ಗದಗ : ಕೆ.ಎಲ್.ಇ. ಸಂಸ್ಥೆಯ ಎಸ್. ಎ. ಮಾನ್ವಿ ಕಾನೂನು ಮಹಾವಿದ್ಯಾಲಯ, ಗದಗದ ಆಂತರಿಕ ಗುಣಮಟ್ಟ ಭರವಸೆ ಕೋಶದ (IQAC) ವತಿಯಿಂದ ನೂತನವಾಗಿ ಪ್ರವೇಶ ಪಡೆದ ಪ್ರಥಮ ವರ್ಷದ ಎಲ್ಎಲ್.ಬಿ. ಹಾಗೂ ಬಿ.ಕಾಂ. ಎಲ್ಎಲ್.ಬಿ. ವಿದ್ಯಾರ್ಥಿಗಳಿಗಾಗಿ “ಕಾನೂನಿನ ಅರ್ಥೈಸುವಿಕೆ: ನೂತನ ವಿದ್ಯಾರ್ಥಿಗಳಿಗೆ ಅಭಿಮುಖೀಕರಣ ಕಾರ್ಯಕ್ರಮ” (Decoding the Law: Orientation Programme for Freshers) ವನ್ನು ಮಂಗಳವಾರ, ಅಕ್ಟೋಬರ್ 13, 2026 ರಂದು ಬೆಳಿಗ್ಗೆ 9:30 ಗಂಟೆಗೆ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿ ಡಾ. ಜಗದೀಶ ಎಸ್. ಹಾಲಶೆಟ್ಟಿ ಮಾತನಾಡಿ, ಯಶಸ್ವಿ ಕಾನೂನು ವೃತ್ತಿಪರರಾಗಿ ರೂಪುಗೊಳ್ಳಲು ಕಾನೂನು ಜ್ಞಾನ, ಶಿಸ್ತು, ಪರಿಣಾಮಕಾರಿ ಸಂವಹನ ಕೌಶಲ್ಯ, ವಿಮರ್ಶಾತ್ಮಕ ಚಿಂತನೆ ಹಾಗೂ ವೃತ್ತಿಪರ ನೈತಿಕ ಮೌಲ್ಯಗಳು ಅತ್ಯಂತ ಅಗತ್ಯವಾಗಿವೆ ಎಂದು ಪ್ರತಿಪಾದಿಸಿದರು.
ಅಣಕು ನ್ಯಾಯಾಲಯ (Moot Court), ಅಣಕು ವಿಚಾರಣೆ (Mock Trial), ಕಕ್ಷಿದಾರರ ಸಮಾಲೋಚನೆ (Client Counselling), ಕಾನೂನು ಸಂಶೋಧನೆ ಹಾಗೂ ವೃತ್ತಿಪರ ತರಬೇತಿ (Internship) ಮುಂತಾದ ಪ್ರಾಯೋಗಿಕ ಚಟುವಟಿಕೆಗಳು ಕಾನೂನು ವಿದ್ಯಾರ್ಥಿಗಳ ವೃತ್ತಿಪರ ಕೌಶಲ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ವಿವರಿಸಿದರು. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತರಾಗದೆ, ಪ್ರಾಯೋಗಿಕ ಕಾನೂನು ಜ್ಞಾನವನ್ನು ಬೆಳೆಸಿಕೊಳ್ಳಬೇಕು. ನ್ಯಾಯದ ಪರಿಕಲ್ಪನೆ, ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ಸಾಮಾಜಿಕ ಹೊಣೆಗಾರಿಕೆಯ ಬಗ್ಗೆ ದೃಢವಾದ ಬದ್ಧತೆಯನ್ನು ಹೊಂದಬೇಕು ಎಂದು ಕರೆ ನೀಡಿದರು.
ಸ್ಥಳೀಯ ಆಡಳಿತ ಮಂಡಳಿಯ ಸದಸ್ಯ ಬಿ. ಜಿ. ಶೆಲ್ಲಿಕೇರಿ ಮಾತನಾಡಿ, ಮಹಾವಿದ್ಯಾಲಯವು ಒದಗಿಸುವ ಶೈಕ್ಷಣಿಕ ಅವಕಾಶಗಳು ಹಾಗೂ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಜ್ಞಾನ, ಕೌಶಲ್ಯ ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್. ಎಂ. ಹುಲ್ಲೂರ ಮಾತನಾಡಿ, ಗುಣಮಟ್ಟದ ಕಾನೂನು ಶಿಕ್ಷಣವನ್ನು ಒದಗಿಸುವುದು ಹಾಗೂ ವೃತ್ತಿಪರ ಶ್ರೇಷ್ಠತೆಯನ್ನು ಸಾಧಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಮಹಾವಿದ್ಯಾಲಯದ ಪ್ರಮುಖ ಧ್ಯೇಯವಾಗಿದೆ ಎಂದು ತಿಳಿಸಿದರು.
ಪ್ರಥಮ ವರ್ಷದ ಎಲ್ಎಲ್.ಬಿ. ವಿದ್ಯಾರ್ಥಿನಿಯರಾದ ಪ್ರೀತಿ ಹಾಗೂ ಮಂಗಳಾ ಅವರ ಪ್ರಾರ್ಥಿಸಿದರು. ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಡಾ. ವಿಜಯ ವಿ. ಮುರದಂಡೆ ಸ್ವಾಗತಿಸಿ, ಪರಿಚಯಿಸಿದರು.
ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಲಾಯಿತು. ಪ್ರಥಮ ವರ್ಷದ ಬಿ.ಕಾಂ. ಎಲ್ಎಲ್.ಬಿ. ವಿದ್ಯಾರ್ಥಿನಿ ಐಶ್ವರ್ಯ ವಂದಿಸಿದರು. ಪ್ರಥಮ ವರ್ಷದ ಎಲ್ಎಲ್.ಬಿ. ವಿದ್ಯಾರ್ಥಿನಿಯರಾದ ಸೌಮ್ಯ ಹಾಗೂ ವಿನುತಾ ನಿರೂಪಿಸಿದರು.


,


















