| Latest Version 9.0.7 |

State News

ಶ್ರೀ ಕಾಡಿಕಾಂಬಾ ದೇವಸ್ಥಾನದಲ್ಲಿ ನಿನಾದದ ಭಕ್ತಿ ಸಂಗೀತ

ಶಿರೂರು: ಶ್ರೀ ಕಾಡಿಕಾಂಬಾ ದೇವಸ್ಥಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ೩೫ನೇ ವರ್ಷದ ಶ್ರೀ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಭಕ್ತಿಭಾವದ ವಿಶೇಷ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಭಟ್ಕಳದ ನಿನಾದ ಕಲ್ಚರಲ್ ಅಕಾಡೆಮಿ ವತಿಯಿಂದ ಭಕ್ತಿ ಗೀತೆಗಳ ಗಾಯನ ಹಾಗೂ ಸುಮಧುರ ಸಂಗೀತ ಕಾರ್ಯಕ್ರಮ ನಡೆಯಿತು.
ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಉಮೇಶ ಮುಂಡಳ್ಳಿ ಅವರೊಂದಿಗೆ ನಿನಾದ ಉಮೇಶ ಹಾಗೂ ಉತ್ಥಾನ ಉಮೇಶ,ವಾಸುದೇವ ಪೂಜಾರಿ ಗಾಯನದಲ್ಲಿ ಸಾಥ್ ನೀಡಿದರು. ಹಿರಿಯ ಕಲಾವಿದ ಉಮೇಶ ಮೇಸ್ತ ಅವರು ಹಾರ್ಮೋನಿಯಂ ವಾದನದೊಂದಿಗೆ ಗಾಯನದಲ್ಲಿಯೂ ಸಹಕರಿಸಿದರು. ಶ್ಯಾಮ್ ಮೇಸ್ತ ಅವರು ತಬಲ ಸಾಥ್ ನೀಡಿದರು.
ಭಕ್ತಿಗೀತೆಗಳ ಮೂಲಕ ಶ್ರೀ ಗಣಪತಿಯ ಆರಾಧನೆ ಹಾಗೂ ಸಂಗೀತ ಸೇವೆ ಸಲ್ಲಿಸಿದ ಕಲಾವಿದರ ಗಾಯನಕ್ಕೆ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಯಿತು. ಕಾರ್ಯಕ್ರಮವು ಭಕ್ತರಲ್ಲಿ ಆಧ್ಯಾತ್ಮಿಕ ಭಾವನೆ ಮೂಡಿಸುವುದರೊಂದಿಗೆ ಗಣೇಶೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ಕಾರ್ಯಕ್ರಮದ ನಂತರ ಶ್ರೀ ಕಾಡಿಕಾಂಬಾ ದೇವಸ್ಥಾನದ ವತಿಯಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಉಮೇಶ ಮುಂಡಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಿನಾದ ಕಲ್ಚರಲ್ ಅಕಾಡೆಮಿಯ ಕಲಾವಿದರ ಸಂಗೀತ ಸೇವೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತರು ಪ್ರಶಂಸಿಸಿದರು.

Team Udayaprabha
";