| Latest Version 9.0.7 |

State News

ಕಲೆ ಮತ್ತು ಸಾಹಿತ್ಯದ ಭಾಷೆಗೆ ವಿಭಿನ್ನ ಅರ್ಥ

ಬೆಳಗಾವಿ : ಭಾಷೆ ಒಂದು ಪ್ರಭುತ್ವದ ಭಾಷೆಯಾದಾಗ ಅದು ಇಂಪರೇಟಿವ್ ಅಂದರೆ ಆಜ್ಞಾರ್ಥ ಭಾಷೆಯಾಗಲಿದೆ. ಮಾಡು ಇಲ್ಲವೇ ಮಾಡಬೇಡ ಎಂಬುದಾಗಿದೆ. ಭಾಷೆಗೆ ಇದ್ದಕ್ಕಿದ್ದಂತೆ ಅಧಿಕಾರ ಬಂದು ಬಿಡುತ್ತದೆ. ಅದೇ ಕಲೆ ಸಾಹಿತ್ಯದ ಭಾಷೆ ಆಜ್ಞಾರ್ಥ ಭಾಷೆ ಆಗುವುದಿಲ್ಲ ಎಂದು ತುಮಕೂರು ವಿಶ್ವವಿದ್ಯಾಲಯದ ಪ್ರೊ. ನಿತ್ಯಾನಂದ ಶೆಟ್ಟಿ ಅಭಿಪ್ರಾಯಪಟ್ಟರು.

ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಸಂಘವು ಹಾಗೂ ಬೆಳಗಾವಿಯ ನಾಡ ಹಬ್ಬದ ಸಮಿತಿಯ ಸಹಯೋಗದಲ್ಲಿ ಬುಧವಾರ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ನಾಡ ಹಬ್ಬದ ಕಾರ್ಯಕ್ರಮದಲ್ಲಿ “ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಂವರ್ಧನೆ” ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಒಂದು ಪಠ್ಯವನ್ನು ಓದುವಾಗ ಅದಕ್ಕೆ ಅದರದೇ ಅರ್ಥವಿರುವುದಿಲ್ಲ. ಅದನ್ನು ಯಾವ ಮನಸ್ಥಿತಿ, ಯಾವ ದೇಶ- ಕಾಲದಲ್ಲಿದ್ದುಕೊಂಡು ಪಠ್ಯವನ್ನು ಓದುತ್ತೇಯೋ ಅದರಿಂದ ಪಠ್ಯಕ್ಕೆ ಅರ್ಥವೇ ಹೊರತೂ ಪಠ್ಯಕ್ಕೆ ಅದರದೇ ಆದ ಅರ್ಥ ಇರುವುದಿಲ್ಲ. ಅಧಿಕಾರದ ಭಾಷೆಗೆ ಒಂದೇ ಅರ್ಥ. ಕಲೆ ಮತ್ತು ಸಾಹಿತ್ಯದ ಭಾಷೆಗೆ ವಿಭಿನ್ನ ಅರ್ಥಗಳಿವೆ.

ಒಂದು ಕಾಲದಲ್ಲಿ ವಿಶ್ವಾತ್ಮಕ ದೇಶ ಭಾಷೆಯಾಗಿ ಕಾಲ, ದೇಶವನ್ನು ಮೀರಿ ವ್ಯವಹಾರ ಮಾಡುತ್ತಿದ್ದ ಗ್ರೀಕ್, ಲ್ಯಾಟಿನ್, ಪರ್ಷಿಯನ್ , ಸಂಸ್ಕೃತ ಭಾಷೆಯ ಜಾಗದಲ್ಲಿ ಇಂದು ಇಂಗ್ಲಿಷ್ ಭಾಷೆ ಬಂದಿದೆ. ಭಾಷೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ವಿಶ್ವಾತ್ಮಕ ಭಾಷೆಯೊಂದಿಗೆ ಕನ್ನಡಕ್ಕೆ ಒಂದು ವಿಶೇಷವಾದ ಅಂತಾರಾಷ್ಟ್ರೀಯ ಸಂಬಂಧವಿದೆ.

