| Latest Version 9.0.7 |

National News

ನರೇಂದ್ರ ಹೆಸರೇ ನನಗೆ ಆಗ್ಬರಲ್ಲ ; ಪಾಕ್ ಬಾಕ್ಸರ್ ಹೇಳಿದ್ದನ್ನು ಮೋದಿಗೆ ಹೇಳಿದ ಭಾರತದ ಬಾಕ್ಸರ್; ಮೋದಿ ಪ್ರತಿಕ್ರಿಯೆ ನೋಡಿ

 

 

ನವದೆಹಲಿ: ಕ್ರೀಡಾಂಗಣದಲ್ಲಿ ನಡೆಯುವ ರೋಚಕ ಹೋರಾಟಗಳು ಕೇವಲ ಗೆಲುವು–ಸೋಲಿನ ಕಥೆಗಳಾಗಿ ಉಳಿಯುವುದಿಲ್ಲ. ಹಲವು ಸಂದರ್ಭಗಳಲ್ಲಿ ಕ್ರೀಡಾಪಟುಗಳ ನಡುವಿನ ಸ್ವಾರಸ್ಯಕರ ಘಟನೆಗಳು ದಶಕಗಳವರೆಗೆ ನೆನಪಿನಲ್ಲಿ ಉಳಿಯುತ್ತವೆ. ಅಂತಹದ್ದೇ ಒಂದು ತಮಾಷೆಯ ಪ್ರಸಂಗವನ್ನು ಭಾರತೀಯ ಬಾಕ್ಸರ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ ನರೇಂದ್ರ ಬೇರವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಹಂಚಿಕೊಂಡಿದ್ದು, ಅದನ್ನು ಕೇಳಿ ಪ್ರಧಾನಿ ಮೋದಿ ಅವರಿಗೂ ನಗೆ ತಡೆಯಲಾಗಲಿಲ್ಲ.

2015ರ ವಿಶ್ವ ಮಿಲಿಟರಿ ಗೇಮ್ಸ್‌ನಲ್ಲಿ ನಡೆದ ಘಟನೆ ಇದಾಗಿದೆ. ಸ್ಪರ್ಧೆಯ ಮೊದಲ ಸುತ್ತಿನಲ್ಲೇ ಬೇರವಾಲ್ ಅವರಿಗೆ ಪಾಕಿಸ್ತಾನದ ಬಾಕ್ಸರ್ ಎದುರಾಳಿಯಾಗಿದ್ದರು. ಭಾರತ–ಪಾಕಿಸ್ತಾನ ನಡುವಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಈ ಪಂದ್ಯವನ್ನು ಯಾವುದೇ ಕಾರಣಕ್ಕೂ ಸೋಲಬಾರದು ಎಂದು ಭಾರತೀಯ ಸೇನೆಯ ಅಧಿಕಾರಿಗಳು ಅವರಿಗೆ ಸೂಚಿಸಿದ್ದರು ಎಂದು ಬೇರವಾಲ್ ನೆನಪಿಸಿಕೊಂಡಿದ್ದಾರೆ.

 

“ಪಾಕಿಸ್ತಾನದ ವಿಷಯ ಬಂದಿದ್ದರಿಂದ ಒಂದು ಘಟನೆ ನೆನಪಾಯಿತು ಸರ್. 2015ರ ವಿಶ್ವ ಮಿಲಿಟರಿ ಗೇಮ್ಸ್‌ನಲ್ಲಿ ನನ್ನ ಮೊದಲ ಪಂದ್ಯ ಪಾಕಿಸ್ತಾನದ ಬಾಕ್ಸರ್ ವಿರುದ್ಧ ನಿಗದಿಯಾಗಿತ್ತು. ಮಿಲಿಟರಿ ಗೇಮ್ಸ್ ಆಗಿದ್ದರಿಂದ ಅಧಿಕಾರಿಗಳು ನನಗೆ ಕರೆ ಮಾಡಿ, ‘ಪಾಕಿಸ್ತಾನದ ವಿರುದ್ಧ ಸೋಲಬಾರದು’ ಎಂದು ಹೇಳಿದ್ದರು” ಎಂದು ನರೇಂದ್ರ ಬೇರವಾಲ್ ವಿವರಿಸಿದರು.

ಅಧಿಕಾರಿಗಳ ನಿರೀಕ್ಷೆಯಂತೆ ಬೇರವಾಲ್ ಪಂದ್ಯದಲ್ಲಿ ಗೆಲುವು ಸಾಧಿಸಿದರು. ಮೊದಲ ಸುತ್ತನ್ನು 4–1ರಿಂದ ಮತ್ತು ಎರಡನೇ ಸುತ್ತನ್ನು 3–2ರಿಂದ ಗೆದ್ದ ಅವರು ಪಂದ್ಯವನ್ನು ತಮ್ಮದಾಗಿಸಿಕೊಂಡರು. ಆದರೆ ಹೋರಾಟದ ವೇಳೆ ಇಬ್ಬರ ಮುಖಕ್ಕೂ ಗಾಯಗಳಾಗಿ ಕಟ್‌ಗಳಾಗಿದ್ದವು. ಹೀಗಾಗಿ ಪಂದ್ಯ ಮುಗಿದ ಬಳಿಕ ಇಬ್ಬರೂ ಒಟ್ಟಿಗೆ ಆಸ್ಪತ್ರೆಗೆ ತೆರಳಿ ಹೊಲಿಗೆ ಹಾಕಿಸಿಕೊಂಡರು.

