| Latest Version 9.0.7 |

National News

ವೆನೆಜುಲಾದಲ್ಲಿ ಭೀಕರ ಅವಳಿ ಭೂಕಂಪ : 32 ಸಾವು, 700ಕ್ಕೂ ಹೆಚ್ಚು ಮಂದಿಗೆ ಗಾಯ

 

 

ವೆನೆಜುಲಾದಲ್ಲಿ ಬುಧವಾರ ಸಂಜೆ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಕಟ್ಟಡಗಳು ಕುಸಿಯಲಾರಂಭಿಸಿದವು, ವಿದ್ಯುತ್ ಸಂಪರ್ಕ ಕಡಿತಗೊಳ್ಳಲು ಶುರುವಾಯಿತು. ಏನಾಗುತ್ತಿದೆ ಎಂದು ಜನರು ಗ್ರಹಿಸಿ ಸುರಕ್ಷಿತ ಸ್ಥಳಗಳಿಗೆ ಓಡುವ ಮುನ್ನವೇ, ರಾಜಧಾನಿಯಲ್ಲಿ 7.5 ತೀವ್ರತೆಯ ಮತ್ತೊಂದು ಶಕ್ತಿಶಾಲಿ ಭೂಕಂಪ ಸಂಭವಿಸಿತು. ಕೇವಲ 39 ಸೆಕೆಂಡುಗಳ ಅಂತರದಲ್ಲಿ ಸಂಭವಿಸಿದ ಈ ಅವಳಿ ಭೂಕಂಪಗಳು ಕಾರಕಾಸ್‌ನಲ್ಲಿ ತೀವ್ರ ಆತಂಕ ಸೃಷ್ಟಿಸಿದವು. ಈ ದುರಂತದಲ್ಲಿ ಕನಿಷ್ಠ 32 ಜನರು ಸಾವಿಗೀಡಾಗಿದ್ದಾರೆ ಮತ್ತು 700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವೆನೆಜುಲಾದ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ತಿಳಿಸಿದ್ದಾರೆ.

 

ಕಾರಕಾಸ್‌ನ ಬರುಟಾ ಮುನ್ಸಿಪಾಲಿಟಿಯಲ್ಲಿ ಕನಿಷ್ಠ ಮೂವರು ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಮೇಯರ್ ತಿಳಿಸಿದ್ದಾರೆ.

“ಮೆಟ್ಟಿಲುಗಳು ಕಿತ್ತುಬಂದವು, ಇಡೀ ಗೋಡೆ ಬಿರುಕು ಬಿಟ್ಟಿತು. ಚಾವಣಿಯಿಂದ ವಸ್ತುಗಳು ಕೆಳಗೆ ಬಿದ್ದವು. ಅದು ಅತ್ಯಂತ ಭೀಕರವಾಗಿತ್ತು,” ಎಂದು ಕಾರಕಾಸ್‌ನ 54 ವರ್ಷದ ಬ್ಯಾಂಕ್ ಉದ್ಯೋಗಿ ಒಡಾಲಿಸ್ ಎಸ್ಕಾ ಲೋನಾ ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದ್ದಾರೆ.

ಛಾವಣಿ ಕುಸಿದು ಬಿದ್ದಿದ್ದರಿಂದ ವೆನೆಜುಲಾದ ಸೈಮನ್ ಬೊಲಿವರ್ ಅಂತಾಷ್ಟ್ರೀಯ ವಿಮಾನ ನಿಲ್ದಾಣವು ಸಂಪೂರ್ಣವಾಗಿ ಧೂಳಿನಿಂದ ತುಂಬಿಹೋಗಿತ್ತು. ವಿಮಾನ ನಿಲ್ದಾಣದ ದೃಶ್ಯಗಳಲ್ಲಿ, ಟರ್ಮಿನಲ್ ನಡುಗುತ್ತಿದ್ದಂತೆ ಪ್ರಯಾಣಿಕರು ತಮ್ಮ ಕೈಯಲ್ಲಿ ಲಗೇಜ್ ಹಿಡಿದುಕೊಂಡು ಕಟ್ಟಡದಿಂದ ಹೊರಗೆ ಓಡುತ್ತಿರುವುದು ಕಂಡುಬಂದಿದೆ. ಕೆಲವರು ಕಟ್ಟಡದ ಒಳಗಿನ ಆಹಾರದ ಕೌಂಟರ್ ಅಡಿಯಲ್ಲಿ ಆಶ್ರಯ ಪಡೆಯುತ್ತಿರುವುದು ಕಂಡುಬಂದಿದೆ.

 

ಕರಾವಳಿ ನಗರವಾದ ಲಾ ಗುವೈರಾದಿಂದ ಬಂದ ವೀಡಿಯೊವೊಂದು ಎರಡು ಪ್ರಮುಖ ಭೂಕಂಪಗಳ ನಂತರದ ಭೀಕರತೆಯನ್ನು ತೋರಿಸುತ್ತದೆ. ಗಾಳಿಯಲ್ಲಿ ಧೂಳು, ಜನರಿಲ್ಲದ ರಸ್ತೆಗಳು ಮತ್ತು ಹಾನಿಗೊಳಗಾದ ಕಟ್ಟಡಗಳು ಅಲ್ಲಿ ಕಂಡುಬಂದಿವೆ.

