| Latest Version 9.0.7 |

National News

ಲಂಡನ್-ಬಾಂಗ್ಲಾದೇಶ ವಿಮಾನ ಹಾರಾಟದಲ್ಲಿದ್ದಾಗಲೇ ಪ್ರಯಾಣಿಕರಿಬ್ಬರ ಮಧ್ಯೆ ಮಾರಾಮಾರಿ 

 

 

ಲಂಡನ್ : ಲಂಡನ್‌ನಿಂದ ಬಾಂಗ್ಲಾದೇಶಕ್ಕೆ ತೆರಳುತ್ತಿದ್ದ ಬಿಮಾನ್ ಬಾಂಗ್ಲಾದೇಶ ಏರ್‌ಲೈನ್ಸ್‌ ವಿಮಾನದಲ್ಲಿ ಇಬ್ಬರು ಪ್ರಯಾಣಿಕರ ನಡುವೆ ನಡೆದ ಮಾರಾಮಾರಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆಯು ವಿಮಾನವು ಆಗಸದಲ್ಲಿ ಹಾರಾಟ ನಡೆಸುತ್ತಿದ್ದಾಗ ನಡೆದಿದ್ದು, ಜಗಳಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವೈರಲ್ ಆಗಿರುವ ವಿಡಿಯೊದಲ್ಲಿ ಇಬ್ಬರು ಪ್ರಯಾಣಿಕರು ಮೊದಲು ತೀವ್ರ ವಾಗ್ವಾದದಲ್ಲಿ ತೊಡಗಿರುವುದು ಕಂಡುಬಂದಿದ್ದು, ಬಳಿಕ ಅದು ಕೈಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿದೆ. ನಂತರ ಮಾರಾಮಾರಿಯೇ ನಡೆದಿದೆ.

ಈ ಗಲಾಟೆಯಿಂದ ವಿಮಾನದಲ್ಲಿದ್ದ ಇತರ ಪ್ರಯಾಣಿಕರಲ್ಲಿ, ವಿಶೇಷವಾಗಿ ಮಕ್ಕಳು ಮತ್ತು ವಯೋವೃದ್ಧರಲ್ಲಿ ಆತಂಕ ಉಂಟಾಯಿತು ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.

 

ವಿಡಿಯೊದಲ್ಲಿ ಕಪ್ಪು ಬಣ್ಣದ ಟಿ-ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬರು ತಮ್ಮ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಬಿಳಿ ಶರ್ಟ್ ಧರಿಸಿದ್ದ ಮತ್ತೊಬ್ಬ ಪ್ರಯಾಣಿಕರ ಮೇಲೆ ಹಲ್ಲೆ ನಡೆಸುತ್ತಿರುವುದು ಕಾಣಿಸುತ್ತದೆ. ಜಗಳದ ವೇಳೆ ಅವರ ಟಿ-ಶರ್ಟ್ ಕೂಡ ಹರಿದಿರುವುದು ಗೋಚರಿಸಿದೆ.

ಸ್ವಲ್ಪ ಸಮಯದವರೆಗೆ ಮುಂದುವರಿದ ಈ ಹೊಡೆದಾಟವನ್ನು ನಿಯಂತ್ರಿಸಲು ಕ್ಯಾಬಿನ್ ಸಿಬ್ಬಂದಿ ಹಾಗೂ ಇತರ ಪ್ರಯಾಣಿಕರು ಮಧ್ಯಪ್ರವೇಶಿಸಿದರು. ಬಳಿಕ ಇಬ್ಬರನ್ನೂ ಪ್ರತ್ಯೇಕಗೊಳಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು.

 

ವಿಮಾನದ ಒಳಭಾಗದಲ್ಲಿ ಈ ಗಲಾಟೆ ನಡೆಯುತ್ತಿದ್ದ ವೇಳೆ ಇತರ ಪ್ರಯಾಣಿಕರು ಆತಂಕದಿಂದ ಪ್ರತಿಕ್ರಿಯಿಸುತ್ತಿರುವ ದೃಶ್ಯಗಳೂ ವಿಡಿಯೊದಲ್ಲಿ ದಾಖಲಾಗಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಮಾನ್ ಬಾಂಗ್ಲಾದೇಶ ಏರ್‌ಲೈನ್ಸ್‌ನ ಸಾರ್ವಜನಿಕ ಸಂಪರ್ಕ ವಿಭಾಗದ ಮಹಾಪ್ರಬಂಧಕ ಮಹಬುಬುದ್ದಿನ್ ಅಹ್ಮದ್, ಢಾಕಾ ಟ್ರಿಬ್ಯೂನ್ ಸಂಪರ್ಕಿಸಿದ ಸಂದರ್ಭದಲ್ಲಿ ಈ ಘಟನೆಯ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ ಎಂದು ತಿಳಿಸಿದ್ದಾರೆ.

Team Udayaprabha
";