ್ಲಿ ನಡೆದ ನಿಧಿ ವಿತರಣೆಯ ಅಕ್ರಮಗಳನ್ನು ತನಿಖೆ ಮಾಡಲು ಸರ್ಕಾರವು ಆಯೋಗವನ್ನು ರಚಿಸಿದೆ. ಸಾಂಸ್ಥಿಕ ಭ್ರಷ್ಟಾಚಾರದ ಆರೋಪಗಳ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ಬಿಸ್ವಜಿತ್ ದಾಸ್ ಅವರ ಮೇಲ್ವಿಚಾರಣೆಯಲ್ಲಿ ಸುವೇಂದು ಅಧಿಕಾರಿ ಸರ್ಕಾರ ಸಮಿತಿ ರಚಿಸಿದೆ.

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ತನಿಖೆನಡೆಸಲು ಸಹ ಆಯೋತಿ ರಚಿಸಲಾಗಿದೆ. ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ” ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನಾವು ನಿವೃತ್ತ ನ್ಯಾಯಮೂರ್ತಿ ಸಮಾಪ್ತಿ ಚಟರ್ಜಿ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದೇವೆ. ಐಪಿಎಸ್ ಅಧಿಕಾರಿ ದಮಯಂತಿ ಸೇನ್ ಇದರ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ರಾಜ್ಯಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಈ ಸಮಿತಿ ತನಿಖೆ ಮಾಡಲಿದೆ,” ಎಂದು ಪ್ರಕಟಿಸಿದರು. “ನಾವು ಇನ್ನು ಒಂದು ತಿಂಗಳ ಒಳಗಾಗಿ ಈ ತನಿಖಾ ವರದಿಯನ್ನು ನಿರೀಕ್ಷಿಸುತ್ತಿದ್ದೇವೆ,” ಎಂದೂ ಅವರು ತಿಳಿಸಿದ್ದಾರೆ.

Team Udayaprabha
";