ರಾಜಧಾನಿ ಕಾರಕಾಸ್‌ನ ಮತ್ತೊಂದು ವೀಡಿಯೊದಲ್ಲಿ, ಅವಶೇಷಗಳ ರಾಶಿಗಳು ಕಂಡುಬಂದಿದ್ದು, ಅವುಗಳ ನಡುವೆ ಜನರ ಬಟ್ಟೆಗಳು ಮತ್ತು ಸಾಮಗ್ರಿಗಳು ಇಣುಕಿ ಕಾಣುತ್ತಿವೆ. ಈ

ಒಂದು ಹೃದಯಸ್ಪರ್ಶಿ ದೃಶ್ಯದಲ್ಲಿ, ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನು ಉಳಿಸಿಕೊಳ್ಳುವುದರ ಜೊತೆಗೆ, ತನ್ನ ಎರಡು ಸಾಕು ನಾಯಿಗಳನ್ನು ಕೈಯಲ್ಲಿ ಎತ್ತಿಕೊಂಡು ಹಾನಿಗೊಳಗಾದ ಕಟ್ಟಡದಿಂದ ಹೊರಬರುತ್ತಿರುವುದು ಕಂಡುಬಂದಿದೆ.

 

ಕಳೆದ ಒಂದು ಶತಮಾನಕ್ಕೂ ಹೆಚ್ಚು ಅವಧಿಯಲ್ಲಿ ದೇಶಕ್ಕೆ ಅಪ್ಪಳಿಸಿದ ಅತ್ಯಂತ ಪ್ರಬಲವಾದ ಭೂಕಂಪಗಳಲ್ಲಿ ಇದು ಒಂದಾಗಿದೆ ಎಂದು ಹೇಳಲಾಗುತ್ತಿದ್ದು, ಇದರ ತೀವ್ರತೆಯು ಕಟ್ಟಡದ ಒಳಗಿನ ದೃಶ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಲಿವಿಂಗ್ ರೂಮ್‌ನ ದೃಶ್ಯವೊಂದರಲ್ಲಿ, ಮೇಜಿನ ಮೇಲಿದ್ದ ಹೂದಾನಿ ಕೆಳಗೆ ಬಿದ್ದಿದೆ, ಗೋಡೆಗೆ ಅಳವಡಿಸಲಾಗಿದ್ದ ಟೆಲಿವಿಷನ್ ತೀವ್ರವಾಗಿ ನಡುಗುತ್ತಿದೆ ಮತ್ತು ಅದರ ಪಕ್ಕದಲ್ಲಿದ್ದ ಸೋಫಾ ಮುಂದಕ್ಕೆ ಮತ್ತು ಹಿಂದಕ್ಕೆ ಚಲಿಸುತ್ತಿರುವುದು ಕಂಡುಬಂದಿದೆ.

ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ಪ್ರಕಾರ ಗಾಯಗೊಂಡವರು ಮತ್ತು ಸಾವಿಗೀಡಾದವರ ಸಂಖ್ಯೆ ಸಾವಿರಾರು ಇರಬಹುದು ಎಂದು ಅಂದಾಜಿಸಲಾಗಿದೆ. ಭೂಕಂಪದಿಂದಾಗಿ ಹಲವೆಡೆ ಭೂಕುಸಿತಗಳು ಸಹ ಸಂಭವಿಸಿವೆ.

 

ಮೊದಲ ಭೂಕಂಪವು ಕರಾವಳಿ ಪಟ್ಟಣವಾದ ಮೊರಾನ್‌ನಿಂದ ಪಶ್ಚಿಮಕ್ಕೆ 21 ಕಿಲೋಮೀಟರ್ (13 ಮೈಲಿ) ದೂರದಲ್ಲಿ ಕೇಂದ್ರಬಿಂದುವನ್ನು ಹೊಂದಿದ್ದು, ಜಿಎಂಟಿ (GMT) 2204 ಕ್ಕೆ ಸಂಭವಿಸಿತು. 39 ಸೆಕೆಂಡುಗಳ ನಂತರ, ಸುಮಾರು 45 ಕಿಲೋಮೀಟರ್ ದೂರದಲ್ಲಿ 7.5 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿತು.

ಇವು ಕ್ರಮವಾಗಿ 21.9 ಕಿಲೋಮೀಟರ್ ಮತ್ತು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ್ದು, ಭೂಕಂಪದ ಆಘಾತಕ್ಕೆ ಜನರು ಆತಂಕದಿಂದ ಕಿರುಚಾಡಿದರು. ಇದರ ಬೆನ್ನಲ್ಲೇ 20 ಕ್ಕೂ ಹೆಚ್ಚು ಆಫ್ಟರ್ ಶಾಕ್‌ಗಳು (ನಡುಕಗಳು) ಸಂಭವಿಸಿದವು.

ಅವಳಿ ಭೂಕಂಪಗಳ ಹಿನ್ನೆಲೆಯಲ್ಲಿ ವೆನೆಜುಲಾದ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. “ಗಂಭೀರ ಹಾನಿ”ಯಾಗಿರುವ ಕಾರಣ ಮುಖ್ಯ ವಿಮಾನ ನಿಲ್ದಾಣವನ್ನು ಮುಚ್ಚಲಾಗುವುದು ಎಂದು ಅಧ್ಯಕ್ಷೀಯ ಕಚೇರಿ ಪ್ರಕಟಿಸಿದೆ.

ವೆನೆಜುಲಾದ ಅವಳಿ ಭೂಕಂಪಗಳು ಸಂಭವಿಸಿದ ಕೆಲವೇ ಕ್ಷಣಗಳಲ್ಲಿ, ಉತ್ತರ ಜಪಾನ್‌ನಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದೆ, ಆದರೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

Team Udayaprabha
";