ಡಿಜಿಟಲ್ ತಂತ್ರಜ್ಞಾನ, ಅಂತರ್ಜಾಲ, ಸಾಮಾಜಿಕ ಮಾಧ್ಯಮ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಕನ್ನಡದ ಬಳಕೆಯು ವಿಶ್ವವ್ಯಾಪಿಯಾಗುತ್ತಿದೆ. ಅದು ಇನ್ನಷ್ಟು ಪರಿಣಾಮಕಾರಿಯಾಗಿ ಸಾಗಬೇಕು.ವಿದೇಶಗಳಲ್ಲಿರುವ ಕನ್ನಡಿಗರು ಕನ್ನಡ ಸಂಘಗಳನ್ನು ಸ್ಥಾಪಿಸಿ, ಕನ್ನಡ ರಾಜ್ಯೋತ್ಸವ, ಸಾಹಿತ್ಯ ಸಮ್ಮೇಳನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಭಾಷೆಯ ಕಂಪನ್ನು ಪಸರಿಸುತ್ತಿದ್ದಾರೆ.

ಇವತ್ತು ಕನ್ನಡ ಮನಸ್ಸುಗಳಿಗೆ ಒಂದಿಷ್ಟು ತಂತ್ರಜ್ಞಾನ, ಸ್ವಲ್ಪ್ ಇಂಗ್ಲಿಷ್ ಜ್ಞಾನ ಇದರ ಜೊತೆಗೆ ಸ್ಥಳೀಯ ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯದ ಆಳವಾದ ಜ್ಞಾನ ಇದ್ದಲ್ಲಿ ಅವುಗಳನ್ನು ಕೃತಕ ಬುದ್ಧಿಮತ್ತೆಗೆ ಅಳವಡಿಸಿಕೊಟ್ಟಲ್ಲಿ ಗಂಟೆಗೆ ಆರು ಸಾವಿರ ರೂಪಾಯಿ ಸಂಭಾವನೆ ಪ್ರಸ್ತುತ ನೀಡುತ್ತಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಪ್ರೊ. ವೈ. ಎಸ್. ಬಲವಂತಗೋಳ ಅವರು ನಾಡಹಬ್ಬದ ಆಚರಣಿಯ ಪ್ರಸ್ತುತತೆಯನ್ನು ತಿಳಿಸಿದರು.

ಪ್ರೊ. ಎಸ್. ಎಂ.ಗಂಗಾಧರಯ್ಯ, ‌ವಿರುಪಾಕಯ್ಯ ನೀರಲಗಿಮಠ. ಹೇಮಾ ಸೋನಳ್ಳಿ, ಡಾ.ಎಚ್ .ವೈ. ತಿಮ್ಮಾಪುರ ಉಪಸ್ಥಿತರಿದ್ದರು.

ಕನ್ನಡ ಸಂಘದ ಅಧ್ಯಕ್ಷ
ಡಾ. ಗಜಾನನ ನಾಯ್ಕ ಪ್ರಾಸ್ತಾವಿಕ, ಪರಿಚಯಿಸಿರು, ಸದಸ್ಯ ಕಾರ್ಯದರ್ಶಿ ಡಾ. ಹನುಮಂತಪ್ಪ ಸಂಜೀವಣ್ಣನವರ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು,
ಡಾ. ಎಚ್.ಬಿ. ರಾಜಶೇಖರ ಸ್ವಾಗತಿಸಿದರು , ಡಾ. ಹೇಮಾ ಸೋನಳ್ಳಿ ವಂದಿಸಿದರು. ಸುಪ್ರೀಯಾ ಕಲಾಚಂದ್ರ ಮತ್ತು ಸಂಗಡಿಗರು ನಾಡಗೀತೆ ಹಾಡಿದರು, ಮಲ್ಲಿಕಾರ್ಜುನ ಪೂಜಾರಿ ನಿರೂಪಿಸಿದರು.

Team Udayaprabha
";