| Latest Version 9.0.7 |

National News

ಧರ್ಮಸ್ಥಳ ಬುರುಡೆ ಪ್ರಕರಣ : ಎಸ್‌ಐಟಿ ಮುಂದೆ ಷಡ್ಯಂತ್ರದ ವಿವರ ಬಿಚ್ಚಿಟ್ಟ ಚಿನ್ನಯ್ಯ

 

 

 

 

 

ಬೆಂಗಳೂರು: ‘ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖಾ ವರದಿಯನ್ನು ಬಹಿರಂಗಪಡಿಸುವಂತೆ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನಿರ್ದೇಶಿಸಬೇಕು ಮತ್ತು ತನಿಖೆಯಲ್ಲಿ ಹೆಸರಿಸಲಾಗಿರುವ ಪಿತೂರಿಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆದೇಶಿಸಬೇಕು’ ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊ ಳಿಸಲು ಹೈಕೋರ್ಟ್‌ ಆದೇಶಿಸಿದೆ.

 

ಈ ಕುರಿತು ಮಂಡ್ಯ ತಾಲ್ಲೂಕಿನ ಚಿಕ್ಕಬಳ್ಳಿ ಗ್ರಾಮದ ಚಿನ್ನ (50) ಅಲಿಯಾಸ್ ಚಿನ್ನಯ್ಯ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

 

ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಗೊಳಿಸಲು ಆದೇಶಿಸಿದ ನ್ಯಾಯಪೀಠ, ‘ಎಸ್‌ಐಟಿ ತನಿಖೆಯ ಸ್ಥಿತಿಗತಿ ಬಗ್ಗೆ ವಿವರ ಒದಗಿಸಿ’ ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಜೂ. 29ಕ್ಕೆ ಮುಂದೂಡಿತು.

 

ಅರ್ಜಿಯಲ್ಲಿ ಏನಿದೆ?: ‘ನನ್ನನ್ನು ವಿಠ್ಠಲ ಗೌಡ ಅವರು ಮಹೇಶ್‌ ಶೆಟ್ಟಿ ತಿಮರೋಡಿಗೆ ಪರಿಚಯಿಸಿದರು. ಧರ್ಮಸ್ಥಳದಲ್ಲಿ ಅನೇಕ ಶವಗಳನ್ನು ದಫನ್‌ ಮಾಡಲಾಗಿದೆ ಎಂದಿದ್ದರು. ನಂತರ ಗಿರೀಶ್‌ ಮಟ್ಟಣ್ಣನವರ, ವಿಠ್ಠಲ ಗೌಡ, ಗಣೇಶ್‌ ಮತ್ತಿತರರು ಕೇರಳ, ತಮಿಳುನಾಡು ಸೇರಿದಂತೆ ಹಲವೆಡೆ ಕರೆದೊಯ್ದರು. ಆಗಿಂದಾಗ್ಗೆ ₹5ಸಾವಿರದಿಂದ ₹15 ಸಾವಿರ ನೀಡುತ್ತಿದ್ದರು. ಬೆಂಗಳೂರಿನಲ್ಲಿರುವ ಜಯಂತ್‌ ಮನೆಗೆ ಕರೆದೊಯ್ದು ತಲೆ ಬುರುಡೆ ಕೊಟ್ಟು ಕೈಯಲ್ಲಿ ಹಿಡಿದುಕೊಳ್ಳುವಂತೆ ಸೂಚಿಸಿ ಫೋಟೊ ತೆಗೆದುಕೊಂಡರು. ನಂತರ ಸುಜಾತಾ ಭಟ್‌ ಅವರೊಂದಿಗೆ ಗಿರೀಶ್‌ ಮಟ್ಟಣ್ಣನವರ ಸುಪ್ರೀಂ ಕೋರ್ಟ್‌ಗೆ ಕರೆದೊಯ್ದರು’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

 

