ಕಾರವಾರ: ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಹುಬ್ಬಳ್ಳಿ–ಅಂಕೋಲಾ ವಿಶೇಷ ರೈಲ್ವೆ ಯೋಜನೆ ಇದೀಗ ಮತ್ತೊಂದು ಹಂತಕ್ಕೆ ಮುಂದಾಗಿದೆ. 163 ಕಿ.ಮೀ ಉದ್ದದ ಈ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ನೈಋತ್ಯ ರೈಲ್ವೆ ಅಧಿಸೂಚನೆ ಹೊರಡಿಸಿದೆ.
ಹುಬ್ಬಳ್ಳಿ–ಅಂಕೋಲಾ ನಡುವೆ ವಿದ್ಯುದ್ದೀಕರಣ ಸಹಿತ ಹೊಸ ಬ್ರಾಡ್‌ಗೇಜ್ ಡಬಲ್ ಲೈನ್ ನಿರ್ಮಿಸುವ ಯೋಜನೆ ಇದಾಗಿದ್ದು, ಒಟ್ಟು ಅಂದಾಜು ವೆಚ್ಚ ₹16,435 ಕೋಟಿ ಎಂದು ರೈಲ್ವೆ ಸಚಿವಾಲಯ ಅಂದಾಜಿಸಿದೆ.
ಯೋಜನೆಯಡಿ ಹುಬ್ಬಳ್ಳಿ ತಾಲೂಕಿನಲ್ಲಿ 13, ಕಲಘಟಗಿ ತಾಲೂಕಿನಲ್ಲಿ 16, ಯಲ್ಲಾಪುರ ತಾಲೂಕಿನಲ್ಲಿ 24 ಹಾಗೂ ಅಂಕೋಲಾ ತಾಲೂಕಿನಲ್ಲಿ 16 ಗ್ರಾಮಗಳ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮತ್ತು ಅಂಕೋಲಾ ತಾಲೂಕುಗಳ ಒಟ್ಟು 40 ಗ್ರಾಮಗಳು ಯೋಜನೆಯ ಭೂಸ್ವಾಧೀನ ವ್ಯಾಪ್ತಿಗೆ ಒಳಪಟ್ಟಿವೆ. ಯಲ್ಲಾಪುರ ತಾಲೂಕಿನ ಹೊಸಳ್ಳಿ, ಕಿರವತ್ತಿ, ಕೋಲ್ವೇರಿ, ರಾಮನಕೊಪ್ಪ, ಕನ್ನಡಗಲ್, ಕೊಂಡೆಮನೆ, ಯಲ್ಲಾಪುರ, ಚಂದಗುಳಿ, ಸಬಗೇರಿ, ಗೋಪಡಮನೆ, ಹಿತ್ತಲಕರಗದ್ದೆ, ಇಡಗುಂದಿ, ಜೋಗದಮನೆ, ಕೊಮ್ಮಾಡಿ, ಅರಬೈಲ, ತೆಲಂಗಾರ, ವಜ್ರಳ್ಳಿ, ಹೊನ್ನಗದ್ದೆ, ಅಂಬಾಗಾವ, ಗುಳ್ಳಾಪುರ, ಕೊಡಗದ್ದೆ, ಕಳಚೆ ಹಾಗೂ ಮಾವಿನಮನೆ ಸೇರಿದಂತೆ 24 ಗ್ರಾಮಗಳು ಇದರ ವ್ಯಾಪ್ತಿಯಲ್ಲಿವೆ.
ಅಂಕೋಲಾ ತಾಲೂಕಿನ ಸುಂಕನಾಳ, ಕಟ್ಟಿನಹಕ್ಕಲ, ಹೆಬ್ಬುಳ, ಕವಳಳ್ಳಿ, ಅಗಸೂರ, ಹೆಗ್ಗರಮಕಿಗದ್ದೆ, ಅದ್ದೂರ, ನಾವಗದ್ದೆ, ಬೋಗ್ರಿಬೈಲ, ಅಲಗೇರಿ, ಶಿರಕುಳಿ, ಬಾಳೆಗುಳಿ, ಶೆಡಗೇರಿ, ಹೊಸಗದ್ದೆ, ಬೋಳೆ ಹಾಗೂ ಅಂಕೋಲಾ ಗ್ರಾಮಗಳು ಭೂಸ್ವಾಧೀನಕ್ಕೆ ಒಳಪಡಲಿವೆ.
1997-98ರಲ್ಲೇ ಮಂಜೂರಾಗಿದ್ದ ಯೋಜನೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಆಗ ಯೋಜನೆಯ ನಿರ್ಮಾಣ ವೆಚ್ಚ ₹483 ಕೋಟಿ ಎಂದು ಅಂದಾಜಿಸಲಾಗಿತ್ತು. ಇದೀಗ ಯೋಜನೆಯ ಅಂದಾಜು ವೆಚ್ಚ ₹16,435 ಕೋಟಿಗೆ ಏರಿಕೆಯಾಗಿದೆ.
ಯೋಜನೆಗೆ ಒಟ್ಟು 2,532 ಎಕರೆ ಭೂಮಿ ಅಗತ್ಯವಿದ್ದು, ಇದರಲ್ಲಿ 1,466 ಎಕರೆ ಅರಣ್ಯ ಭೂಮಿ, 596 ಎಕರೆ ಖಾಸಗಿ ಭೂಮಿ ಹಾಗೂ 470 ಎಕರೆ ಸರ್ಕಾರಿ ಜಾಗ ಸೇರಿದೆ. ಯೋಜನೆಯಿಂದ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪರಿಸರ ಮತ್ತು ವನ್ಯಜೀವಿ ಅನುಮತಿಗಳೂ ಪ್ರಮುಖವಾಗಿವೆ.
ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯಿಂದ ವನ್ಯಜೀವಿ ಅನುಮೋದನೆ ಹಾಗೂ ಕೇಂದ್ರ ಅರಣ್ಯ ಸಚಿವಾಲಯದಿಂದ ಅರಣ್ಯ ಅನುಮೋದನೆ ಪಡೆಯಲು ರೈಲ್ವೆ ಇಲಾಖೆ ಜುಲೈ 10ರಂದು ಅರ್ಜಿ ಸಲ್ಲಿಸಿತ್ತು.
ಇದೀಗ ಹೊರಡಿಸಿರುವ ಅಧಿಸೂಚನೆಯ ಮೂಲಕ ಭೂಸ್ವಾಧೀನ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಲಾಗಿದೆ. ಯೋಜನೆಗಾಗಿ ಹೆಚ್ಚಿನ ಪ್ರಮಾಣದ ಮರಗಿಡಗಳನ್ನು ತೆರವುಗೊಳಿಸಬೇಕಾಗುವ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಕುರಿತ ಚರ್ಚೆಯೂ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.


,


