 

 

ಆಸ್ಪತ್ರೆಯಲ್ಲಿದ್ದಾಗ ನಡೆದ ಮಾತುಕತೆಯೇ ಈ ಕಥೆಯ ಪ್ರಮುಖ ಆಕರ್ಷಣೆ.

2014ರಲ್ಲಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಪ್ರಧಾನಮಂತ್ರಿಯಾದ ಸಂದರ್ಭವನ್ನು ಉಲ್ಲೇಖಿಸಿದ ಬೇರವಾಲ್, ತಮ್ಮೊಂದಿಗಿದ್ದ ಸೇನಾ ತರಬೇತುದಾರರ ಹೆಸರು ಕೂಡ ನರೇಂದ್ರ ರಾಣಾ ಆಗಿತ್ತು ಎಂದು ಹೇಳಿದರು. ಇದನ್ನು ಗಮನಿಸಿದ ಪಾಕಿಸ್ತಾನಿ ಬಾಕ್ಸರ್ ಸ್ವಲ್ಪ ಹೊತ್ತು ಯೋಚಿಸಿ, “ಸಹೋದರ, ಒಂದು ಮಾತು ಹೇಳಬಹುದೇ?” ಎಂದು ಬೇರಿವಾಲ್‌ ಅವರನ್ನು ಕೇಳಿದ್ದಾನೆ. ಬೇರವಾಲ್, “ಹೇಳಿ,” ಎಂದಿದ್ದಾರೆ.

ಆಗ ಪಾಕಿಸ್ತಾನಿ ಬಾಕ್ಸರ್ ಹಾಸ್ಯಮಯವಾಗಿ, “ನಿಮ್ಮ ಹೆಸರು ನರೇಂದ್ರ, ನಿಮ್ಮ ಕೋಚ್ ಹೆಸರು ನರೇಂದ್ರ, ನಿಮ್ಮ ಪ್ರಧಾನಮಂತ್ರಿಯ ಹೆಸರೂ ನರೇಂದ್ರ. ನನಗೆ ‘ನರೇಂದ್ರ’ ಎಂಬ ಹೆಸರೇ ಇಷ್ಟವಿಲ್ಲದಂತಾಗಿದೆ” ಎಂದು ಹೇಳಿದ್ದಾನೆ.

ಪಾಕಿಸ್ತಾನಿ ಬಾಕ್ಸರ್‌ನ ಈ ತಮಾಷೆಯ ಮಾತನ್ನು ನೆನಪಿಸಿಕೊಂಡು ಬೇರವಾಲ್ ಕಥೆ ಹೇಳುತ್ತಿದ್ದಂತೆ, ಅಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ನಗೆ ತಡೆಯಲಾಗಲಿಲ್ಲ.

 

ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜಕೀಯ ಸಂಬಂಧಗಳು ಹಲವು ದಶಕಗಳಿಂದ ಉದ್ವಿಗ್ನವಾಗಿದ್ದರೂ, ಕ್ರೀಡಾಂಗಣದಲ್ಲಿ ಎದುರಾಳಿಗಳಾಗಿದ್ದ ಇಬ್ಬರು ಬಾಕ್ಸರ್‌ಗಳು ಪಂದ್ಯ ಮುಗಿದ ಬಳಿಕ ಗಾಯಗಳಿಗೆ ಚಿಕಿತ್ಸೆ ಪಡೆಯಲು ಒಟ್ಟಿಗೆ ಆಸ್ಪತ್ರೆಗೆ ತೆರಳಿ ಹಂಚಿಕೊಂಡ ಈ ಹಾಸ್ಯಮಯ ಕ್ಷಣ ಕ್ರೀಡೆಯ ಮಾನವೀಯ ಮುಖವನ್ನು ತೆರೆದಿಟ್ಟಿತು.

ನವದೆಹಲಿ ನಿವಾಸದಲ್ಲಿ ನಡೆದ ಈ ಸನ್ಮಾನ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಹಲವು ಕ್ರೀಡಾಪಟುಗಳೊಂದಿಗೆ ವೈಯಕ್ತಿಕವಾಗಿ ಸಂವಾದ ನಡೆಸಿದರು. ದೇಶದ ಕ್ರೀಡಾ ಪಯಣವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಕ್ರೀಡಾಪಟುಗಳು ನೀಡುತ್ತಿರುವ ಕೊಡುಗೆಯನ್ನು ಅವರು ಶ್ಲಾಘಿಸಿದರು. ಬೇರವಾಲ್ ಹಂಚಿಕೊಂಡ 2015ರ ಈ ಪ್ರಸಂಗ ಮಾತ್ರ ಸಮಾರಂಭದ ಗಂಭೀರ ವಾತಾವರಣದ ನಡುವೆ ನಗುವಿನ ಹೊನಲು ಹರಿಸಿದ ವಿಶೇಷ ಕ್ಷಣವಾಗಿ ಗಮನ ಸೆಳೆಯಿತು.

Team Udayaprabha
";