ಬೆಳಗಾವಿ: ಸೆ.16 ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ನಡೆದಿದ್ದ ಭೀಕರ ತಂದೆ ಮಗಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡ ನಿವಾಸಿಯಾದ ರುದ್ರಪ್ಪ ಶಿವನಪ್ಪ ಕುಂದರಗಿ ಹಾಗೂ ಅವರ ಮಗಳು ಶಶಿಕಲಾ ಅವರು ಅವರಾದಿ ಗ್ರಾಮದ ಆಸ್ತಿ ನಂಬರ್ 135 ರ ಹೆಸರು ದಾಖಲಾತಿ ಅರ್ಜಿಯ ವಿಚಾರಣೆಗಾಗಿ ಅವರಾದಿ ಗ್ರಾಮ ಪಂಚಾಯತಿ ಕಚೇರಿಗೆ ಆಗಮಿಸಿದ್ದರು.
ಈ ವೇಳೆ ಆಸ್ತಿ ವಿಚಾರವಾಗಿ ಗಲಾಟೆ ಮಾಡಿದ ಆರೋಪಿಗಳಾದ ಬಸಪ್ಪ ಶಿವನಪ್ಪ ಕುಂದರಗಿ, ಸಂಗಪ್ಪ ಶಿವನಪ್ಪ ಕುಂದರಗಿ ಮತ್ತು ಮಡಿವಾಳಪ್ಪ ಕುಂದರಗಿ ಎಂಬುವವರು ತಮ್ಮ ಕೈಯಲ್ಲಿದ್ದ ಕೊಡಗೋಲು ಹಾಗೂ ಕಲ್ಲುಗಳಿಂದ ರುದ್ರಪ್ಪ ಹಾಗೂ ಶಶಿಕಲಾ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತೀವ್ರ ಹಲ್ಲೆಯಿಂದಾಗಿ ರುದ್ರಪ್ಪ ಮತ್ತು ಶಶಿಕಲಾ ಸ್ಥಳದಲ್ಲೇ ಮೃತಪಟ್ಟಿದ್ದರು.
ಗಲಾಟೆ ಬಿಡಿಸಲು ಬಂದ ರಾಹುಲ್ ಎಂಬುವವರ ಮೇಲೆಯೂ ಕೊಲೆ ಮಾಡುವ ಉದ್ದೇಶದಿಂದ ಕೊಡಗೋಲಿನಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿ ಆರೋಪಿಗಳ ಬಂಧನಕ್ಕೆ ಬಲೆ ಬಿಸಿದ ಕಿತ್ತೂರು ಪೊಲೀಸರು. ಆರೋಪಿಗಳಾದ ಬಸಪ್ಪ ಶಿವನಪ್ಪ ಕುಂದರಗಿ, ಸಂಗಪ್ಪ ಶಿವನಪ್ಪ ಕುಂದರಗಿ ಮತ್ತು ಮಡಿವಾಳಪ್ಪ ಕುಂದರಗಿ ಇವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್. ಬಿ. ಬಸರಗಿ, ಬೈಲಹೊಂಗಲ ಪೊಲೀಸ್ ಉಪಾಧೀಕ್ಷಕ ಡಾ. ವೀರಯ್ಯ ಹಿರೇಮಠ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ಕಿತ್ತೂರ ವೃತ್ತದ ಸಿ.ಪಿ.ಐ ಶಿವಾನಂದ ಬಿ ಗುಡಗನಟ್ಟಿ, ಕಿತ್ತೂರ ಠಾಣೆಯ ಪಿ.ಎಸ್.ಐ (ಕಾ&ಸು) ಭರತ್ ಎಸ್. ಪಿ.ಎಸ್.ಐ (ಸಿಬಿ) ಜಿ. ಜಿ. ಹಂಪಣ್ಣವರ ಹಾಗೂ ಠಾಣೆಯ ಸಿಬ್ಬಂದಿಯನ್ನೊಳಗೊಂಡ ತಂಡವು ಚುರುಕಿನ ಕಾರ್ಯಾಚರಣೆ ನಡೆಸಿ, ಆರೋಪಿಗಳಾದ ಬಸಪ್ಪ ಶಿವನಪ್ಪ ಕುಂದರಗಿ, ಸಂಗಪ್ಪ ಶಿವನಪ್ಪ ಕುಂದರಗಿ ಮತ್ತು ಮಡಿವಾಳಪ್ಪ ಕುಂದರಗಿ ಇವರುಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಜೋಡಿ ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಶ್ರಮಿಸಿದ ತನಿಖಾ ತಂಡವನ್ನು ಶ್ಲಾಘಿಸಲಾಗಿದೆ.


,


