‘ಉಜಿರೆಯಲ್ಲಿ ಮಹೇಶ್‌ ಶೆಟ್ಟಿ ತಿಮರೋಡಿ ನಿವಾಸದಲ್ಲಿ ನನ್ನನ್ನು ಕೂಡಿ ಹಾಕಲಾಗಿತ್ತು. ಸಂಜೆ ವೇಳೆ ಗಿರೀಶ್‌ ಮಟ್ಟಣ್ಣನವರ ಮತ್ತು ಮಹೇಶ್‌ ಶೆಟ್ಟಿ ತಿಮರೋಡಿಗೆ ಮಸಾಜ್‌ ಮಾಡಲು ಒತ್ತಾಯ ಮಾಡಲಾಗುತ್ತಿತ್ತು. ವಕೀಲರು ಹೇಳಿದಂತೆ ಕೋರ್ಟ್‌ನಲ್ಲಿ ಹೇಳದಿದ್ದರೆ ನಿನ್ನನ್ನು ಕೊಂದು ಅದೇ ಜಾಗದಲ್ಲಿ ಹೂಳುತ್ತೇವೆ ಎಂದು ಬೆದರಿಸಿದ್ದರು’ ಎಂದು ಚಿನ್ನಯ್ಯ ಹೇಳಿದ್ದಾರೆ.

 

‘ಎಂ.ಡಿ ಸಮೀರ್‌ ಮತ್ತು ಅಜಯ್‌ ಅವರ ಯೂ ಟ್ಯೂಬ್‌ ಚಾನಲ್‌ಗಳಲ್ಲಿ ಅವರ ಸೂಚನೆಯಂತೆ ಹೇಳಿಸಿ ರೆಕಾರ್ಡ್‌ ಮಾಡಿಸಲಾಯಿತು. ತಲೆ ಬುರುಡೆ ನೀಡಿ ಪೊಲೀಸರಿಗೆ ದೂರು ಕೊಟ್ಟ ಬಳಿಕ ಕೇರಳದ ರೆಸಾರ್ಟ್‌ಗೆ ಕರೆದೊಯ್ದರು. ಅಲ್ಲಿ ನಟ ಪ್ರಕಾಶ್‌ ರಾಜ್‌ಗೆ ಕರೆ ಮಾಡಿದರು. ಪ್ರಕಾಶ್‌ ರಾಜ್‌ ತಮಿಳಿನಲ್ಲಿ ಮಾತನಾಡಿ ಗಿರೀಶ್‌ ಮಟ್ಟಣ್ಣವರ ಹೇಳಿಕೊಟ್ಟಂತೆ ಹೇಳಿಕೆ ನೀಡಬೇಕು ಎಂದರು’ ಎಂದು ವಿವರಿಸಲಾಗಿದೆ.

 

‘ಮಹೇಶ್‌ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್‌ ಮಟ್ಟಣ್ಣವರ ಬಂಗಲೆಗುಡ್ಡದ ಸ್ಥಳ ಗುರುತಿಸಿ ಅಲ್ಲಿ ಉತ್ಖನನ ನಡೆಸಿ ಸರ್ಕಾರದ ಹಣ ವ್ಯಯ ಮಾಡಿಸುವಂತೆ ಸೂಚಿಸಿದರು. ಈ ಯೋಜನೆಯ ಬಜೆಟ್‌ ₹200 ಕೋಟಿ ಇದ್ದು, ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸಲು ಸಹಕರಿಸಿದರೆ ₹50 ಲಕ್ಷ ನೀಡುವುದಾಗಿ ಆಮಿಷ ಒಡ್ಡಿದರು. ಮಹೇಶ್‌ ಶೆಟ್ಟಿ ತಿಮರೋಡಿ, ಗಿರೀಶ್‌ ಮಟ್ಟಣ್ಣವರ, ವಿಠ್ಡಲ ಗೌಡ, ಜಯಂತ್‌, ಯೂ ಟ್ಯೂಬರ್‌ಗಳಾದ ಎಂ.ಡಿ.ಸಮೀರ್‌, ಅಜಯ್‌ ಮತ್ತು ದಿನೇಶ್‌ ಹೇಳಿದ ಜಾಗಗಳನ್ನು ಎಸ್‌ಐಟಿಗೆ ತೋರಿಸುವಂತೆ ಸೂಚಿಸಿದರು. ಆ ರೀತಿ ಮಾಡದಿದ್ದರೆ ನನ್ನ ಪತ್ನಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಇವರ ಷಡ್ಯಂತ್ರದಿಂದ ಭೀತನಾಗಿ ಸತ್ಯ ಹೇಳಲು ತೀರ್ಮಾನಿಸಿದೆ. ನಂತರ ಎಸ್‌ಐಟಿ ಮುಂದೆ ಷಡ್ಯಂತ್ರದ ವಿವರ ಬಿಚ್ಚಿಟ್ಟೆ’ ಎಂದು ವಿವರಿಸಿದ್ದಾರೆ.

Team Udayaprabha
";