ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಅವರು ಇಂದು, ಶುಕ್ರವಾರ ಬೆಂಗಳೂರಿನ ಲೋಕಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ವಿಭು ಬಖ್ರು ಅವರು ಸುಧಾ ಯಾದವ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಲೋಕಭವನದ ಗ್ಲಾಸ್ ಹೌಸ್ನಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನಿರ್ಗಮಿತ ರಾಜ್ಯಪಾಲ ಥಾವರಚಂದ ಗೆಹ್ಲೋಟ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರು ಹಾಗೂ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿರುವ ಸುಧಾ ಯಾದವ್ ಅವರು, ಪ್ರಸ್ತುತ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ರೂರ್ಕಿ ಎಂದು ಕರೆಯಲಾಗುವ ಅಂದಿನ ರೂರ್ಕಿ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಅವರು ಚಿನ್ನದ ಪದಕವನ್ನೂ ಗಳಿಸಿದ್ದರು. ಸುಧಾ ಯಾದವ್ ಅವರು ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಉಪ ಕಮಾಂಡೆಂಟ್ ಆಗಿದ್ದ ಸುಖ್ಬೀರ್ ಸಿಂಗ್ ಯಾದವ್ ಅವರ ಪತ್ನಿ.
1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಸುಖ್ಬೀರ್ ಸಿಂಗ್ ಯಾದವ್ ದೇಶಕ್ಕಾಗಿ ಹೋರಾಡಿ ಹುತಾತ್ಮರಾಗಿದ್ದರು. ಮರಣೋತ್ತರವಾಗಿ ಅವರಿಗೆ ಸೇನಾ ಪದಕ ನೀಡಿ ಗೌರವಿಸಲಾಗಿತ್ತು. ಪತಿಯ ನಿಧನದ ಬಳಿಕ ಸುಧಾ ಯಾದವ್ ಅವರು ಸಾರ್ವಜನಿಕ ಜೀವನ ಪ್ರವೇಶಿಸಿದರು.
ಸುಧಾ ಯಾದವ್ ಅವರು ಬಿಜೆಪಿಯಲ್ಲಿ ಹಲವು ಸಂಘಟನಾತ್ಮಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಪಕ್ಷದ ಇತರೆ ಹಿಂದುಳಿದ ವರ್ಗಗಳ ಮೋರ್ಚಾದ (ಒಬಿಸಿ ಮೋರ್ಚಾ) ರಾಷ್ಟ್ರೀಯ ಉಸ್ತುವಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2022ರಲ್ಲಿ ಅವರನ್ನು ಬಿಜೆಪಿಯ ಸಂಸದೀಯ ಮಂಡಳಿಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಸುಷ್ಮಾ ಸ್ವರಾಜ್ ಬಳಿಕ ಸಂಸದೀಯ ಮಂಡಳಿಯಲ್ಲಿ ಸ್ಥಾನ ಪಡೆದ ಎರಡನೇ ಮಹಿಳೆಯಾಗಿದ್ದಾರೆ.
ಡಾ. ಸುಧಾ ಯಾದವ್ ಅವರು ಕರ್ನಾಟಕದ ರಾಜ್ಯಪಾಲ ಹುದ್ದೆ ಅಲಂಕರಿಸಿದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ವಿ.ಎಸ್. ರಮಾದೇವಿ ಅವರು 1999ರಿಂದ 2002ರವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.
Udaya Prabha > State News > ಕರ್ನಾಟಕದ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ
ಕರ್ನಾಟಕದ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ
Team Udayaprabha16/10/2026
posted on


,


















